Advertisement

ನಲುವತ್ತರ ಹೊಸ್ತಿಲಲ್ಲಿ  ಲಾವಣ್ಯದ ರಂಗವಲ್ಲಿ

03:45 AM Jan 27, 2017 | Team Udayavani |

ಪುರಾತನ ಕಾಲದಿಂದಲೂ ಕಲೆ ದೇವಾಲಯ, ಮಠಮಾನ್ಯಗಳ ಮತ್ತು ರಾಜಾಶ್ರಯಗಳ ಕೃಪಾಛತ್ರದಡಿ ಅರಳಿ ಸೌರಭ ಸೂಸಿದೆ. ನವೋದಯದ ಕಾಲಘಟ್ಟ ಬದುಕಿನ ಹಲವು ಮಜಲುಗಳಲ್ಲಿ ಪರಿವರ್ತನೆಗೆ ನಾಂದಿಯಾದಂತೆ ಕಲೆ ಮತ್ತು ರಂಗಭೂಮಿಯಲ್ಲೂ ಹೊಸ ದೃಷ್ಟಿಕೋನ ಹಾಗೂ ಮಾರ್ಗಕ್ಕೆ ಕಾರಣವಾಯಿತು. ರಾಜಾಶ್ರಯದ ನಿರ್ವಾತದಿಂದ ಜನಾಶ್ರಯದ ಬಯಲಿನಲ್ಲಿ ಹೊಸ ಆಯಾಮವನ್ನು ಕಂಡುಕೊಂಡಿತು. ಈ ಸಂಕ್ರಮಣದ ಕಾಲದಲ್ಲೇ ಜನ್ಮ ತಾಳಿದ್ದು ಲಾವಣ್ಯ ರಂಗ ಸಂಘಟನೆಯ ವೈಶಿಷ್ಟ್ಯವಾಗಿದೆ.
1977ರಲ್ಲೇ ಜನ್ಮ ತಳೆದ ಕಲಾ ಸಂಘಟನೆ ಹಂತಹಂತವಾಗಿ ಬೆಳೆದು ಬಂದಿದೆ. ಲಾವಣ್ಯದ ಏಳಿಗೆ ಒಂದು ಪವಾಡ ವಲ್ಲ, ನೆರೆಯ ನೀರಲ್ಲ, ಸರೋವರದ ತಳದಿಂದ ಹೊರಟ ಜಲದ ಒರತೆ ಯಂತೆ ಜನ ಬೆಂಬಲದ ಇಟ್ಟಿಗೆಗಳು ವರ್ಷದಿಂದ ವರ್ಷಕ್ಕೆ ಕ್ರಮಕ್ರಮವಾಗಿ ಮಿಳಿತವಾಗಿದ್ದರಿಂದ ಒಂದೊಂದು ದಶಕವೂ ಲಾವಣ್ಯವೆಂಬ ಕಲಾಪುಷ್ಪದ ಒಂದೊಂದು ದಳವಾಗಿ ವಿಸ್ತಾರವಾಗಿ ಅರಳಿದೆ. ಇಂದು ಲಾವಣ್ಯ ಬೈಂದೂರಿನ ಸುತ್ತಮುತ್ತಲಿನ ಹಲವಾರು ಊರುಗಳ ಪ್ರಾತಿನಿಧಿಕ ಕಲಾಸಂಸ್ಥೆ ಯಾಗಿ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ.

Advertisement

    ಪರಿಸರದ ಕಲಾಸಕ್ತರಲ್ಲಿ ರಂಗಪ್ರಜ್ಞೆ, ರಸಾಸ್ವಾದನೆ ಕಲಾಕೃತಿಯ ನೆಲೆ – ಬೆಲೆಗಳ ಅರ್ಥೈಸಿಕೊಳ್ಳುವ ಪರಿಪಕ್ವತೆಯನ್ನು ಮೂಡಿಸುವಲ್ಲಿ ಲಾವಣ್ಯದ ಪರಿಶ್ರಮ ಅಸಾಧಾರಣ ವಾದುದು. ಪ್ರಜ್ಞಾವಂತ ಪ್ರೇಕ್ಷಕರು ಸಂಸ್ಥೆಯ ಸಂಪತ್ತೇ ಆಗಿದ್ದಾರೆ.
    ಸಂಸ್ಥೆಯ ಆರ್ಥಿಕ ಶಿಸ್ತು, ಸಂಪನ್ಮೂಲಗಳ ಕ್ರೋಢೀಕರಣ ಮತ್ತು ಉತ್ತಮ ಸಮಾಜಮುಖೀ ನಡವಳಿಕೆಯಿಂದಾಗಿ ಸುಸಜ್ಜಿತ ಸ್ವಂತ ರಂಗಮನೆಯ ಕನಸು ಸಾಕಾರ ಗೊಂಡಿದೆ. ಸ್ವಂತ ರಂಗ ಪರಿಕರಗಳು, ಪ್ರಸಾಧನ ಹಾಗೂ ವೈವಿಧ್ಯಪೂರ್ಣ ರಂಗದೀಪಗಳು ಪ್ರದರ್ಶನದ ಗುಣಮಟ್ಟವನ್ನು ಹೆಚ್ಚಿಸಿವೆ.

