Advertisement
ಶಿವಮೊಗ್ಗದ “ಕೆಎಸ್‌ಸಿಎ ನವುಲೆ ಸ್ಟೇಡಿಯಂ’ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವ ಕರ್ನಾಟಕದ ನಿರ್ಧಾರ ಯಾವುದೇ ರೀತಿಯಲ್ಲಿ ಫಲ ಕೊಡಲಿಲ್ಲ. ಸೋಮವಾರವಷ್ಟೇ ಟೀಮ್ ಇಂಡಿಯಾಕ್ಕೆ ಕರೆ ಪಡೆದ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಎಂ. ರವಿಕಿರಣ್ ಸೇರಿಕೊಂಡು ರಾಜ್ಯದ ಬ್ಯಾಟಿಂಗ್ ಸರದಿಯ ಮೇಲೆ ಘಾತಕವಾಗಿ ಎರಗಿದರು. ಸಿರಾಜ್ 42 ರನ್ನಿಗೆ 4 ವಿಕೆಟ್ ಕಿತ್ತು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರೆ, ರವಿಕಿರಣ್ 36 ರನ್ ವೆಚ್ಚದಲ್ಲಿ 3 ವಿಕೆಟ್ ಉರುಳಿಸಿದರು. ಟೀಮ್ ಇಂಡಿಯಾದಿಂದ ಬೇರ್ಪಟ್ಟಿರುವ ಪ್ರಗ್ಯಾನ್ ಓಜಾ 31 ರನ್ನಿಗೆ 2 ವಿಕೆಟ್ ಕಿತ್ತರು. ಉಳಿದೊಂದು ವಿಕೆಟ್ ಆಶಿಷ್ ರೆಡ್ಡಿ ಪಾಲಾಯಿತು.
ರಾಜ್ಯದ ಬೌಲರ್‌ಗಳು ಹೈದರಾಬಾದ್ ಮೇಲೆ ತಿರುಗಿ ಬೀಳುವ ಸೂಚನೆಯೊಂದನ್ನು ನೀಡಿದ್ದಾರೆ. ಆರಂಭಿಕರಾದ ತನ್ಮಯ್ ಅಗರ್ವಾಲ್ (1), ಅಕ್ಷತ್ ರೆಡ್ಡಿ (13) ಮತ್ತು ನಾಯಕ ಅಂಬಾಟಿ ರಾಯುಡು (0) ಅಗ್ಗಕ್ಕೆ ಉರುಳಿದ್ದಾರೆ. ಅಸ್ಸಾಂ ವಿರುದ್ಧ ಮಿಂಚಿದ್ದ ಸ್ಪಿನ್ನರ್ ಕೆ. ಗೌತಮ್ 2 ವಿಕೆಟ್ ಹಾರಿಸಿದರು. ಅಗರ್ವಾಲ್ ರನೌಟಾದರು. ಕೀಪರ್ ಕೆ. ಸುಮಂತ್ 34 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಬುಧವಾರದ ಆಟ ಇತ್ತಂಡಗಳ ಪಾಲಿಗೆ ನಿರ್ಣಾಯಕ.
Related Articles
ಕರ್ನಾಟಕಕ್ಕೆ ಆರ್. ಸಮರ್ಥ್ ಮತ್ತು ಕೆ.ಎಲ್. ರಾಹುಲ್ ತೀವ್ರ ಎಚ್ಚರಿಕೆಯ ಆರಂಭ ಒದಗಿಸಿದ್ದರು. ಮೊದಲ 10 ಓವರ್‌ಗಳಲ್ಲಿ ಇವರು ಕ್ರೀಸಿಗೆ ಅಂಟಿಕೊಂಡು ಇನ್ನಿಂಗ್ಸ್ ಬೆಳೆಸುವ ಸೂಚನೆ ರವಾನಿಸಿದರು. ಆದರೆ ಪಂದ್ಯದ 11ನೇ ಓವರಿನ 4ನೇ ಎಸೆತದಲ್ಲಿ ಸಮರ್ಥ್ ಅವರನ್ನು ಲೆಗ್ ಬಿಫೋರ್ ಬಲೆಗೆ ಬೀಳಿಸಿದ ಸಿರಾಜ್ ಹೈದರಾಬಾದ್‌ಗೆ ಮೊದಲ ಯಶಸ್ಸು ತಂದಿತ್ತರು. ಅದೇ ಓವರಿನ ಅಂತಿಮ ಎಸೆತದಲ್ಲಿ ಅಗರ್ವಾಲ್ ವಿಕೆಟನ್ನೂ ಉರುಳಿಸಿದರು. 26 ರನ್ನಿಗೆ ಕರ್ನಾಟಕದ 2 ವಿಕೆಟ್ ಬಿತ್ತು. ಈ ಕುಸಿತದಿಂದ ರಾಜ್ಯ ತಂಡ ಚೇತರಿಸಿಕೊಳ್ಳಲೇ ಇಲ್ಲ.
Advertisement
ಸಂಕ್ಷಿಪ್ತ ಸ್ಕೋರ್: ಕರ್ನಾಟಕ-183 (ಬಿನ್ನಿ 61, ನಾಯರ್ 23, ಸಮರ್ಥ್ 19, ಮಿಥುನ್ 19, ಸಿರಾಜ್ 42ಕ್ಕೆ 4, ರವಿಕಿರಣ್ 36ಕ್ಕೆ 3, ಓಜಾ 31ಕ್ಕೆ 2). ಹೈದರಾಬಾದ್-3 ವಿಕೆಟಿಗೆ 51 (ಸುಮಂತ್ ಬ್ಯಾಟಿಂಗ್ 34, ಶ್ರೇಯಸ್ ಗೋಪಾಲ್ 22ಕ್ಕೆ 2).