Advertisement

ಕರ್ನಾಟಕಕ್ಕೆ ದೀಪಾವಳಿ ಬೋನಸ್‌

02:46 PM Oct 18, 2017 | Team Udayavani |

ಮೈಸೂರು: ಅಮೋಘ ಪ್ರದರ್ಶನ ನೀಡಿದ ಕರ್ನಾಟಕ ತಂಡ ಪ್ರಸಕ್ತ ರಣಜಿ ಋತುವಿನಲ್ಲಿ ಅಸ್ಸಾಂ ತಂಡವನ್ನು ಇನಿಂಗ್ಸ್‌ ಹಾಗೂ 121 ರನ್‌ಗಳಿಂದ ಸೋಲಿಸಿ ಶುಭಾರಂಭ ಮಾಡಿದೆ. ಈ ಗೆಲುವಿನೊಂದಿಗೆ ರಾಜ್ಯ ತಂಡ ಬೋನಸ್‌ ಅಂಕ ಸೇರಿದಂತೆ ಒಟ್ಟು 7 ಅಂಕ ಪಡೆದು ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಈ ಮೂಲಕ ರಾಜ್ಯ ತಂಡಕ್ಕೆ ದೀಪಾವಳಿಯ ಬೋನಸ್‌ ಸಿಕ್ಕಂತಾಗಿದೆ.

Advertisement

ಇಲ್ಲಿನ ಮಾನಸ ಗಂಗೋತ್ರಿಯ ನರಸಿಂಹರಾಜ ಒಡೆಯರ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಸ್ಸಾಂ ಮೊದಲ ಇನಿಂಗ್ಸ್‌ನಲ್ಲಿ 145 ರನ್‌ ಬಾರಿಸಿ ಆಲೌಟ್‌ ಆಗಿತ್ತು. ನಂತರ ಕರ್ನಾಟಕ ಮೊದಲ ಇನಿಂಗ್ಸ್‌ ಆರಂಭಿಸಿ 469ಕ್ಕೆ 7 ವಿಕೆಟ್‌ ಕಳೆದುಕೊಂಡು ಡಿಕ್ಲೇರ್‌ ಮಾಡಿಕೊಂಡಿತ್ತು. ಆ ನಂತರ ಮೂರನೇ ದಿನ 2ನೇ ಇನಿಂಗ್ಸ್‌ ಆರಂಭಿಸಿದ ಅಸ್ಸಾಂ 203ಕ್ಕೆ ಆಲೌಟ್‌ ಆಗಿ ಇನಿಂಗ್ಸ್‌ ಆಂತರದಿಂದ ಸೋಲುಂಡಿದೆ.

203ಕ್ಕೆ ಅಸ್ಸಾಂ ಸರ್ವಪತನ: 3ನೇ ದಿನದಂತ್ಯಕ್ಕೆ 2ನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ ನಷ್ಟಕ್ಕೆ 169 ರನ್‌ಗಳಿಸಿದ್ದ ಅಸ್ಸಾಂ 4ನೇ ದಿನ ಬಹುಬೇಗನೆ ತನ್ನ ಹೋರಾಟ ಅಂತ್ಯಗೊಳಿಸಿತು. ಪಂದ್ಯದ ಕೊನೆಯ ದಿನದಾಟ ಆರಂಭಿಸಿದ ಅಸ್ಸಾಂ ತಂಡ ಇನಿಂಗ್ಸ್‌ ಸೋಲಿನ ಭೀತಿಯಿಂದ ಹೊರಬರಲು 155 ರನ್‌ಗಳ ಅಗತ್ಯವಿತ್ತು. ಆದರೆ ಕರ್ನಾಟಕದ ಮಾರಕ ಬೌಲಿಂಗ್‌ ದಾಳಿಗೆ ತತ್ತರಿಸಿದ ಅಸ್ಸಾಂ ಬ್ಯಾಟ್ಸ್‌ಮನ್‌ಗಳು ನಿನ್ನೆಯ ಮೊತ್ತಕ್ಕೆ ಕೇವಲ 34 ರನ್‌ ಗಳನ್ನು ಸೇರಿಸಿ, ಬಾಕಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರೊಂದಿಗೆ 203 ರನ್‌ಗಳಿಗೆ ಸರ್ವಪತನಗೊಂಡ ಅಸ್ಸಾಂ, 121 ರನ್‌ಗಳ ಹಿನ್ನಡೆಯೊಂದಿಗೆ ಇನಿಂಗ್ಸ್‌ ಸೋಲು ಕಂಡಿತು.