    ಬೇಸಿಗೆಯ ರಜೆಯಲ್ಲಿ ಪ್ರತಿ ವರ್ಷವೂ ಚಿಣ್ಣರ ರಂಗ ಶಿಬಿರವನ್ನು ಹಮ್ಮಿಕೊಳ್ಳುತ್ತಿದೆ. ಬಾಲ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಲಾವಣ್ಯದ ಹೊಸ ತಲೆಮಾರನ್ನು ರೂಪಿಸುತ್ತಾ ಬಂದಿದೆ. ರಂಗ ನಿರ್ದೇಶಕ ರಾದ ಜಿ. ಸೀತಾರಾಮ ಶೆಟ್ಟಿ ಕೂರಾಡಿ, ಸುರೇಶ್‌ ಆನಗಳ್ಳಿ, ರಾಜೇಂದ್ರ ಕಾರಂತ ಬೆಂಗಳೂರು, ಹನುಮಂತ ಪೂಜಾರ್‌, ಸತ್ಯನಾ ಕೊಡೇರಿ ಮುಂತಾದವರ ನಿರ್ದೇಶನದಿಂದ ಲಾವಣ್ಯದ ಹೊಳಪೂ ಹರವೂ ಹೆಚ್ಚಿದೆ. ನಾಲ್ಕು ದಶಕದ ರಂಗಪಯಣದಲ್ಲಿ ದಶಮಾನೋತ್ಸವ, ವಿಶಂತಿ ಆಚರಣೆ, ತ್ರಿಶಂತಿ ಆಚರಣೆ, 33ನೇ ವರ್ಷ ರಂಗಶ್ರೀ ಸಂದರ್ಭಗಳಲ್ಲಿ ರಾಜ್ಯಮಟ್ಟದ ನಾಟಕ ಸ್ಪರ್ಧೆ ಯನ್ನು ಪಂಡಿತ- ಪಾಮರರೂ ಮೆಚ್ಚುವಂತೆ ನಡೆಸಿಕೊಟ್ಟು ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿದೆ. ಅಲ್ಲದೆ ನಾಟಕೋತ್ಸವವನ್ನು ನೆರವೇರಿಸುತ್ತಲೇ ಬಂದಿದೆ. ಇತರ ಕಲೆಗಳನ್ನೂ ಪ್ರೋತ್ಸಾಹಿಸುವುದು, ಅಶಕ್ತ ಕಲಾವಿದರಿಗೆ ಧನಸಹಾಯವನ್ನು ತನ್ನ ಮಿತಿಯಲ್ಲಿಯೇ ಕೈಗೊಳ್ಳುತ್ತಿರುವುದು ಅನುಸರಣೀಯ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಮುಂತಾದ ಎಲ್ಲ ಸ್ತರಗಳ ರಂಗಕೃತಿಗಳಲ್ಲೂ ಕಾಲಕಾಲದ ರಂಗ ಪಲ್ಲಟ- ತಲ್ಲಣಗಳಿಗೆ ಮುಖಾಮುಖೀಯಾಗಿ ಕಾಲದೊಂದಿಗೆ ಬೆಳೆಯುತ್ತಾ 80ಕ್ಕೂ ಹೆಚ್ಚು ಕೃತಿಗಳನ್ನು ರಂಗದ ಮೇಲೆ ಸಾಕ್ಷಾತ್ಕರಿಸಿದೆ.

    ಈ ರಂಗ ಸಂಘಟನೆ ಉಡುಪಿಯಲ್ಲಿ ನಡೆದ 74ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷ ಗೌರವಕ್ಕೆ ಪಾತ್ರವಾಗಿದೆ. ನಾಡಿನಾದ್ಯಂತ 23 ನಾಟಕ ಸ್ಪರ್ಧೆಗಳಲ್ಲಿ ಭಾಗಿಯಾಗಿ 125ಕ್ಕೂ ಹೆಚ್ಚು ಬಹುಮಾನಗಳನ್ನು ವಿವಿಧ ವಿಭಾಗಗಳಲ್ಲಿ ಗಳಿಸಿದೆ. ಸ್ಥಾಪಕ ಕಾರ್ಯದರ್ಶಿ ಗಣೇಶ ಕಾರಂತರಿಗೆ 2011ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಸುವರ್ಣ ರಂಗಸಾಧಕ ರಾಜ್ಯ ಪ್ರಶಸ್ತಿ, ಸ್ಥಾಪಕ ಅಧ್ಯಕ್ಷ ಯು. ಶ್ರೀನಿವಾಸ ಪ್ರಭು ಅವರಿಗೆ 2013ರಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳು ದೊರೆತಿವೆ. ಬೆಳಗಾವಿಯ ವಿಶ್ವ ಕನ್ನಡ ಸಮ್ಮೇಳನದಲ್ಲಿ ರಂಗ ಗೀತೆಗಳನ್ನು ಪ್ರಸ್ತುತ ಪಡಿಸಿ ರಂಗಾಸಕ್ತರ ಮನಸೂರೆಗೊಂಡಿದೆ.
ನಾಲ್ಕು ದಶಕಗಳ ಹಾದಿಯಲ್ಲಿ ಬೆಳೆದು ಬಂದ ಲಾವಣ್ಯ ಇಂದಿನಿಂದ (ಜನವರಿ 27) ಫೆಬ್ರವರಿ 5ರ ತನಕ ದಶದಿನ ಪರ್ಯಂತ ಕಲಾಮಹೋತ್ಸವವನ್ನು ಏರ್ಪಡಿಸಿ ನಲುವತ್ತರ ಸಡಗರವನ್ನು ಕಲಾಪ್ರೇಮಿಗಳಿಗೆ ಹಂಚುತ್ತಿದೆ. 

ಮಂಜುನಾಥ ಶಿರೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next