Advertisement
5 ವಿಕೆಟಿಗೆ 248 ರನ್ ಗಳಿಸಿದ್ದ ಮುಂಬಯಿ ಗುರುವಾರದ ಬ್ಯಾಟಿಂಗ್ ಮುಂದುವರಿಸಿ 374ಕ್ಕೆ ಆಲೌಟ್ ಆಯಿತು. ಸರ್ಫರಾಜ್ ಖಾನ್ ಎದುರಾಳಿಯ ದಾಳಿಯನ್ನು ಯಶಸ್ವಿಯಾಗಿ ನಿಭಾಯಿಸಿ 134 ರನ್ ಬಾರಿಸಿದರು. ಜವಾಬು ನೀಡ ಲಾರಂಭಿಸಿದ ಮಧ್ಯ ಪ್ರದೇಶ ಒಂದು ವಿಕೆಟಿಗೆ 123 ರನ್ ಗಳಿಸಿ ಸುಸ್ಥಿತಿಯಲ್ಲಿದೆ.
Related Articles
Advertisement
ಧವಳ್ ಕುಲಕರ್ಣಿ ಗಳಿಸಿದ್ದು ಒಂದೇ ರನ್ನಾದರೂ 36 ಎಸೆತ ಎದುರಿಸಿ ನಿಂತರು. ತುಷಾರ್ ದೇಶಪಾಂಡೆ 20 ಎಸೆತಗಳಿಂದ 6 ರನ್, ಮೋಹಿತ್ ಆವಸ್ಥಿ 11 ಎಸೆತಗಳಿಂದ ಅಜೇಯ 7 ರನ್ ಮಾಡಿದರು. ಸರ್ಫರಾಜ್ ಅಂತಿಮ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿಕೊಂಡರು.
ಮಧ್ಯ ಪ್ರದೇಶ ಪರ ಮಧ್ಯಮ ವೇಗಿ ಗೌರವ್ ಯಾದವ್ 4 ವಿಕೆಟ್ ಉರುಳಿಸಿ ಹೆಚ್ಚಿನ ಗೌರವ ಸಂಪಾದಿಸಿದರು. ಮತ್ತೋರ್ವ ಮೀಡಿಯಂ ಪೇಸರ್ ಅನುಭವ್ ಅಗರ್ವಾಲ್ 3, ಆಫ್ಸ್ಪಿನ್ನರ್ ಸಾರಾಂಶ್ ಜೈನ್ 2 ವಿಕೆಟ್ ಉರುಳಿಸಿದರು.
ಮಧ್ಯ ಪ್ರದೇಶ ದಿಟ್ಟ ಉತ್ತರ :
ಮಧ್ಯ ಪ್ರದೇಶ ಈಗಾಗಲೇ 41 ಓವರ್‌ಗಳನ್ನು ಯಶಸ್ವಿಯಾಗಿ ನಿಭಾಯಿಸಿದೆ. ಆರಂಭಿಕರಾದ ಯಶ್ ದುಬೆ ಮತ್ತು ಹಿಮಾಂಶು ಮಂತ್ರಿ ಮೊದಲ ವಿಕೆಟಿಗೆ 47 ರನ್ ಒಟ್ಟುಗೂಡಿಸಿದರು. ಈ ಹಂತದಲ್ಲಿ ತುಷಾರ್ ದೇಶಪಾಂಡೆ ಮುಂಬಯಿಗೆ ಮೊದಲ ಹಾಗೂ ದಿನದ ಏಕೈಕ ಯಶಸ್ಸು ತಂದಿತ್ತರು. ಆಕ್ರಮಣಕಾರಿಯಾಗಿ ಆಡುತ್ತಿದ್ದ ಮಂತ್ರಿ 31 ರನ್ ಮಾಡಿ ಲೆಗ್ ಬಿಫೋರ್ ಬಲೆಗೆ ಬಿದ್ದರು (50 ಎಸೆತ, 3 ಬೌಂಡರಿ, 2 ಸಿಕ್ಸರ್). ದುಬೆ 44 ಮತ್ತು ಶುಭಂ ಶರ್ಮ 41 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮುರಿಯದ 2ನೇ ವಿಕೆಟಿಗೆ 76 ರನ್ ಪೇರಿಸಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಮುಂಬಯಿ-374 (ಸರ್ಫರಾಜ್ 134, ಜೈಸ್ವಾಲ್ 78, ಶಾ 47, ಜಾಫರ್ 26, ತಮೋರೆ 24, ಗೌರವ್ ಯಾದವ್ 106ಕ್ಕೆ 4, ಅನುಭವ್ ಅಗರ್ವಾಲ್ 81ಕ್ಕೆ 3, ಸಾರಾಂಶ್ ಜೈನ್ 46ಕ್ಕೆ 2). ಮಧ್ಯ ಪ್ರದೇಶ-ಒಂದು ವಿಕೆಟಿಗೆ 123 (ದುಬೆ ಬ್ಯಾಟಿಂಗ್ 44, ಶುಭಂ ಶರ್ಮ ಬ್ಯಾಟಿಂಗ್ 41, ಮಂತ್ರಿ 31, ದೇಶಪಾಂಡೆ 31ಕ್ಕೆ 1).
ರಣಜಿ ಫೈನಲ್‌ಗೂ ಡಿಆರ್‌ಎಸ್ ಇಲ್ಲ !
ಬೆಂಗಳೂರು: ಈ ಬಾರಿ ರಣಜಿ ಕೂಟದಲ್ಲಿ ಬಿಸಿಸಿಐ ಡಿಆರ್‌ಎಸ್ ಅಳವಡಿಸಿಲ್ಲ. ಫೈನಲ್ ಪಂದ್ಯದಲ್ಲೂ ಡಿಆರ್‌ಎಸ್ ಕೊರತೆ ಕಾಡಿದೆ. “ನಾವು ಇಬ್ಬರು ಅತ್ಯುತ್ತಮ ಅಂಪಾಯರ್‌ಗಳಾದ ಕೆ.ಎನ್. ಪದ್ಮನಾಭನ್, ವೀರೇಂದರ್ ಶರ್ಮ ಅವರನ್ನು ನೇಮಿಸಿದ್ದೇವೆ. ಅವರ ಸಾಮರ್ಥ್ಯದ ಮೇಲೆ ಪೂರ್ಣ ಭರವಸೆಯಿದೆ’ ಎಂಬುದು ಬಿಸಿಸಿಐ ಅಧಿಕಾರಿಯೊಬ್ಬರ ಪ್ರತಿಕ್ರಿಯೆ.