ಜಮ್ಶೆಡ್ಪುರ: ರಣಜಿ ಲೀಗ್ ಹಂತವನ್ನು ಕರ್ನಾಟಕ ಗೆಲುವಿನೊಂದಿಗೆ ಮುಗಿಸಿದೆ. ಆತಿಥೇಯ ಜಾರ್ಖಂಡ್ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿದೆ. ಸಿ ಗುಂಪಿನಲ್ಲಿ ಆಡಿದ ರಾಜ್ಯ ತಂಡ ಒಟ್ಟು 7 ಪಂದ್ಯಗಳಲ್ಲಿ 4 ಗೆಲುವು, 3 ಡ್ರಾ ಸಾಧಿಸಿದೆ. 35 ಅಂಕಗಳೊಂದಿಗೆ ಗುಂಪಿನ ಅಗ್ರಸ್ಥಾನಿಯಾಗಿಯೇ ಕ್ವಾರ್ಟರ್ ಫೈನಲ್ ಹೋರಾಟಕ್ಕೆ ಸಜ್ಜಾಗಿದೆ.
ಕರ್ನಾಟಕ ಮೂರೇ ದಿನದಲ್ಲಿ ಪಂದ್ಯವನ್ನು ಮುಗಿಸಿದೆ. ಗೆಲ್ಲಲು 2ನೇ ಇನಿಂಗ್ಸ್‌ನಲ್ಲಿ 66 ರನ್‌ಗಳ ಗುರಿಪಡೆದ ರಾಜ್ಯ, ಕೇವಲ 1 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 2ನೇ ಇನಿಂಗ್ಸ್‌ನಲ್ಲಿ ನಿಕಿನ್ ಜೋಸ್ ಅಜೇಯ 42, ಆರ್.ಸಮರ್ಥ್ 24 ರನ್ ಗಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ದೇವದತ್ತ ಪಡಿಕ್ಕಲ್ ಶೂನ್ಯಕ್ಕೆ ಔಟಾದರು.
ಭಾರೀ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ ಜಾರ್ಖಂಡ್ ಇಲ್ಲೂ ಬೇಗ ಆಟ ಮುಗಿಸಿತು. ಕೆ.ಗೌತಮ್ ಅವರ ಸ್ಪಿನ್ ಕೈಚಳಕಕ್ಕೆ ಸಿಲುಕಿದ ಜಾರ್ಖಂಡ್ 201 ರನ್‌ಗಳಿಗೆ ಆಲೌಟಾಯಿತು. ಆ ತಂಡದ ಪರ ಸುಪ್ರಿಯೊ ಚಕ್ರಬೊರ್ತಿ 48 ರನ್ ಗಳಿಸಿದ್ದೇ ಗರಿಷ್ಠ ವೈಯಕ್ತಿಕ ಸಾಧನೆ. ರಾಜ್ಯದ ಪರ ಕೆ.ಗೌತಮ್ 75 ರನ್ ನೀಡಿ 5 ವಿಕೆಟ್ ಪಡೆದರು, ವೇಗಿ ವಾಸುಕಿ ಕೌಶಿಕ್ 21 ರನ್ ನೀಡಿ 3 ವಿಕೆಟ್ ಪಡೆದರು. ಜಾರ್ಖಂಡ್ 1ನೇ ಇನಿಂಗ್ಸ್‌ನಲ್ಲಿ 164 ರನ್‌ಗಳಿಗೆ ಆಲೌಟಾಗಿತ್ತು. ಈ ಪರಿಣಾಮ ರಾಜ್ಯಕ್ಕೆ 2ನೇ ಇನಿಂಗ್ಸ್‌ನಲ್ಲಿ ಕೇವಲ 66 ರನ್‌ಗಳ ಸಣ್ಣ ಗುರಿ ಲಭಿಸಿತು.
ಸಂಕ್ಷಿಪ್ತ ಸ್ಕೋರ್: ಜಾರ್ಖಂಡ್ 1ನೇ ಇನಿಂಗ್ಸ್ 164, 2ನೇ ಇನಿಂಗ್ಸ್ 201 (ಸುಪ್ರಿಯೊ ಚಕ್ರಬೊರ್ತಿ 48, ಕೆ.ಗೌತಮ್ 75ಕ್ಕೆ 5, ವಿ.ಕೌಶಿಕ್ 21ಕ್ಕೆ 3). ಕರ್ನಾಟಕ 1ನೇ ಇನಿಂಗ್ಸ್ 300, 2ನೇ ಇನಿಂಗ್ಸ್ 66/1.