Advertisement

ಬೊಮ್ಮಾಯಿ‌ ಸರ್ಕಾರ ಕಾಲಿನಿಂದ ಮುಡಿಯವರೆಗೂ ಭ್ರಷ್ಟಾಚಾರದಲ್ಲಿ ಮುಳುಗಿದೆ: ಸುರ್ಜೇವಾಲಾ

02:35 PM Oct 19, 2021 | Team Udayavani |

ಕಲಬುರಗಿ: ರಾಜ್ಯದಲ್ಲಿ ಬಸವರಾಜ್ ಬೊಮ್ಮಾಯಿ‌ ನೇತೃತ್ವದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ.‌ ಕಾಲಿನಿಂದ ಮುಡಿಯವರೆಗೂ ಬೊಮ್ಮಾಯಿ‌ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಆರೋಪಿಸಿದರು.

Advertisement

ಸಿಂದಗಿ ಉಪಚುನಾವಣಾ ಪ್ರಚಾರಕ್ಕೆ ತೆರಳಲು ಇಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಅವರು ಸುದ್ದಿಗಾಗರೊಂದಿಗೆ ಮಾತನಾಡಿ, ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನಕ್ಕೆ ಸಚಿವರ ನಡುವೆಯೇ ಕಿತ್ತಾಟ, ಪೈಪೋಟಿ ನಡೆಯುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲಿಗೆ ಸಚಿವರು ಯಾರಿಗೆ ಎಷ್ಟು ಸಿಗುತ್ತದೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ ಎಂದು ದೂರಿದರು.

ತೈಲ ಬೆಲೆ, ಅಡುಗೆ ಅನಿಲ ಬೆಲೆ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ನಿರಂತರವಾಗಿ ಬೆಲೆ ಏರಿಕೆ ಮಾಡುವ ಮೂಲಕ ಮೋದಿ, ಬೊಮ್ಮಾಯಿ‌ ಸರ್ಕಾರ ಜನರ ಲೂಟಿ ಮಾಡತೊಡಗಿವೆ. ಅಲ್ಲದೇ, ಈಗಾಗಲೇ ದೇಶದ ರೈತರು ಸಂಕಷ್ಟದಲ್ಲಿ ಇದ್ದಾರೆ. ಆದರೆ, ಪ್ರಧಾನಿ ಮೋದಿ ವಿದೇಶದಿಂದ ತೊಗರಿ ಬೇಳೆ ಆಮದು ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ಯಾವುದೇ ಸುಂಕವನ್ನೂ ಸರ್ಕಾರ ವಿಧಿಸುತ್ತಿಲ್ಲ. ಹೀಗಾದಾಗ ನಮ್ಮ ದೇಶದ ರೈತರ ಬೆಳೆದ ತೊಗರಿ ಮಾರಾಟ ಮಾಡಲು ಸಾಧ್ಯವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:ಆರ್ ಎಸ್ಎಸ್ ಏನು ಮಾಡುತ್ತಿದೆ ಎಂದು ತಿಳಿಯಲು ಎಚ್ ಡಿಕೆ ಶಾಖೆಗೆ ಬರಲಿ: ನಳಿನ್ ಕಟೀಲ್

ಬಿಜೆಪಿ ಆಡಳಿತದಿಂದ ಜನತೆ ಬೇಸತ್ತಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ಪರವಾದ ಗಾಳಿ ಬೀಸುತ್ತಿದೆ. ಈ ಹಿಂದೆ ಬೆಳಗಾವಿ ಲೋಕಸಭಾ ಉಪಚುನಾವಣೆ ಮತ್ತು ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಜನತೆ ಒಲವು ತೋರಿಸಿದ್ದಾರೆ. ಬೆಳಗಾವಿಯಲ್ಲಿ ಮೂರುವರೆ ಸಾವಿರ ಮತಗಳ ಅಂತರದಿಂದ ಮಾತ್ರ ನಮ್ಮ ಅಭ್ಯರ್ಥಿ ಸೋಲು ಕಂಡಿದ್ದಾರೆ. ಎರಡು ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದು ಕಡೆ ನಮ್ಮ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಇದು ಕಾಂಗ್ರೆಸ್ ಪರವಾಗಿ ಜನರ ಒಲವು ಇದೆ ಎಂಬುದು ತೋರಿಸುತ್ತದೆ ಎಂದರು.

