ಬೆಂಗಳೂರು: ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ಉತ್ತರ ಪ್ರದೇಶ ವಿರುದ್ಧ 5 ವಿಕೆಟ್‌ಗಳ ಆಘಾತಕಾರಿ ಸೋಲುಂಡ ಆರ್ತಿಥೇಯ ಕರ್ನಾಟಕ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಿಂದ ಹೊರಬಿದ್ದಿದೆ.
ಬೌಲರ್‌ಗಳಿಗೆ ನೆರವಾಗುವ ಟ್ರ್ಯಾಕ್ ಮೇಲೆ ಗೆಲುವಿಗೆ 213 ರನ್ನುಗಳ ಗುರಿ ಪಡೆದ ಉತ್ತರಪ್ರದೇಶ, ಮೂರನೇ ದಿನವೇ 5 ವಿಕೆಟ್ ನಷ್ಟದಲ್ಲಿ ಜಯಭೇರಿ ಮೊಳಗಿಸಿತು. 98 ರನ್ನುಗಳ ಅಮೂಲ್ಯ ಮುನ್ನಡೆ ಪಡೆದ ಬಳಿಕ ಕರ್ನಾಟಕದ ನಿರ್ವಹಣೆ ಕುಸಿಯುತ್ತಲೇ ಹೋಯಿತು. ದ್ವಿತೀಯ ಇನ್ನಿಂಗ್ಸ್‌ನ ಬ್ಯಾಟಿಂಗ್ ಹಾಗೂ ಬೌಲಿಂಗ್ ವೈಫಲ್ಯ ಮನೀಷ್ ಪಾಂಡೆ ಪಡೆಗೆ ಮುಳುವಾಯಿತು.
ದ್ವಿತೀಯ ಸರದಿಯಲ್ಲಿ ಕರ್ನಾಟಕಕ್ಕೆ ಗಳಿಸಲು ಸಾಧ್ಯವಾದದ್ದು 114 ರನ್ ಮಾತ್ರ. ಯುಪಿಗೆ 213 ರನ್ನುಗಳ ಟಾರ್ಗೆಟ್ ಲಭಿಸಿತು. ಎರಡನೇ ದಿನ 21 ವಿಕೆಟ್ ಪತನವಾದುದನ್ನು ಕಂಡಾಗ ಉತ್ತರಪ್ರದೇಶ ಈ ಗುರಿ ತಲುಪುವುದು ಸುಲಭವಲ್ಲ ಎಂದೇ ಭಾವಿಸಲಾಗಿತ್ತು. ಆದರೆ ಕಪ್ತಾನನ ಆಟವಾಡಿದ ಕರಣ್ ಶರ್ಮ, ಪ್ರಿಯಂ ಗರ್ಗ್ ಮತ್ತು ಪ್ರಿನ್ಸ್ ಯಾದವ್ ಸೇರಿಕೊಂಡು ತಂಡವನ್ನು ದಡ ಸೇರಿಸುವಲ್ಲಿ ಯಶಸ್ವಿಯಾದರು. ಕರ್ನಾಟಕ ಬೌಲಿಂಗ್ ಮ್ಯಾಜಿಕ್ ಮಾಡುವಲ್ಲಿ ಎಡವಿತು.
ಕರಣ್ ಶರ್ಮ 163 ಎಸೆತಗಳಿಂದ ಅಜೇಯ 93 ರನ್ ಬಾರಿಸಿದರು (13 ಬೌಂಡರಿ, 1 ಸಿಕ್ಸರ್). ಪ್ರಿಯಂ ಗರ್ಗ್ ಕೊಡುಗೆ 60 ಎಸೆತಗಳಿಂದ 52 ರನ್ (6 ಬೌಂಡರಿ, 2 ಸಿಕ್ಸರ್). 114ಕ್ಕೆ 5 ವಿಕೆಟ್ ಬಿದ್ದಾಗ ಕರ್ನಾಟಕದ ಗೆಲುವಿನ ಸಾಧ್ಯತೆ ಹೆಚ್ಚಿತ್ತು. ಆದರೆ 6ನೇ ವಿಕೆಟ್ ಜೋಡಿಯನ್ನು ಬೇರ್ಪಡಿಸಲು ಸಾಧ್ಯವಾಗಲಿಲ್ಲ.