Advertisement

ಹೈ ಪ್ರೊಫೈಲ್ ರಾಜಕಾರಣಿಗಳ ನಂಟು ಮತ್ತು ನಟಿ ರಾಣಿ ಮರ್ಡರ್ ಕಹಾನಿ!

10:17 AM Jun 07, 2018 | Sharanya Alva |

ರಾಣಿ ಪದ್ಮಿನಿ 1980ರ ದಶಕದಲ್ಲಿ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಜನಪ್ರಿಯ ನಟಿಯಾಗಿದ್ದರು. ಕನ್ನಡ, ತಮಿಳು, ಮಲಯಾಳಂ ಹಾಗೂ ತೆಲುಗು ಸಿನಿಮಾ ರಂಗದಲ್ಲಿ ತಮ್ಮ ಗ್ಲ್ಯಾಮರಸ್ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದರು. 1981ರಲ್ಲಿ ಮಲಯಾಳಂ ಸಿನಿಮಾರಂಗ ಪ್ರವೇಶಿಸಿದ್ದ ರಾಣಿ ಪದ್ಮಿನಿ. ಪರಂಕಿಮಾಲಾ, ಸಂಘರ್ಷಂ, ಶರಮ್, ಬದ್ ನಾಮ್ ಹಾಗೂ ಕಿಲ್ಲಿಕೋನ್ಚಲ್ ಹೀರೋಯಿನ್ ಆಗಿ ನಟಿ ಪ್ರೇಕ್ಷಕರ ಮನ ಗೆದ್ದಿದ್ದರು.

Advertisement

ಜನಪ್ರಿಯತೆಯ ಉತ್ತುಂಗದಲ್ಲಿ ಇದ್ದಾಗಲೇ ಕೊಲೆ!
ಅದೃಷ್ಟ ಪರೀಕ್ಷೆಗಾಗಿ ರಾಣಿ ಪದ್ಮಿನಿ ತಮ್ಮ ತಾಯಿ ಇಂದಿರಾ ಕುಮಾರಿ ಜತೆ ಮದ್ರಾಸ್ ಗೆ ಬಂದು ನೆಲೆಯೂರಿದ್ದರು. ಮದ್ರಾಸ್ ನ ಅಣ್ಣಾ ನಗರದಲ್ಲಿ ಬಾಡಿಗೆ ಫ್ಲ್ಯಾಟ್ ವೊಂದರಲ್ಲಿ ವಾಸ ಆರಂಭಿಸಿದ್ದರು.

ಏತನ್ಮಧ್ಯೆ ರಾಣಿ ತಮಿಳು ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡುವ ಸಿನಿಮಾಗಳ ಅವಕಾಶ ಸಿಕ್ಕಿರಲಿಲ್ಲವಾಗಿತ್ತು. ಆದರೆ ರಾಣಿಗೆ ಹೆಸರಿಗೆ ತಕ್ಕಂತೆ ಪ್ರತಿಷ್ಠಿತ ರಾಜಕಾರಣಿಗಳು, ಸಿನಿಮಾ ರಂಗದ ತಂತ್ರಜ್ಞರ ಪರಿಚಯ ಬೆಳೆಯುತ್ತದೆ. ಈ ವೇಳೆ ಅಪಾರ ಪ್ರಮಾಣದ ಹಣ ಬರಲು ಆರಂಭಿವಾಗಿತ್ತು. ಮಲಯಾಳಂ ಸಿನಿಮಾದಲ್ಲೂ ಹೆಸರು ಮಾಡತೊಡಗಿದ್ದರಿಂದ ಕಾರು ಚಾಲಕ, ಅಡುಗೆಯವ ಹಾಗೂ ವಾಚ್ ಮ್ಯಾನ್ ಒಬ್ಬರು ಬೇಕಾಗಿದ್ದಾರೆ ಎಂದು ಪತ್ರಿಕೆಯೊಂದರಲ್ಲಿ ಜಾಹೀರಾತು ಕೊಟ್ಟು ಬಿಟ್ಟಿದ್ದರು!

ಅಂದ ಹಾಗೆ ವಾಚ್ ಮ್ಯಾನ್ ಕೆಲಸಕ್ಕೆ ಕುಟ್ಟಿ(ಲಕ್ಷ್ಮಿ ನರಸಿಂಹನ್), ಜೇಬಾರಾಜ್ ಕಾರು ಚಾಲಕನಾಗಿ ಹಾಗೂ ಗಣೇಶನ್ ಅಡುಗೆಯವನಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಹೀಗೆ ಐದಾರು ವರ್ಷದ ಬಳಿಕ ಪದ್ಮಿನಿ ಸ್ವಂತ ಮನೆ ಖರೀದಿಸಲು 15 ಲಕ್ಷ ರೂಪಾಯಿ ಹಣ ತಂದು ಮನೆಯಲ್ಲಿ ಇಟ್ಟಿದ್ದರು.

