ಬೆಳಗಾವಿ: ಶಾಸಕ ಹಾಗೂ ಸಂಸದರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಆರೋಪಿಸಿ ಸತೀಶ ಜಾರಕಿಹೊಳಿ ಬೆಂಬಲಿಗರು ಎನ್ನಲಾದ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಲ್ಲದೇ, ಕುಲಪತಿ ಹಾಗೂ ಕುಲಸಚಿವರನ್ನು ಎಳೆದಾಡಿ ಹಲ್ಲೆಗೆ ಯತ್ನಿಸಿದ್ದಾರೆ.
ಗಲಾಟೆ ಬಿಡಿಸಲು ಹೋದ ವಿದ್ಯಾರ್ಥಿಗಳ ಮೇಲೂ ಹಲ್ಲೆ ನಡೆಸಿದ್ದಾರೆ. ಇದರಿಂದ ಕೆಲ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಲಾಟೆ ವೇಳೆ ವಿವಿ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಡೆದದ್ದೇನು?: ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಸೋಮವಾರ ಬೆಳಗ್ಗೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಕುಲಪತಿ ಶಿವಾನಂದ ಹೊಸಮನಿ, ಕುಲಸಚಿವ ಸಿದ್ದು ಅಲಗೂರ, ಹಣಕಾಸು ಅಧಿಕಾರಿ ಪರುಶರಾಮ ದುಡಗುಂಟಿ ಸೇರಿದಂತೆ ಹಲವರಿದ್ದರು. ಈ ವೇಳೆ ಕಾಕತಿ ಜಿಪಂ ಸದಸ್ಯ ಸಿದ್ದು ಸುಣಗಾರ, ಕಾಂಗ್ರೆಸ್ ಮುಖಂಡ ರಾಮಣ್ಣ ಗೂಳಿ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಕಾರ್ಯಕರ್ತರು ನೇರವಾಗಿ ಸಭಾಂಗಣಕ್ಕೆ ನುಗ್ಗಿದ್ದಾರೆ. ವಿವಿ ವಿರುದ್ಧ ಘೋಷಣೆ ಕೂಗುತ್ತ ಒಳ ಧಾವಿಸಿ ಕುಲಪತಿ ಅವರೊಂದಿಗೆ ವಾಗ್ವಾದ ನಡೆಸಿ ಅಂಗಿ ಹಿಡಿದು ಎಳೆದಾಡಿ, ಹಲ್ಲೆಗೆ ಯತ್ನಿಸಿದ್ದಾರೆ. ಕುಲಪತಿ ಮೇಲೆ ಹಲ್ಲೆ ಬಿಡಿಸಲು ಹೋದ ವಿದ್ಯಾರ್ಥಿಗಳ ಮೇಲೂ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜತೆಗೆ ಕಿಟಕಿ ಗಾಜು ಪುಡಿ ಪುಡಿ ಮಾಡಿದ್ದಾರೆ. ಟೇಬಲ್, ಕುರ್ಚಿಗಳನ್ನು ಮುರಿದಿದ್ದಾರೆ. ಮೊಬೈಲಿನಲ್ಲಿ ದೃಶ್ಯ ಸೆರೆಹಿಡಿಯುತ್ತಿದ್ದ ವಿದ್ಯಾರ್ಥಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಕಾರಣವೇನು?: ಸೆ.27ರಂದು ವಿವಿ ಸಮೀಪದ ಲಘು ವಾಹನ ಕೆಳಸೇತುವೆ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆಗ ಸಂಸದ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರನ್ನು ಆಹ್ವಾನಿಸಿರಲಿಲ್ಲ. ಇದೇ ಕಾರಣಕ್ಕೆ ಸತೀಶ ಬೆಂಬಲಿಗರು ಕೆರಳಿದ್ದಾರೆ ಎನ್ನಲಾಗಿದ್ದು, ಕುಲಪತಿ ಹೊಸಮನಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕರನ್ನು ಏಕೆ ಕರೆಸಿಲ್ಲ. ವಿವಿಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಹರಿಹಾಯ್ದಿದ್ದಾರೆ. ಗಣ್ಯರನ್ನು ಆಹ್ವಾನಿಸುವ ಜವಾಬ್ದಾರಿ ರಸ್ತೆ ಪ್ರಾಧಿಕಾರಕ್ಕೆ ಬಿಟ್ಟಿದ್ದು. ಆ ಕಾರ್ಯಕ್ರಮಕ್ಕೂ ಹಾಗೂ ವಿವಿಗೂ ಸಂಬಂಧವಿಲ್ಲ ಎಂದು ವಿವಿ ಮೂಲಗಳು ತಿಳಿಸಿವೆ.
ವಿದ್ಯಾದಾನ ಮಾಡುವ ವಿಶ್ವವಿದ್ಯಾಲಯಕ್ಕೆ ನುಗ್ಗಿ ಗೂಂಡಾಗಿರಿ ನಡೆಸಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವುದು ಆತಂಕಕ್ಕೆ ಕಾರಣವಾಗಿದೆ. ಶಿಕ್ಷಣ ಪ್ರೇಮಿ ಎನ್ನುವ ಶಾಸಕ ಸತೀಶ ಜಾರಕಿಹೊಳಿ ಬೆಂಬಲಿಗರಿಂದ ದಾಳಿ ನಡೆಸಿದ್ದು ಸರಿಯಲ್ಲ. ಕೂಡಲೇ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಬೇಕು.
– ಮಾರುತಿ ಅಷ್ಟಗಿ, ಬಿಜೆಪಿ ಮುಖಂಡ