Advertisement

ರಣಜಿ ಫೈನಲ್‌: ತಿರುಗಿಬಿದ್ದ ವಿದರ್ಭ, ಸೌರಾಷ್ಟ್ರಕ್ಕೆ ನಡುಕ

12:30 AM Feb 05, 2019 | |

ನಾಗ್ಪುರ: ವಿದರ್ಭ-ಸೌರಾಷ್ಟ್ರ ನಡುವಿನ ರಣಜಿ ಕ್ರಿಕೆಟ್‌ ಫೈನಲ್‌ ಪಂದ್ಯ ರೋಚಕ ಹಂತಕ್ಕೆ ತಲುಪಿದೆ. ಎರಡನೇ ದಿನದ ಆಟದಲ್ಲೇ ಪಂದ್ಯಕ್ಕೆ ಟ್ವಿಸ್ಟ್‌ ಸಿಕ್ಕಿದ್ದು, ಎರಡೂ ತಂಡಗಳು ಸಮಬಲದ ಕಾದಾಟದಲ್ಲಿ ತೊಡಗಿವೆ.

Advertisement

ಹಾಲಿ ಚಾಂಪಿಯನ್‌ ವಿದರ್ಭ ತನ್ನ ಮೊದಲ ಸರದಿಯನ್ನು 312ಕ್ಕೆ ಮುಗಿಸಿದ್ದು, ಬಲಿಷ್ಠ ಬ್ಯಾಟಿಂಗ್‌ ಲೈನ್‌ಅಪ್‌ ಹೊಂದಿರುವ ಸೌರಾಷ್ಟ್ರ 5 ವಿಕೆಟಿಗೆ 158 ರನ್‌ ಮಾಡಿ ದ್ವಿತೀಯ ದಿನದಾಟ ಮುಗಿಸಿದೆ.

ಮೊದಲ ದಿನ ಕುಂಟುತ್ತಿದ್ದ ವಿದರ್ಭಕ್ಕೆ ಅಕ್ಷಯ್‌ ಕರ್ಣೆವಾರ್‌ (ಅಜೇಯ 73) ಹಾಗೂ ಅಕ್ಷಯ್‌ ವಖಾರೆ (34) ದಿಟ್ಟ ಬ್ಯಾಟಿಂಗ್‌ ಪ್ರದರ್ಶಿಸಿ ಆಧಾರವಾದರು. ಇವರಿಬ್ಬರು ಸೇರಿಕೊಂಡು ದೊಡ್ಡ ಜತೆಯಾಟ ನಿರ್ವಹಿಸಿ ಮೊತ್ತವನ್ನು ಮುನ್ನೂರರ ಗಡಿ ದಾಟಿಸಿದರು.

ಸ್ನೆಲ್‌ ಪಟೇಲ್‌ ಹೋರಾಟ
ಮೊದಲ ಇನಿಂಗ್ಸ್‌ ಆರಂಭಿಸಿರುವ ಸೌರಾಷ್ಟ್ರಕ್ಕೆ ಆರಂಭಿಕ ಭಾರೀ ಆಘಾತ ಎದುರಾಗಿದೆ. ಸ್ನೆಲ್‌ ಪಟೇಲ್‌ (ಅಜೇಯ 87 ರನ್‌) ಅವರ ಏಕಾಂಗಿ ಹೋರಾಟದ ನಡುವೆಯೂ 158 ರನ್ನಿಗೆ 5 ವಿಕೆಟ್‌ ಕಳೆದುಕೊಂಡು ಇನಿಂಗ್ಸ್‌ ಹಿನ್ನಡೆ ಭೀತಿಯಲ್ಲಿದೆ. ಕೈಯಲ್ಲಿ ಕೇವಲ 5 ವಿಕೆಟ್‌ಗಳಿದ್ದು, ಮಹತ್ವದ ಇನ್ನಿಂಗ್ಸ್‌ ಮುನ್ನಡೆಗೆ ಇನ್ನೂ 154 ರನ್‌ ಅಗತ್ಯವಿದೆ.

ಈಗಿನ ಲೆಕ್ಕಾಚಾರದಂತೆ ವಿದರ್ಭ ಮೇಲುಗೈ ಸಾಧಿಸಿದೆ. ಸ್ನೆಲ್‌ ಪಟೇಲ್‌ ಕ್ರೀಸ್‌ಗೆ ಅಂಟಿಕೊಂಡಿರುವುದಷ್ಟೇ ಸೌರಾಷ್ಟ್ರ ಪಾಲಿಗೆ ತುಸು ನೆಮ್ಮದಿಯ ಸಂಗತಿ. ಇವರೊಂದಿಗೆ ಪ್ರೇರಕ್‌ ಮಂಕಡ್‌ 16 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಮಂಗಳವಾರ ಇವರಿಬ್ಬರು ಸೇರಿಕೊಂಡು ವಿದರ್ಭ ಮೇಲೆ ಸವಾರಿ ಮಾಡಿಯಾರೇ ಎನ್ನುವುದು ಸದ್ಯದ ಕುತೂಹಲ.