Advertisement

ಹಣ ತಂದ ವಿಷಯ ತಿಳಿದ ಚಾಲಕ ಜೇಬಾರಾಜ್ ನಟಿ ರಾಣಿ ಹತ್ಯೆಗೆ ಸಂಚು ರೂಪಿಸಿ ಬಿಟ್ಟಿದ್ದ! ಮೂವರು ಅದಕ್ಕಾಗಿ ಚೂರಿಯನ್ನು ಖರೀದಿಸಿದ್ದರು. 1986ರ ಅಕ್ಟೋಬರ್ 15ರಂದು ರಾಣಿ ಪದ್ಮಿನಿ ಸ್ನಾನಕ್ಕೆ ಹೋದ ಸಂದರ್ಭದಲ್ಲಿ ಮೂವರು ತಾಯಿ ಇಂದಿರಾಕುಮಾರಿ ಮೇಲೆ ಅಟ್ಯಾಕ್ ಮಾಡಿದ್ದರು. ಆಗ ತಾಯಿ ಕೂಗಿಕೊಂಡ ಶಬ್ದ ಕೇಳಿ ರಾಣಿ ಬಾತ್ ರೂಂನಿಂದ ಹೊರಗೋಡಿ ಬಂದಿದ್ದರು. ಏನು ನಡೆಯುತ್ತಿದೆ ಎಂದು ಲೆಕ್ಕಚಾರ ಹಾಕುವುದರೊಳಗೆ ಮೂವರು ಪದ್ಮಿನಿ ಹಾಗೂ ತಾಯಿ ಇಂದಿರಾ ಕುಮಾರಿಯನ್ನು ಕೊಲೆಗೈದು ಬಿಟ್ಟಿದ್ದರು!

ಪ್ರತಿಷ್ಠಿತರ ರಕ್ಷಣೆಗಾಗಿ ಹಂತಕರ ಬಂಧನ!
ನಟಿ ಪದ್ಮಿನಿ ಹಾಗೂ ತಾಯಿ ಇಂದಿರಾಕುಮಾರಿ ಹಂತಕರನ್ನು ಪೊಲೀಸರು ಬಂಧಿಸಿ, ಅವರಿಂದ ಹಣವನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣ ತಮಿಳುನಾಡು, ಕೇರಳದಲ್ಲಿ ದೊಡ್ಡ ಗುಲ್ಲೆಬ್ಬಿಸಿತ್ತು. ಅದಕ್ಕೆ ಕಾರಣವಾಗಿದ್ದು, ರಾಣಿ ಪದ್ಮಿನಿ ಪ್ರತಿಷ್ಠಿತ ರಾಜಕಾರಣಿಗಳ ಜತೆ ನಿಕಟ ಸಂಪರ್ಕ ಹೊಂದಿದ್ದು, ಅವರನ್ನು ರಕ್ಷಿಸುವ ಸಲುವಾಗಿ ಮೂವರನ್ನು ಬಂಧಿಸಿರುವುದಾಗಿ ಆರೋಪಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ ವಿಚಾರಣಾಧೀನ ಕೋರ್ಟ್ ಮೂವರಿಗೂ ಮರಣದಂಡನೆ ಶಿಕ್ಷೆ ವಿಧಿಸಿತ್ತು. ತದನಂತರ ಮದ್ರಾಸ್ ಹೈಕೋರ್ಟ್ ವಾಚ್ ಮ್ಯಾನ್ ಕುಟ್ಟಿ ಹಾಗೂ ಅಡುಗೆ ಕೆಲಸದ ಗಣೇಶನ್ ನನ್ನು ಖುಲಾಸೆಗೊಳಿಸಿತ್ತು. ಕಾರು ಚಾಲಕ ಜೇಬಾರಾಜ್ ನ ಮರಣದಂಡನೆ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿ ತೀರ್ಪು ನೀಡಿತ್ತು. ಆದರೆ ಹೈಕೋರ್ಟ್ ನ ತೀರ್ಪನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಪೀಠ ವಿಚಾರಣಾಧೀನ ಕೋರ್ಟ್ ತೀರ್ಪನ್ನು ಎತ್ತಿಹಿಡಿದು, ಮೂವರ ಮರಣದಂಡನೆ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿ ತೀರ್ಪು ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next