ರಂಗ ತುಂಬಾ ಬಡ ಹುಡುಗ. ಓದುವ ಆಸಕ್ತಿ ಇದ್ದರೂ ಬಡತನದಿಂದಾಗಿ ಓದಲಾಗಿರಲಿಲ್ಲ. ಅರ್ಧಕ್ಕೇ ಶಿಕ್ಷಣ ನಿಲ್ಲಿಸಬೇಕಾಗಿ ಬಂದಿತ್ತು. ಒಂದು ದಿನ ರಂಗನಿಗೆ ತುರ್ತಾಗಿ ಒಂದಷ್ಟು ದುಡ್ಡು ಬೇಕಾಗಿತ್ತು. ಸಾಲ ಕೇಳ್ಳೋಣವೆಂದು ಬಡ್ಡಿ ಬಸಪ್ಪನ ಬಳಿಗೆ ತೆರಳಿದ. ಬಡ್ಡಿ ಬಸಪ್ಪ ಸಾಕ್ಷಿಯಿಲ್ಲದೆ ಯಾರಿಗೂ ಸಾಲ ಕೊಟ್ಟವನೇ ಅಲ್ಲ. ರಂಗ ಅಲ್ಲಿಗೆ ಹೋದಾಗ ಬಸಪ್ಪ ಸಾಲ ಹಿಂದಿರುಗಿಸದ ಯಾರಿಗೋ ಬೈಯುತ್ತಿದ್ದ. ಅಲ್ಲಿಯೇ ಸತ್ತು ಬಿದ್ದಿದ್ದ ಇಲಿಯನ್ನು ತೋರಿಸಿ “ಸಾಲ ತೀರಿಸಬೇಕೆಂಬ ಛಲ ಇದ್ದವನಿಗೆ ಸತ್ತ ಇಲಿಯೂ ವ್ಯರ್ಥವಲ್ಲ. ಅದನ್ನು ಇಟ್ಟುಕೊಂಡು ಬುದ್ಧಿವಂತಿಕೆಯಿಂದ ಹಣ ಸಂಪಾದಿಸುತ್ತಾರೆ’ ಎಂದನು. ಈ ಮಾತನ್ನು ರಂಗ ಕೇಳಿಸಿಕೊಂಡನು. ಈ ಸಮಯದಲ್ಲಿ ತಾನು ಸಾಲ ಕೇಳಿದರೆ ನನ್ನನ್ನು ಬೈಯುವುದು ಖಚಿತವೆಂದು ಹಿಂತಿರುಗಿ ಹೋದನು. ಹೋಗುವಾಗ ಬರಿಗೈಯಲ್ಲಿ ಹೋಗಲಿಲ್ಲ, ಸತ್ತು ಬಿದ್ದಿದ್ದ ಇಲಿಯನ್ನೆತ್ತಿಕೊಂಡು ಹೋದನು.
ದಾರಿಯಲ್ಲಿ ಒಬ್ಬ ಶ್ರೀಮಂತ ಸಾಕು ಬೆಕ್ಕನ್ನೆತ್ತಿಕೊಂಡು ಬರುತ್ತಿದ್ದ. ರಂಗನ ಕೈಲಿದ್ದ ಇಲಿಯನ್ನು ನೋಡಿ ಹಸಿದಿದ್ದ ಬೆಕ್ಕು ಕೂಗಿಕೊಂಡಿತು. ಶ್ರೀಮಂತ ರಂಗ ಬಳಿ ಇಲಿಯನ್ನು ಪಡೆದು ಅದಕ್ಕೆ ಪ್ರತಿಯಾಗಿ ದುಡ್ಡು ಕೊಟ್ಟ. ಆ ದುಡ್ಡನ್ನು ಇಟ್ಟುಕೊಂಡು ಸಂತೆಯಿಂದ ಬೆಲ್ಲ ಖರೀದಿಸಿ ತಂದನು. ಬೆಲ್ಲದಿಂದ ಪಾನಕವನ್ನು ತಯಾರಿಸಿ ಅದನ್ನು ಮಡಿಕೆಯೊಂದರಲ್ಲಿ ತುಂಬಿಕೊಂಡು ಊರಿನ ಪ್ರಮುಖ ಬೀದಿಯಲ್ಲಿ ಮರದ ನೆರಳಿನಲ್ಲಿ ಕುಳಿತನು. ಕಟ್ಟಿಗೆ ಕಡಿದು ತರಲು ಕಾಡಿಗೆ ಹೋಗಿದ್ದವರು ಅದೇ ದಾರಿಯಲ್ಲಿ ಬಂದರು. ರಂಗ ತಯಾರಿಸಿ ತಂದಿದ್ದ ಬೆಲ್ಲದ ಪಾನಕ ನಿಮಿಷಮಾತ್ರದಲ್ಲಿ ಖಾಲಿಯಾಯಿತು.
ಪಾನಕ ಕುಡಿದವರ ಬಳಿ ದುಡ್ಡಿಲ್ಲದ್ದರಿಂದ ಕಟ್ಟಿಗೆಗಳನ್ನೇ ಕೊಟ್ಟು ಹೋದರು. ರಂಗ ಆ ಕಟ್ಟಿಗೆಗಳನ್ನು ಕಾರ್ಖಾನೆಯವರಿಗೆ ನೀಡಿ ಸಾವಿರಾರು ರುಪಾಯಿ ಸಂಪಾದಿಸಿದನು. ಬಂದ ಲಾಭದಲ್ಲಿ ಇನ್ನಷ್ಟು ಬೆಲ್ಲದ ಗಟ್ಟಿಗಳನ್ನು ಕೊಂಡುಕೊಂಡು ಪಾನಕ ತಯಾರಿಸಿದನು. ಅವನ ಬಳಿ ದುಡ್ಡು ಶೇಖರಣೆಯಾಗತೊಡಗಿತು. ಬಂದ ದುಡ್ಡಿನಲ್ಲಿ ವ್ಯಾಪಾರ ಮಾಡಿಕೊಂಡು ಸುಮ್ಮನಿದ್ದು ಬಿಡಲಿಲ್ಲ. ಅಂಗಡಿಯನ್ನು ತೆರೆದು ಕೆಲಸದವರನ್ನು ನೇಮಿಸಿಕೊಂಡ. ದುಡ್ಡಿಲ್ಲವೆಂದು ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿದ್ದು ನೆನಪಾಯಿತು. ಅದಕ್ಕಾಗಿ ತಾನು ಮತ್ತೆ ಶಾಲೆಗೆ ಸೇರಿಕೊಂಡ.
ಪ.ನಾ.ಹಳ್ಳಿ.ಹರೀಶ್ ಕುಮಾರ್