ಗೋಕುಲ್‌ ಹೋರಾಟ ವ್ಯರ್ಥ: ಅತಿಥೇಯ ಬೌಲಿಂಗ್‌ ಎದುರು ಮೊದಲ ಇನಿಂಗ್ಸ್‌ನಲ್ಲಿ ಸಂಪೂರ್ಣ ಕುಸಿದಿದ್ದ ಅಸ್ಸಾಂ, 2ನೇ ಇನಿಂಗ್ಸ್‌ನಲ್ಲೂ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿತು. ಕರ್ನಾಟಕದ ಬೌಲರ್‌ಗಳನ್ನು ಎದುರಿಸಲು ಪರದಾಡಿದ ಅಸ್ಸಾಂ ಆಟಗಾರರು, ರನ್‌ಗಳಿಸಲಾಗದೆ
ಪೆವಿಲಿಯನ್‌ನತ್ತ ಒಬ್ಬರ ಹಿಂದೆ ಒಬ್ಬರು ಹೆಜ್ಜೆ ಹಾಕಿದರು. ಆದರೆ ಮೊದಲ ಇನಿಂಗ್ಸ್‌ನಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಿ 55 ರನ್‌ಗಳ ಉಪಯುಕ್ತ ಕಾಣಿಕೆ ನೀಡಿ ತಂಡಕ್ಕೆ ನೆರವಾಗಿದ್ದ ನಾಯಕ ಗೋಕುಲ್‌ ಶರ್ಮ 2ನೇ ಇನಿಂಗ್ಸ್‌ನಲ್ಲೂ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದರು.

ಕರ್ನಾಟಕದ ಬೌಲರ್‌ಗಳ ಎದುರು ಸ್ವಲ್ಪಮಟ್ಟಿನ ಪ್ರತಿರೋಧ ತೋರಿದ ಗೋಕುಲ್‌ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. 2ನೇ ಇನಿಂಗ್ಸ್‌ನಲ್ಲಿ 6 ಬೌಂಡರಿ ಸಹಿತ 66 ರನ್‌ಗಳಿಸಿದ್ದ ಗೋಕುಲ್‌ ಶರ್ಮ ವೇಗಿ ವಿನಯ್‌ ಕುಮಾರ್‌ಗೆ ವಿಕೆಟ್‌ ಒಪ್ಪಿಸಿದರು. ಇವರ ನಿರ್ಗಮನದ ನಂತರ ಬಂದ ಆಟಗಾರರು ಬಂದಷ್ಟೇ ವೇಗವಾಗಿ ಪೆವಿಲಿಯನ್‌ ಸೇರಿಕೊಂಡು ತಂಡದ ಸೋಲಿಗೆ
ಕಾರಣರಾದರು.

