“ಮಠ’, “ಎದ್ದೇಳು ಮಂಜುನಾಥ’ ಸಿನಿಮಾಗಳ ಮೂಲಕ ಚಂದನವನದಲ್ಲಿ ಕಾಮಿಡಿ ಕಮಾಲ್ ಮಾಡಿದ್ದ ನವರಸ ನಾಯಕ ಜಗ್ಗೇಶ್ ಮತ್ತು ನಿರ್ದೇಶಕ ಗುರುಪ್ರಸಾದ್ ಜೋಡಿ ಈ ಬಾರಿ “ರಂಗನಾಯಕ’ ಸಿನಿಮಾದ ಮೂಲಕ ಹ್ಯಾಟ್ರಿಕ್ ಬಾರಿಸುವ ತಯಾರಿಯಲ್ಲಿದೆ.
ಹೌದು, “ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ಎ. ಆರ್. ವಿಖ್ಯಾತ್ ನಿರ್ಮಾಣದ ಬಹುನಿರೀಕ್ಷಿತ ಸಿನಿಮಾ “ರಂಗನಾಯಕ’ ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ.
“ತುಂಬಾ ವರ್ಷಗಳ ನಂತರ ನಾನು ಮತ್ತು ಗುರುಪ್ರಸಾದ್ ಒಟ್ಟಿಗೇ ಮಾಡುತ್ತಿರುವ ಸಿನಿಮಾ “ರಂಗನಾಯಕ’. ನನ್ನ ಪ್ರಕಾರ ಇದು ಸಂಪೂರ್ಣವಾಗಿ ನಿರ್ದೇಶಕ ಗುರುಪ್ರಸಾದ್ ಸಿನಿಮಾ. ಇಲ್ಲಿ ನಾನೊಬ್ಬ ಕಲಾವಿದ ಅಷ್ಟೇ. ಬಾಲ್ಯದಿಂದಲೂ ನನ್ನ ಕನಸು ನಟನೆ, ನನ್ನನ್ನು ನಗಿಸಲು ಇಟ್ಟುಕೊಂಡು ಗುರುಪ್ರಸಾದ್ ತಮ್ಮ ಬುದ್ಧಿಶಕ್ತಿಯನ್ನು ಬಳಸಿಕೊಂಡು ಈ ಸಿನಿಮಾ ಮಾಡಿದ್ದಾರೆ. ನನ್ನ ಹಿಂದಿನ ಯಾವುದೇ ಸಿನಿಮಾದ ನೆರಳು ಈ ಸಿನಿಮಾದಲ್ಲಿಲ್ಲ’ ಎಂಬುದು “ರಂಗನಾಯಕ’ ಸಿನಿಮಾದ ಬಗ್ಗೆ ನಟ ಜಗ್ಗೇಶ್ ಮಾತು.
“ರಂಗನಾಯಕ’ನ ಬಗ್ಗೆ ಮಾತನಾಡುವ ನಿರ್ದೇಶಕ ಗುರುಪ್ರಸಾದ್, “”ಮಠ’, “ಎದ್ದೇಳು ಮಂಜುನಾಥ’ ಆದ ಮೇಲೆ ತುಂಬಾ ಪ್ಲಾÂನ್ ಮಾಡಿ “ರಂಗನಾಯಕ’ ಸಿನಿಮಾ ಮಾಡಿದ್ದೇವೆ. ಇದು ನನ್ನ ಐದನೇ ಸಿನಿಮಾ. ಈಗಾಗಲೇ ಟ್ರೇಲರ್‌ನಲ್ಲಿ ಒಂದಷ್ಟು ಡೈಲಾಗ್‌ಗಳನ್ನು ಕೊಟ್ಟು “ನಮ್ಮ ಸಿನಿಮಾ ಹೀಗಿದೆ… ನೋಡಿ ಬನ್ನಿ..’ ಎಂದು ಆಹ್ವಾನ ನೀಡಿದ್ದೇನೆ. ಈ ಸಿನಿಮಾದಲ್ಲಿ ನಾನೊಬ್ಬ ನಿರ್ದೇಶಕನಾಗಿಯೇ ಅಭಿನಯಿಸಿದ್ದೇನೆ. ಹತಾಶ ಪ್ರೇಕ್ಷಕನಾದವನು ಏನು ಹೇಳಬೇಕೆಂದಿರುವನೋ ಅದನ್ನೇ ನಾನಿಲ್ಲಿ ಹೇಳಿದ್ದೇನೆ. ಇದನ್ನು ವಿಡಂಬನೆಯ ಚಿತ್ರ ಅನ್ನಲೂಬಹುದು. ಒಂದು ಕಾಲಘಟ್ಟದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ವಿಶೇಷವಾದ ಸಿನಿಮಾ ಇದಾಗಲಿದೆ ಎಂಬ ವಿಶ್ವಾಸ ನನಗಿದೆ. ಕೆಲವೊಂದು ಸಂಭಾಷಣೆಯನ್ನು ಹತಾಶೆಯ ಪ್ರೇಕ್ಷಕನಾಗಿ ಬರೆದಿದ್ದೇನೆ, ಧೈರ್ಯವಾಗಿ ಹೇಳಿದ್ದೇನೆ. ಸಿನಿಮಾದಲ್ಲಿ ಮೇಕಿಂಗ್‌ಗಿಂತ ಕಂಟೆಂಟ್ ಇರಬೇಕು. “ರಂಗನಾಯಕಿ’ ಸಿನಿಮಾಕ್ಕೂ ಈ ಸಿನಿಮಾಕ್ಕೂ ಸಂಬಂಧವಿಲ್ಲ, ನಾಯಕ ಜನರಿಗೆ ಎಂಟರ್‌ಟೈನ್ ಮಾಡುವನು. ಇದೊಂದು ವಿದೂಷಕನ ಕಥೆಯೂ ಹೌದು’ ಎನ್ನುತ್ತಾರೆ.
ಇನ್ನು “ರಂಗನಾಯಕ’ ಸಿನಿಮಾದಲ್ಲಿ ನಟ ಜಗ್ಗೇಶ್, ಗುರುಪ್ರಸಾದ್ ಜೊತೆಗೆ ಚೈತ್ರಾ ಕೊಟ್ಟೂರು, ಎಂ. ಕೆ. ಮಠ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾದ ಹಾಡುಗಳಿಗೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾಕ್ಕೆ ಸಾಮ್ರಾಟ್ ಅಶೋಕ್ ಗೌತಮ್ ಛಾಯಾಗ್ರಹಣ, ಉಮೇಶ್ ಬಿ. ಆರ್. ಸಂಕಲನವಿದೆ. ಒಟ್ಟಾರೆ ಸದ್ಯ ತನ್ನ ಟೈಟಲ್, ಕಂಟೆಂಟ್, ಟ್ರೇಲರ್ ಮೂಲಕ ಸೌಂಡ್ ಮಾಡುತ್ತಿರುವ “ರಂಗನಾಯಕ’ ಥಿಯೇಟರ್‌ನಲ್ಲಿ ಹೇಗೆ ಕಮಾಲ್ ಮಾಡಲಿದ್ದಾನೆ ಅನ್ನೋದು ಈ ವಾರ ಗೊತ್ತಾಗಲಿದೆ.
ಜಿ. ಎಸ್. ಕಾರ್ತಿಕ ಸುಧನ್