Advertisement

ರಕ್ಷಣೆಗೆ ನಿಂತ ಕರ್ಣೆವಾರ್‌, ವಖಾರೆ
ವಿದರ್ಭ ಮೊದಲ ದಿನದ ಆಟದಲ್ಲಿ 7 ವಿಕೆಟಿ ಗೆ 200 ರನ್‌ ಗಳಿಸಿತ್ತು. ಇನ್ನೇನು 250ರ ಗಡಿಯಲ್ಲಿ ಆಲೌಟಾಗಲಿದೆ ಎಂದು ಅಂದಾಜಿಸಲಾಗಿತ್ತು. ಇಂಥ ಸಂಕಷ್ಟದ ಸಮಯದಲ್ಲಿ ಅಕ್ಷಯ್‌ ಕರ್ಣೆವಾರ್‌ ಮತ್ತು ಅಕ್ಷಯ್‌ ವಖಾರೆ ತಂಡದ ರಕ್ಷಣೆಗೆ ನಿಂತರು. ಬ್ಯಾಟಿಂಗ್‌ ಮುಂದುವರಿಸಿದ ಈ ಜೋಡಿ 8ನೇ ವಿಕೆಟಿಗೆ 68 ರನ್‌ ಕಲೆಹಾಕಿತು. ಕರ್ಣೆವಾರ್‌ ಒಟ್ಟು 160 ಎಸೆತ ಎದುರಿಸಿ 8 ಬೌಂಡರಿ, 2 ಸಿಕ್ಸರ್‌ ಮೂಲಕ ಮಿಂಚಿದರು. ಸೌರಾಷ್ಟ್ರ ಪರ ಜೈದೇವ್‌ ಉನಾದ್ಕತ್‌ 3, ಸಕಾರಿಯ 2 ಹಾಗೂ ಕಮಲೇಶ್‌ ಮಕ್ವಾನ 2 ವಿಕೆಟ್‌ ಕಬಳಿಸಿದರು.

ಪೂಜಾರ ಒಂದೇ ರನ್‌!
ಬಲಿಷ್ಠ ಬ್ಯಾಟಿಂಗ್‌ ಸರದಿಯನ್ನು ಹೊಂದಿಯೂ ಸೌರಾಷ್ಟ್ರ ತೀವ್ರ ಕುಸಿತ ಕಂಡದ್ದು ವಿದರ್ಭ ಪಾಳೆಯದಲ್ಲಿ ಸಂತಸ ಮೂಡಿಸಿದೆ. ಹಾರ್ವಿಕ್‌ ದೇಸಾಯಿ 10, ವಿಶ್ವರಾಜ್‌ ಜಡೇಜ 18 ರನ್ನಿಗೆ ನಿರ್ಗಮಿಸಿದರೆ, ಅನುಭವಿ ಚೇತೇಶ್ವರ್‌ ಪೂಜಾರ ಕೇವಲ ಒಂದು ರನ್ನಿಗೆ ಔಟಾದುದರಿಂದ ಹಾಲಿ ಚಾಂಪಿಯನ್ನರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. ಇವರೊಂದಿಗೆ ಅರ್ಪಿತ್‌ ವಸವಾಡ (13) ಮತ್ತು ಶೆಲ್ಡನ್‌ ಜಾಕ್ಸನ್‌ (9) ಕೂಡ ಪೆವಿಲಿಯನ್‌ ಸೇರಿಕೊಂಡಿದ್ದಾರೆ.ವಿದರ್ಭ ಪರ ಆದಿತ್ಯ ಸರ್ವಟೆ 3 ಮತ್ತು ಅಕ್ಷಯ್‌ ವಖಾರೆ 2 ವಿಕೆಟ್‌ ಕಬಳಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ವಿದರ್ಭ-312 (ಕರ್ಣೆವಾರ್‌ ಔಟಾಗದೆ 73, ವಾಡ್ಕರ್‌ 45, ಕಾಳೆ 35, ವಖಾರೆ 34, ಉನಾದ್ಕತ್‌ 54ಕ್ಕೆ 3, ಸಕಾರಿಯ 44ಕ್ಕೆ 2, ಮಕ್ವಾನಾ 58ಕ್ಕೆ 2). ಸೌರಾಷ್ಟ್ರ-5 ವಿಕೆಟಿಗೆ 158 (ಸ್ನೆಲ್‌ ಪಟೇಲ್‌ ಬ್ಯಾಟಿಂಗ್‌ 87, ಜಡೇಜ 18, ಮಂಕಡ್‌ ಬ್ಯಾಟಿಂಗ್‌ 16, ಸರ್ವಟೆ 55ಕ್ಕೆ 3, ವಖಾರೆ 42ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next