Advertisement

ಬೌಲರ್‌ಗಳ ಮಿಂಚಿನ ದಾಳಿ: ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅದ್ಭುತ ಬೌಲಿಂಗ್‌ ಪ್ರದರ್ಶಿಸಿ ಅಸ್ಸಾಂ ತಂಡವನ್ನು 145 ರನ್‌ಗಳಿಗೆ ಕಟ್ಟಿಹಾಕಿದ್ದರು. 2ನೇ ಸರದಿಯಲ್ಲೂ ಇದೇ ಪ್ರದರ್ಶನ ಮುಂದುವರಿಸಿದ ಅತಿಥೇಯ ಬೌಲರ್‌ ಗಳು ಅಸ್ಸಾಂ ಆಟಗಾರರನ್ನು ಕಟ್ಟಿಹಾಕಿ ದರು. ಪ್ರಮುಖವಾಗಿ ನಾಲ್ಕನೇ ದಿನದಂದು ಚುರುಕಿನ ಬೌಲಿಂಗ್‌ ಪ್ರದರ್ಶಿಸಿದ ವಿನಯ್‌ ಕುಮಾರ್‌, ದಿನದ ಮೊದಲ ಅವಧಿಯಲ್ಲೇ ತಂಡಕ್ಕೆ
ಗೆಲುವು ತಂದುಕೊಟ್ಟರು. 2ನೇ ಇನಿಂಗ್ಸ್‌ ನಲ್ಲಿ ಉತ್ತಮ ಆಟದ ಮೂಲಕ ಮತ್ತಷ್ಟು ರನ್‌ ಕಲೆ ಹಾಕುವ ಸೂಚನೆ ನೀಡಿದ್ದ ಗೋಕುಲ್‌ ಅವರಿಗೆ ವಿನಯ್‌ ಕುಮಾರ್‌ ಪೆವಿಲಿಯನ್‌ ದಾರಿ ತೋರಿದರು.

ಇದಾದ ಬಳಿಕ ಅಬು ನೆಚಿಮ್‌(17), ರಾಹುಲ್‌ ಸಿಂಗ್‌ (4) ಅವರನ್ನು ಪೆವಿಲಿಯನ್‌ ಕಳುಹಿಸುವಲ್ಲಿ ವಿನಯ್‌ ಕುಮಾರ್‌ ಯಶಸ್ವಿಯಾದರು. ಇವರಿಗೆ ಉತ್ತಮ ಸಾಥ್‌ ನೀಡಿದ ವೇಗಿ ಅಭಿಮನ್ಯು ಮಿಥುನ್‌ 47ಕ್ಕೆ 3 ಮತ್ತು ಕೆ.ಗೌತಮ್‌ 39ಕ್ಕೆ 3 ವಿಕೆಟ್‌ ಪಡೆದರು.

ಅಂಕಪಟ್ಟಿಯಲ್ಲಿ 2ನೇ ಸ್ಥಾನ: ಪ್ರಸಕ್ತ ರಣಜಿ ಋತುವನ್ನು ಗೆಲುವಿನಲ್ಲಿ ಆರಂಭಿಸುವ ತವಕದಲ್ಲಿದ್ದ ಕರ್ನಾಟಕ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ
ಯಶಸ್ವಿಯಾಯಿತು. ಅಸ್ಸಾಂ ವಿರುದ್ಧದ ಮೊದಲ ಪಂದ್ಯದಲ್ಲೇ ಇನಿಂಗ್ಸ್‌ ಮತ್ತು 121 ರನ್‌ಗಳ ಭರ್ಜರಿ ಜಯ ದಾಖಲಿಸಿದ ಕರ್ನಾಟಕ ಬೋನಸ್‌ ಅಂಕ ಸೇರಿದಂತೆ ಒಟ್ಟು 7 ಅಂಕವನ್ನು ತನ್ನದಾಗಿಸಿಕೊಂಡಿತು. ಇದರೊಂದಿಗೆ ಕರ್ನಾಟಕ ಈ ಬಾರಿಯ ರಣಜಿ  ಪಂದ್ಯಾವಳಿಯ “ಎ’ ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದೆ. 2 ಪಂದ್ಯಗಳಿಂದ 10 ಅಂಕಗಳಿಸಿರುವ ದೆಹಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಕೆ.ಗೌತಮ್‌ ಪಂದ್ಯಶ್ರೇಷ್ಠ: ಕರ್ನಾಟಕದ ಸ್ಪಿನ್ನರ್‌ ಕೆ. ಗೌತಮ್‌ ಮೊದಲ ಇನಿಂಗ್ಸ್‌ನಲ್ಲಿ ಶತಕ (149) ಸಿಡಿಸುವ ಜತೆಗೆ 20 ರನ್‌ಗೆ 4 ವಿಕೆಟ್‌ ಪಡೆದಿದ್ದರು. 2ನೇ ಇನಿಂಗ್ಸ್‌ನಲ್ಲಿ 39ಕ್ಕೆ 3 ವಿಕೆಟ್‌ ಪಡೆದಿದ್ದಾರೆ. ಶತಕ ಸಹಿತ ಒಟ್ಟು 7 ವಿಕೆಟ್‌ ಉಡಾಯಿಸಿದ ಕೃಷ್ಣಪ್ಪ ಗೌತಮ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. 