Advertisement

ಈಗ ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಯಲ್ಲಿ ಎರಡೂ ಕಡೆ ಕೂಡ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ಸಾಧಿಸುವ ವಿಶ್ವಾಸ ಇದೆ. ಅಲ್ಲದೇ, ರಾಜ್ಯದ ಜನತೆ ಕೂಡ ಮುಂದಿ‌ನ ದಿನಗಳಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂದು ಬಯಸುತ್ತಿದ್ದಾರೆ ಎಂದರು.

ಸಮಯ ಬಂದಾಗ ದಲಿತ ಸಿಎಂ ಆಯ್ಕೆ ಬಗ್ಗೆ ಚಿಂತನೆ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಮುಖ್ಯಮಂತ್ರಿ ಆಯ್ಕೆ ಸಂದರ್ಭದಲ್ಲಿ ದಲಿತ ಮುಖ್ಯಮಂತ್ರಿ ಬಗ್ಗೆ ಚಿಂತನೆ ಮಾಡಲಾಗುತ್ತದೆ ಎಂದು ಸುರ್ಜೇವಾಲಾ ಇದೇ ವೇಳೆ ಹೇಳಿದರು.

ದೇಶದಲ್ಲಿ ಬಿಜೆಪಿ ಕೇಂದ್ರ ಮತ್ತು ಸುಮಾರು 22 ರಾಜ್ಯಗಳಲ್ಲಿ ಅಧಿಕಾರದಲ್ಲಿ ಇದೆ. ಆದರೆ, ಬಿಜೆಪಿ ಒಂದೇ ಒಂದು ರಾಜ್ಯದಲ್ಲಿ ಶೋಷಿತ ಮತ್ತು ದಲಿತ ಸಮುದಾಯದವರಿಗೆ ಮುಖ್ಯಮಂತ್ರಿ ಮಾಡಿಲ್ಲ. ಆದರೆ, ಕಾಂಗ್ರೆಸ್ ಪಕ್ಷ ಪಂಜಾಬ್ ನಲ್ಲಿ ದಲಿತ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ. ದೇಶದಲ್ಲಿ ಪ್ರಸ್ತುತ ದಲಿತ ಮುಖ್ಯಮಂತ್ರಿಯನ್ನು ನೀಡಿದ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದರು.

ಪತ್ರ ಬರೆಯಲು ಮುಕ್ತ ಅವಕಾಶ: ರಾಜ್ಯ ಕಾಂಗ್ರೆಸ್ ಉಸ್ತುವಾರಿಯನ್ನು ಬದಲಾವಣೆ ಮಾಡಲು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆಯಲಾಗಿದೆ ಎಂಬ ಪ್ರಶ್ನೆಗೆ ಪ್ರಕ್ರಿಯಿಸಿದ ಅವರು, ಕಾಂಗ್ರೆಸ್ ಒಂದು ಕುಟುಂಬ. ಕುಟುಂಬದ ಮುಖ್ಯಸ್ಥರಿಗೆ ಪತ್ರ ಬರೆಯಲು ಮುಕ್ತ ಅವಕಾಶ ಇದೆ ಎಂದರು.

ಸೋನಿಯಾ ಗಾಂಧಿ ಅವರಿಗೆ ಪಕ್ಷದ ಯಾರೇ ಕಾರ್ಯಕರ್ತರು ಪತ್ರ ಬರೆಯಬಹುದು. ತಮ್ಮ ಅಭಿಪ್ರಾಯವನ್ನು ಸೋನಿಯಾ ಗಾಂಧಿ ಅವರಿಗೆ ತಿಳಿಸುವುದರಲ್ಲಿ ತಪ್ಪೆನಿಲ್ಲ ಎಂದು ಸ್ಪಷ್ಟ ಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next