ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾರಿ ಮಾಡಲು ಉದ್ದೇಶಿಸಿರುವ “ಗ್ಯಾರಂಟಿ ಸರಣಿ’ ಯೋಜನೆಗಳಿಗೆ ಕರ್ನಾಟಕದ ಬಜೆಟ್ ಗಾತ್ರದ ಶೇ.15ರಷ್ಟು ಅನುದಾನವೂ ಬೇಡ. ಈ ಯೋಜನೆಗಳು ಕರ್ನಾಟಕದ ಖ್ಯಾತಿಯ ಕಿರೀಟದಲ್ಲಿ ