Advertisement

ಬಹುರೂಪಿಗೆ ಸಜ್ಜಾಗುತ್ತಿದೆ ರಂಗಾಯಣ

04:18 PM Dec 06, 2022 | Team Udayavani |

ಮೈಸೂರು: ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ರಂಗಾಯಣ ಸಜ್ಜುಗೊಳ್ಳುತ್ತಿದೆ. ವೇದಿಕೆಗಳ ವಿನ್ಯಾಸ, ಆವರಣ ಸ್ವಚ್ಛತಾ ಕಾರ್ಯ, ನಾಟಕಗಳ ತಾಲೀಮು, ಮಳಿಗೆಗಳ ನಿರ್ಮಾಣ, ಚಿತ್ರಕಲಾ ಶಿಬಿರ ಸೇರಿದಂತೆ ಎಲ್ಲಾ ಸಿದ್ಧತೆಗಳು ಗರಿಗೆದರಿವೆ.

Advertisement

ಡಿ.8ರಿಂದ 15ರವರೆಗೆ ನಡೆಯುವ ಬಹುರೂಪಿ ರಾಷ್ಟ್ರೀಯ ರಂಗೋತ್ಸವದಲ್ಲಿ ಒಂದು ವಾರ ಕಾಲ ರಂಗಾಸಕ್ತರಿಗೆ “ಕಲಾರಸ’ ಉಣಬಡಿಸಲುರಂಗಾಯಣದ ಅಂಗಳ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ.

ಭಾರತೀಯತೆ ಪರಿಕಲ್ಪನೆ ಅಡಿಯಲ್ಲಿ ನಾಟಕಗಳು ಸೇರಿದಂತೆ ಜಾನಪದ ಕಲಾಪ್ರದರ್ಶನ, ರಾಷ್ಟ್ರೀಯ ಚಲನಚಿತ್ರೋತ್ಸವ, ರಾಷ್ಟ್ರೀಯ ವಿಚಾರಸಂಕಿರಣ, ಪುಸ್ತಕ ಪ್ರದರ್ಶನ, ಕರಕುಶಲ ವಸ್ತುಪ್ರದರ್ಶನ, ದೇಸಿ ಆಹಾರ ಮೇಳ ಮತ್ತು ಪ್ರಾತ್ಯಕ್ಷಿಕೆಗಳು, ಚಿತ್ರಕಲಾ ಶಿಬಿರಒಳಗೊಂಡಂತೆ ರಂಗೋತ್ಸವ ರೂಪಿಸಲಾಗಿದೆ. ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟಹಾಗೂ ಪುಸ್ತಕ ಮಾರಾಟದ ಮಳಿಗೆಗಳ ನಿರ್ಮಾಣ ಕಾರ್ಯ ನಡೆದಿದ್ದರೆ, ರಂಗ ವಿನ್ಯಾಸಕ ದ್ವಾರಕನಾಥ್‌ ನೇತೃತ್ವದಲ್ಲಿ ಹತ್ತಾರು ಕಲಾವಿದರು “ಭಾರತೀಯತೆ’ಪರಿಕಲ್ಪನೆ ಅಡಿಯಲ್ಲಿ ಪೋಸ್ಟರ್‌ ಹಾಗೂ ಭಿತ್ತಿಚಿತ್ರಗಳನ್ನು ತಯಾರು ಮಾಡುತ್ತಿದ್ದಾರೆ. ಜತೆಗೆ ಕಾರ್ಯಕ್ರಮನಡೆಯಲಿರುವ ವೇದಿಕೆಗಳನ್ನು ಸಿದ್ಧ ಮಾಡುತ್ತಿದ್ದಾರೆ.ಈಕಲಾವಿದರು ಸಿದ್ಧ ಮಾಡುತ್ತಿರುವ ಪೋಸ್ಟರ್‌ ಹಾಗೂಭಿತ್ತಿಚಿತ್ರಗನ್ನು ರಂಗಾಯಣದ ಅಂಗಳದ ಎಲ್ಲ ಕಡೆ ಅಳವಡಿಸಲಾಗುತ್ತದೆ.

60 ಮಳಿಗೆಗಳಿಗೆ ಸಿದ್ಧತೆ: ಕರಕುಶಲ, ಆಹಾರ, ತಿನಿಸು, ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕಾಗಿ 60 ಮಳಿಗೆಗಳು ತಲೆ ಎತ್ತುತ್ತಿವೆ. ದೇಶದ ನಾನಾ ಭಾಗಗಳಿಂದ ಕುಶಲಕರ್ಮಿಗಳು ರಂಗೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಈ ಪೈಕಿ ಕರಕುಶಲ ಮತ್ತು ಬಟ್ಟೆಗಾಗಿ 15 ಮಳಿಗೆ, ದೇಸಿ ಆಹಾರಕ್ಕಾಗಿ 15ಕ್ಕೂ ಹೆಚ್ಚಿನ ಮಳಿಗೆಗಳನ್ನು ಸಿದ್ಧಪಡಿಸಲಾಗಿದೆ. ಸಹಜ ಕೃಷಿ ಆಹಾರಗಳು, ಮೈಸೂರು ಶೈಲಿ, ಕೊಡಗು, ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ವಿಶೇಷ ಬಗೆ ಬಗೆಯ ಆಹಾರ ಪದಾರ್ಥಗಳ ಘಮಲು ಹಂಚಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಶೇಷವಾಗಿ ಉತ್ತರ ಕನ್ನಡ ತಿನಿಸು ತೊಡದೇವು, ದಾವಣಗೆರೆ ಬೆಣ್ಣೆ ದೊಸೆ, ಗೋಕಾಕ್‌ ಕರದಂಟು, ಹಾಲು ಬಾಯಿ ಇರಲಿದೆ. ಪುಸ್ತಕ ಪ್ರದರ್ಶನಕ್ಕೆ 15 ಮಳಿಗೆ ಸಿದ್ಧತೆ ಮಾಡಲಾಗುತ್ತಿದೆ.

ಕಲಾವಿದರು, ಗಣ್ಯರಿಗೆ ಉಳಿಯಲು ವ್ಯವಸ್ಥೆ: ಪ್ರತಿದಿನ ಉತ್ಸವಕ್ಕೆ ಆಗಮಿಸುವ 200ರಿಂದ 250 ಕಲಾವಿದರು, ಗಣ್ಯರಿಗಾಗಿ ನಗರದ ಖಾಸಗಿ ಹೋಟೆಲ್‌ಗಳು ಹಾಗೂ ಸರ್ಕಾರಿ ಗೆಸ್ಟ್‌ಹೌಸ್‌ಗಳನ್ನು ಕಾಯ್ದಿರಿಸಲಾಗಿದೆ. ಗೆಸ್ಟ್‌ಹೌಸ್‌ಗಳಿಂದ ರಂಗಾಯಣಕ್ಕೆ ಕರೆತರಲು ಬಸ್‌ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.

Advertisement

ನಾಟಕದ ಟಿಕೆಟ್‌ಗಳ ಭರ್ಜರಿ ಮಾರಾಟ: ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ನಾಟಕಗಳ ಟಿಕೆಟ್‌ ಮಾರಾಟ ಆರಂಭವಾಗಿದ್ದು, ರಂಗಾಸಕ್ತರಿಂದ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. ವಿಶೇಷವಾಗಿ ಭೂಮಿಗೀತ ರಂಗವೇದಿಕೆಯಲ್ಲಿ

ಡಿ.9 ರಂದು ಸಂಜೆ 6.30ಕ್ಕೆ ನಡೆಯಲಿರುವ “ಟಿಪ್ಪು ನಿಜ ಕನಸುಗಳು’ ನಾಟಕದ ಎಲ್ಲ ಟಿಕೆಟ್‌ಗಳು ಖಾಲಿಯಾಗಿವೆ. ಉಳಿದಂತೆ ಸಂಸ್ಕೃತಭಾಷೆಯ ಕರ್ಣಭಾರಂ, ಕನ್ನಡದ ಲೀಲಾವತಿ,ಚಿದಂಬರ ರಹಸ್ಯ, ಕರಿಮಾಯಿ, ತುಳು ಭಾಷೆಯ ಕಾಪ ನಾಟಕಗಳ ಟಿಕೆಟ್‌ಗೂ ಬೇಡಿಕೆ ಹೆಚ್ಚಾಗಿದೆ.

ಈ ಬಾರಿಯ ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ರಂಗಾಯಣದ ಅಂಗಳದಲ್ಲಿ ಸಿದ್ಧತೆ ಭರದಿಂದ ಸಾಗಿದೆ. ಕರಕುಶಲ, ಆಹಾರ, ತಿನಿಸು, ಪುಸ್ತಕಪ್ರದರ್ಶನ ಮತ್ತು ಮಾರಾಟಕ್ಕಾಗಿ ರಂಗಾಯಣದ ಅಂಗಳದಲ್ಲಿ ವ್ಯವಸ್ಥಿತ 60 ಮಳಿಗೆಗಳು ತಲೆ ಎತ್ತುತ್ತಿವೆ. ಬಹುರೂಪಿ ಕುರಿತು ರಂಗ ವಿನ್ಯಾಸಕ ದ್ವಾರಕನಾಥ್‌ ನೇತೃತ್ವದಲ್ಲಿ ಹತ್ತಾರು ಕಲಾವಿದರು ಪೋಸ್ಟರ್‌, ಭಿತ್ತಿಚಿತ್ರಗಳನ್ನು ತಯಾರಿಸುತ್ತಿದ್ದಾರೆ.– ಅಡ್ಡಂಡ ಸಿ.ಕಾರ್ಯಪ್ಪ, ರಂಗಾಯಣ ನಿರ್ದೇಶಕ

-ಸತೀಶ್‌ ದೇಪುರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next