ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಗೌರಿಯಾಗಿ ಮನೆಮಂದಿಯ ಮನಗೆದ್ದಿರುವ ರಂಜನಿ ರಾಘವನ್ ಈಗ ಹಿರಿತೆರೆಗೂ ಕಾಲಿಟ್ಟು, ಈಗಾಗಲೇ ರಾಜ-ಹಂಸ ಹಾಗೂ ಸುಬ್ಬ-ಸುಬ್ಬಿ ಎಂಬ ಎರಡು ಸಿನೆಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಸುದ್ದಿ ಗೊತ್ತೇ ಇದೆ. ಈ ಪೈಕಿ ಸುಬ್ಬ-ಸುಬ್ಬಿ ಬಿಡುಗಡೆಯಾಗಲಿಲ್ಲ. ಬಿಡುಗಡೆಯಾದ ರಾಜ-ಹಂಸ ರಂಜನಿಗೆ ಒಳ್ಳೆಯ ಹೆಸರು ತಂದುಕೊಟ್ಟಿಲ್ಲ. ಈಗ ಆ ಚಿತ್ರದ ನಂತರ ರಂಜನಿ ಸದ್ದಿಲ್ಲದೆ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅದೇ ಸೂಫಿ.
ಸೂಫಿ ಎಂಬ ಹೆಸರೇ ಹೇಳುವಂತೆ ಇದೊಂದು ಸಂಗೀತಕ್ಕೆ ಸಂಬಂಧಿಸಿದ ಪದ. ಇಲ್ಲಿ ರಂಜನಿ ಅವರು ಟೈಟಲ್ ಪಾತ್ರ ನಿರ್ವಹಿಸುತ್ತಿದ್ದಾರೆ ಎಂಬುದು ವಿಶೇಷ. ಇಡೀ ಚಿತ್ರದ ಕಥೆ ಕೂಡ ಅವರ ಸುತ್ತವೇ ಸಾಗಲಿದೆ. ಇನ್ನು, ಈ ಚಿತ್ರಕ್ಕೆ ಶಿವು ಜಮಖಂಡಿ ನಿರ್ದೇಶಕರು. ವಿಜಯ್ ರಾಘವೇಂದ್ರ ಅಭಿನಯದ ನನ್ನ ನಿನ್ನ ಪ್ರೇಮಕಥೆ ಬಳಿಕ ಶಿವು ಜಮಖಂಡಿ ನಿರ್ದೇಶಿಸುತ್ತಿರುವ ಚಿತ್ರವಿದು. ಈ ಚಿತ್ರಕ್ಕೆ ವಿನೋದ್ ಪಾಟೀಲ್ ಹೀರೋ. ಜಸ್ಟ್ ಆಕಸ್ಮಿಕ ಚಿತ್ರ ಮಾಡಿದ್ದ ವಿನೋದ್ ಪಾಟೀಲ್‌ಗೆ ಸೂಫಿ ಎರಡನೆಯ ಚಿತ್ರ.
ಇದೊಂದು ಮ್ಯೂಸಿಕಲ್ ಜರ್ನಿ ಸಿನೆಮಾ ಎನ್ನುವ ರಂಜನಿ, “ಇಡೀ ಚಿತ್ರ ಸೂಫಿ ಸಂಗೀತದ ಹಿನ್ನೆಲೆಯಲ್ಲೇ ಸಾಗಲಿದೆ. ನನ್ನ ಪಾತ್ರಕ್ಕೆ ತುಂಬಾ ಪ್ರಾಮುಖ್ಯ ಕೊಡಲಾಗಿದೆ. ಅದೊಂದು ರೀತಿ ಬಜಾರಿಯಂತಹ ಪಾತ್ರವದು. ರಾಜಹಂಸ ಚಿತ್ರದ ಬಳಿಕ ಕೇಳಿದ ಕಥೆಗಳ ಸಂಖ್ಯೆ ಎಂಟು. ಆ ಪೈಕಿ ಮಿಸ್ ಆಗಿದ್ದು ಎರಡು. ಬಿಟ್ಟಿದ್ದು ಆರು. ಮಿಸ್ ಆಗೋಕೆ ಕಾರಣ, ಡೇಟ್ಸ್. ಕೈಬಿಡಲು ಕಾರಣ ಕಥೆ, ಪಾತ್ರ ಹೊಂದಿಕೆಯಾಗಲ್ಲ ಎಂಬುದಕ್ಕೆ. ಸುಮ್ಮನೆ ಬಂದುಹೋಗುವ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ನನಗೆ ಇಷ್ಟವಿರಲಿಲ್ಲ. ಹಾಗಾಗಿ, ಒಂದಷ್ಟು ಚಿತ್ರಗಳನ್ನು ಕೈ ಬಿಟ್ಟದ್ದು ನಿಜ. ರಾಜಹಂಸ ನನಗೊಂದು ಒಳ್ಳೆಯ ಇಮೇಜ್ ತಂದುಕೊಡು¤. ಆ ಚಿತ್ರ ನೋಡಿದವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಅದರಿಂದ ಒಂದಷ್ಟು ಅವಕಾಶಗಳೂ ಬಂದಿದ್ದುಂಟು. ಹಾಗೆ ಬಂದ ಅವಕಾಶಗಳಲ್ಲಿ ಸೂಫಿ ಚಿತ್ರವೂ ಒಂದು’ ಎಂದು ಹೇಳಿಕೊಳ್ಳುತ್ತಾರೆ ರಂಜನಿ.
ಫೆಬ್ರವರಿಯಲ್ಲಿ ಚಿತ್ರೀಕರಣ ಶುರುವಾಗಲಿದ್ದು, ಸುಮಾರು 50 ದಿನಗಳ ಚಿತ್ರೀಕರಣ ನಡೆಯಲಿದೆ. ಕಿರುತೆರೆ ನಟಿಯರು ಬೆಳ್ಳಿತೆರೆಗೆ ಬರುತ್ತಿರುವುದು ಹೊಸದೇನಲ್ಲ. ಹಾಗೆ ಬಂದವರು ಅನೇಕರು. ಆದರೆ, ಉಳಿದದ್ದು ಬೆರಳೆಣಿಕೆಯಷ್ಟು ನಟಿಯರು. ಆ ಸಾಲಿಗೆ ರಂಜನಿ ರಾಘವನ್ ಕೂಡ ಸೇರಿದ್ದಾರೆ. ಕಿರುತೆರೆಯಲ್ಲಿ ಸಖತ್ ಜನಪ್ರಿಯರಾಗಿರುವ ರಂಜನಿ, ಹಿರಿತೆರೆಯಲ್ಲೂ ಅದೇ ರೀತಿ ಮಿಂಚುತ್ತಾರಾ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ.