Advertisement

ಕೇಳಿದ್ದು “ಕಲ್ಚರ್‌’, ಆದದ್ದು “ಅಗ್ರಿ’, ಕೊಟ್ಟದ್ದು “ಅಗ್ರಿಕಲ್ಚರ್‌’

10:13 PM Feb 14, 2021 | Team Udayavani |

ಉಡುಪಿ: ಕೇಳಿದ್ದು “ಕಲ್ಚರ್‌’ ವಿಭಾಗವನ್ನು, ಕೊಟ್ಟದ್ದು “ಅಗ್ರಿಕಲ್ಚರ್‌’, ಕೊನೆಗೆ “ಅಗ್ರಿ’ ಆದೆ. ಇದು ರಂಗಭೂಮಿ ಉಡುಪಿ ಹಿರಿಯ ರಂಗಕರ್ಮಿ ಬಿ. ಜಯಶ್ರೀ ಅವರ ಮನದಾಳದ ಮಾತು. ಸಂದರ್ಭ ಉಡುಪಿ ಎಂಜಿಎಂ ಕಾಲೇಜಿನ ಆವರಣದಲ್ಲಿ ಶನಿವಾರ “ರಂಗ ಸಾಮ್ರಾಜಿn’ ರಂಗಭೂಮಿ ಪುರಸ್ಕಾರ ಪಡೆದ ಸಂದರ್ಭ ಸಭಾಸದರೊಂದಿಗೆ ನಡೆದ ಮುಖಾಮುಖೀ.

Advertisement

ರಾಜ್ಯಸಭೆಗೆ ಕಡಿಮೆ ಆದ್ಯತೆಗೆ ಆಕ್ಷೇಪ :

ರಾಜ್ಯಸಭಾ ಸದಸ್ಯೆಯಾಗಿದ್ದಾಗ ಸಂಸತ್ತಿನಲ್ಲಿ ರಾಜ್ಯಸಭೆ ಸದಸ್ಯರಿಗೆ ಪ್ರಶ್ನೆಗಳನ್ನು ಕೇಳಲು ಆದ್ಯತೆ ಕಡಿಮೆ ಇದ್ದಿರುವುದನ್ನೂ ಆಕ್ಷೇಪಿಸಿದ್ದೆ. ವಿವಿಧ ಉಪಸಮಿತಿಗಳಿಗೆ ನೇಮಿಸುವಾಗ ನಾನು ಸಂಸ್ಕೃತಿ ಇಲಾಖೆಯನ್ನು ಕೇಳಿದೆ. ನನಗೆ ವೈದ್ಯಕೀಯ, ಜವುಳಿ, ಕೃಷಿ ಹೀಗೆ ವಿವಿಧ ಇಲಾಖೆಗಳನ್ನು ಕೊಟ್ಟರು. ಇಂತಹ ಕ್ಷೇತ್ರಗಳಲ್ಲಿ ನಾನೇನು ಮಾಡುವುದು? ಕೃಷಿ ಸಂಸ್ಕೃತಿಯನ್ನೂ ನಾನು ಕಂಡಿದ್ದೆ. ರೈತರು ಆ ಕಾಲದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಿ ರಾತ್ರಿ ನಾಟಕಗಳನ್ನು ನೋಡಲು ಬರುತ್ತಿದ್ದರು. ನಾಟಕ ನೋಡುವುದು ಮತ್ತು ಹಣ ಸುರಕ್ಷವಾಗಿರುವುದು ಅವರಿಗೆ ಎರಡು ಲಾಭಗಳಾಗುತ್ತಿದ್ದವು ಎಂದರು.

ರಂಗ ಸಂಗೀತ ಜನಪದಕ್ಕೆ ಹತ್ತಿರ :

ರಂಗ ಸಂಗೀತವೆಂದರೆ ಅದು ದೃಶ್ಯ ಮಾಧ್ಯಮಕ್ಕೆ ಹೊಂದಿಕೊಂಡ ಕಲೆ. ಅದು  ಜನಪದಕ್ಕೆ ಹತ್ತಿರ. ಕಲ್ಪನೆಗೆ ಅನುಗುಣವಾಗಿ ರಂಗಗೀತೆ ಮೂಡುತ್ತದೆ. ಅದಕ್ಕೆ ಶಾಸ್ತ್ರೀಯತೆ, ಕೋಡಿಫಿಕೇಶನ್‌ ಎಂದಿಲ್ಲ. ರಾವಣನನ್ನು ಉದ್ದೇಶಿಸಿ ಶೂರ್ಪನಖೀ ಹಾಡುವಾಗ ಶಾಸ್ತ್ರೀಯ ಸಂಗೀತದಂತೆ ಹಾಡಿದರೆ ಆಗುತ್ತದೆಯೆ? ಝಾಡಿಸಿಕೊಂಡೇ ಹಾಡಬೇಕು ಎಂದು ಹಾಡಿಯೇ ತೋರಿಸಿದರು.

Advertisement

ಹಿಂದೆ ರಂಗಭೂಮಿ ಸಂಸ್ಥೆ ನನ್ನ ಬಂಧು ಚೆಂಗಣ್ಣನವರಿಗೆ ಪ್ರಶಸ್ತಿ ನೀಡಿತ್ತು. ಈಗ ನಾನು ಪಡೆಯುತ್ತಿದ್ದೇನೆ ಎಂದು ಜಯಶ್ರೀ ಪುರಸ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಈ ಪುರಸ್ಕಾರದಿಂದ ಸಂಸ್ಥೆ ಎತ್ತರಕ್ಕೇರಿತು ಎಂದು ಅಭಿಪ್ರಾಯಪಟ್ಟರು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಭೀಮಸೇನ್‌ ಆರ್‌., ಹಿರಿಯ ಕಲಾ ನಿರ್ದೇಶಕ ಶಶಿಧರ ಅಡಪ ಅತಿಥಿಗಳಾಗಿದ್ದರು. ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಅಭಿನಂದನ ಭಾಷಣ ಮಾಡಿದರು. ಅಧ್ಯಕ್ಷತೆಯನ್ನು ರಂಗಭೂಮಿ ಅಧ್ಯಕ್ಷ ಡಾ|ತಲ್ಲೂರು ಶಿವರಾಮ ಶೆಟ್ಟಿ ವಹಿಸಿದ್ದರು. ಉಪಾಧ್ಯಕ್ಷ ನಂದಕುಮಾರ್‌ ಸ್ವಾಗತಿಸಿ, ಪ್ರ.ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

ಕೃಷಿ ಪ್ರಾಮುಖ್ಯ :

ಕೃಷಿಯೇ ದೇಶದ ಜೀವಾಳ. ರೈತರನ್ನು ಬೆಳೆಸಬೇಕು ಎಂದು ಜಯಶ್ರೀಯವರು ರಾಜ್ಯಸಭಾ ಸದಸ್ಯೆಯಾಗಿದ್ದಾಗ ಸಂಸತ್ತಿನಲ್ಲಿ ಗುಡುಗಿದ್ದರು ಎಂದು ಕರ್ನಾಟಕ ಪಂಚಾಯತ್‌ರಾಜ್‌ ಪರಿಷತ್‌ ಪ್ರ.ಕಾರ್ಯದರ್ಶಿ ತುಮಕೂರಿನ ಕಾಡಶೆಟ್ಟಿಹಳ್ಳಿ ಸತೀಶ್‌ “ಸಾರ್ವಜನಿಕ ಜೀವನ’ ಕುರಿತು ಮಾತನಾಡುವಾಗ ಉಲ್ಲೇಖೀಸಿದರು. ಮೈಸೂರಿನ ಪತ್ರಕರ್ತೆ ಪ್ರೀತಿ ನಾಗರಾಜ್‌ “ರಂಗಪಯಣ’, ನಿರ್ದೇಶಕ ಶಶಿಧರ ಅಡಪ “ರಂಗಭೂಮಿ’ ಕ್ಷೇತ್ರ ಕುರಿತು ಬೆಳಕು ಚೆಲ್ಲಿದರು. ಪೂರ್ಣಿಮಾ ಸುರೇಶ್‌ ಕಾರ್ಯಕ್ರಮ ನಿರ್ವಹಿಸಿ ಶಿಲ್ಪಾ ಜೋಷಿ ವಂದಿಸಿದರು.

40 ವರ್ಷ ಕಾಯಬೇಕು! :

ರಂಗಭೂಮಿ ದಿಢೀರನೆ ಯಶಸ್ಸು ತಂದು ಕೊಡುವುದಿಲ್ಲ. ಅಪೇಕ್ಷೆ ಪಡದೆ ಕರ್ತವ್ಯವೆಂಬಂತೆ ಕೆಲಸ ಮಾಡುತ್ತಾ ಹೋಗಬೇಕು. ಫ‌ಲ ಸಿಗುವಾಗ 40 ವರ್ಷ ದಾಟಿರುತ್ತದೆ. ಆಗ ಮಾತ್ರ ಜನರು ಸ್ವಲ್ಪ ಸ್ವಲ್ಪವೇ ಗುರುತಿಸಲು ಆರಂಭಿಸುತ್ತಾರೆ. ರಂಗ ಕರ್ಮಿಗೆ ತಾಳ್ಮೆ ಬೇಕು ಎಂದು ಜಯಶ್ರೀ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next