ಮೈಸೂರು: ಅರಮನೆ ಅಂಗಳದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ದಸರಾ ಸಮಿತಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ನಾನಾ ಬಗೆಯ ಬಣ್ಣ ಬಣ್ಣದ ರಂಗೋಲಿಗಳು ಎಲ್ಲರ ಗಮನ ಸೆಳೆದವು.
ತಾಯಿ ಚಾಮುಂಡೇಶ್ವರಿ ಮೂರ್ತಿ ಹೊತ್ತ ಅಂಬಾರಿ, ಜಂಬೂ ಸವಾರಿ, ಕಲಾ ತಂಡಗಳ ಮೆರವಣಿಗೆಯೊಂದಿಗೆ ಚಂದ್ರಯಾನದ ಸೋಲನ್ನು ಕೂಡ ಗೆಲುವಿನ ಸೋಪಾನ ಎಂಬಂತೆ ಬಿಂಬಿಸುವ ಪ್ರಯತ್ನವನ್ನು ಸೋಮವಾರ ಮುಂಜಾನೆಯೇ ಅರಮನೆ ಆವರಣದಲ್ಲಿ ನೆರೆದಿದ್ದ ವನಿತೆಯರು ರಂಗೋಲಿಯ ಚಿತ್ತಾರ ಮೂಡಿಸುವ ವರ್ಣರಂಜಿತಗೊಳಿಸಿದರು.
ರಂಗೋಲಿ ಸ್ಪರ್ಧೆಯಲ್ಲಿ ಮೈಸೂರು ಸೇರಿದಂತೆ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ 80 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಅದರಲ್ಲಿ ಆರು ಮಂದಿ ಮಕ್ಕಳು ಭಾಗವಹಿಸಿದ್ದು, ವಿಶೇಷವಾಗಿತ್ತು. ಕೆ.ಆರ್. ನಗರದ ಭಾಗ್ಯ ರಮೇಶ್ ಅವರು ನವಧಾನ್ಯಗಳನ್ನು ಬಳಸಿಕೊಂಡು ವಿಶೇವಾಗಿ ರಚಿಸಿದ್ದ ರಂಗೋಲಿ ಗಮನಸೆಳೆಯಿತು.
ಇದಕ್ಕೂ ಮುನ್ನ ರಂಗೋಲಿ ಸ್ಪರ್ಧೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಶಶಿಕಲಾ ಅಣ್ಣಾ ಸಾಹೇಬ್ ಜೊಲ್ಲೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ.ರಾಮದಾಸ್, ಸಮಿತಿ ಅಧ್ಯಕ್ಷೆ ವಿದ್ಯಾ ಅರಸ್, ಅನ್ನಪೂರ್ಣ, ಡಾ.ಪ್ರೇಮ್ ಕುಮಾರ್, ಟಿ.ಎನ್. ಶಾಂತ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವಿಜೇತರ ಪಟ್ಟಿ: ದೊಡ್ಡವರ ವಿಭಾಗ: ಶ್ರೀರಂಗಪಟ್ಟಣ ಶ್ವೇತಾ (ಪ್ರಥಮ), ಶ್ರೀರಾಂಪುರದ ಪಿ.ಚಂದ್ರಕಲಾ (ದ್ವಿತೀಯ), ಶ್ರೀರಾಂಪೇಟೆಯ ಜಾನಕಮ್ಮ (ತೃತೀಯ). ಮಕ್ಕಳ ವಿಭಾಗ: ಸಿ.ಮೇಘನಾ (ಪ್ರಥಮ), ಹೊನ್ನಶ್ರಿ (ದ್ವಿತೀಯ), ವರ್ಷ(ತೃತೀಯ).