ಉಡುಪಿ: ಉಡುಪಿಯ ನಾಟಕ ತಂಡಗಳು, ಪೂರಕ ವಾತಾವರಣ, ಶಕ್ತಿ, ಪ್ರೋತ್ಸಾಹ ನೀಡುವವರ ಸಮೂಹ ಇತ್ಯಾದಿ ಕಂಡಾಗ ಜಿಲ್ಲೆಗೊಂದು ರಂಗಾಯಣದ ಆವಶ್ಯಕತೆಯಿದೆ ಎಂದೆನಿಸುತ್ತದೆ. ರಂಗಭೂಮಿ ಉಡುಪಿ ಇದನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ರಂಗಭೂಮಿ ಉಡುಪಿ ವತಿಯಿಂದ ನಡೆದ 43ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಶುಕ್ರವಾರ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹು ಮಾನ ವಿತರಿಸಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ನಾಟಕದಿಂದ ಆಗುವ ಸಮಾಜಿಕ ಬದಲಾವಣೆಯ ಬಗ್ಗೆ ತಿಳಿಸಿ, ಶುಭ ಹಾರೈಸಿದರು.
ರಂಗಭೂಮಿ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕುತ್ಪಾಡಿ ಕಾನಂಗಿ ದೇವಸ್ಥಾನದ ಮೊಕ್ತೇಸರ ಡಾ| ಕೆ.ಆರ್.ಕೆ.ಭಟ್, ರಂಗಭೂಮಿ ಉಡುಪಿ ಉಪಾಧ್ಯಕ್ಷ ಎನ್.ಆರ್.ಬಲ್ಲಾಳ್ ಉಪಸ್ಥಿತರಿದ್ದರು.
Related Articles
ರಂಗಭೂಮಿಯ ಪ್ರ.ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ಸ್ವಾಗತಿಸಿ, ಉಪಾಧ್ಯಕ್ಷ ಭಾಸ್ಕರ್ ರಾವ್ ಕಿದಿಯೂರು ವಂದಿಸಿದರು. ಕಲಾವಿದ ಶ್ರೀಪಾದ ಹೆಗಡೆ ಬಹುಮಾನಿತರ ಪಟ್ಟಿ ವಾಚಿಸಿದರು. ಪೂರ್ಣಿಮಾ ಸುರೇಶ್ ನಿರೂಪಿಸಿದರು.
ಬಹುಮಾನ ವಿವರ
ಹಾವೇರಿ ಶೇಷಗೀರಿ ಶ್ರೀ ಗಜಾನನ ಯುವಕ ಮಂಡಲ ತಂಡದ ವಾಲಿವಧೆ ನಾಟಕ ಪ್ರಥಮ, ತೀರ್ಥಹಳ್ಳಿಯ ನಟ ಮಿತ್ರರು ತಂಡದ ತುರುಬ ಕಟ್ಟುವ ಹದನ ದ್ವಿತೀಯ ಹಾಗೂ ಉಡುಪಿ ಬೈಕಾಡಿಯ ಮಂದಾರ ತಂಡದ ಕೊಳ್ಳಿ ನಾಟಕ ತೃತೀಯ ಬಹುಮಾನ ಪಡೆದುಕೊಂಡಿತು.