ಸಂಕ್ಷಿಪ್ತ ಸ್ಕೋರ್‌: ಅಸ್ಸಾಂ 1ನೇ ಇನಿಂಗ್ಸ್‌ 145/10, ಕರ್ನಾಟಕ 1ನೇ ಇನಿಂಗ್ಸ್‌ 469/7 ಡಿಕ್ಲೇರ್‌, ಅಸ್ಸಾಂ 2ನೇ ಇನಿಂಗ್ಸ್‌ 203/10 (ಗೋಕುಲ್‌ ಶರ್ಮ 66, ಶಿಬ್‌ಶಂಕರ್‌ ರಾಯ್‌ 44, ವಿನಯ್‌ ಕುಮಾರ್‌ 31ಕ್ಕೆ 4, ಮಿಥುನ್‌ 47ಕ್ಕೆ 3, ಕೆ.ಗೌತಮ್‌ 39ಕ್ಕೆ 3).

ಇತರೆ ಪಂದ್ಯಗಳ ಫ‌ಲಿತಾಂಶ
*ದೆಹಲಿಗೆ (447/10) ರೈಲ್ವೇಸ್‌ ವಿರುದ್ಧ (136/10, 206/10) ಇನಿಂಗ್ಸ್‌ ಹಾಗೂ 105 ರನ್‌ ಜಯ.

*ಕೇರಳ (208/10, 203/10) ವಿರುದ್ಧ ಗುಜರಾತ್‌ಗೆ (307/10, 108/6) 4 ವಿಕೆಟ್‌ ಜಯ.

*ಬಂಗಾಳಕ್ಕೆ (529/7 ಡಿಕ್ಲೇರ್‌) ಚತ್ತೀಸ್‌ಗಢ ವಿರುದ್ಧ (110/10, 259/10) ಇನಿಂಗ್ಸ್‌ ಹಾಗೂ 160 ರನ್‌ ಜಯ.

*ರಾಜಸ್ಥಾನ (423/10) ಮತ್ತು ಜಾರ್ಖಂಡ್‌ (265/10, 332/6) ಪಂದ್ಯ ಡ್ರಾ.

*ಬರೋಡ (373/10, 195/6) ಮತ್ತು ಆಂಧ್ರ (554/10) ಪಂದ್ಯ ಡ್ರಾ .

*ಮಧ್ಯ ಪ್ರದೇಶ (409/10, 145/6) ಮತ್ತು ಮುಂಬೈ (440/10) ಪಂದ್ಯ ಡ್ರಾ.

*ತ್ರಿಪುರ (258/10, 91/3) ಮತ್ತು ತಮಿಳುನಾಡು (357/4 ಡಿಕ್ಲೇರ್‌) ಪಂದ್ಯ ಡ್ರಾ

*ಗೋವಾ (255/10, 426/2) ಮತ್ತು ಹಿಮಾಚಲ ಪ್ರದೇಶ (625/7 ಡಿಕ್ಲೇರ್‌). ಪಂದ್ಯ ಡ್ರಾ

ಸಿ.ದಿನೇಶ್‌

Advertisement

Udayavani is now on Telegram. Click here to join our channel and stay updated with the latest news.

Next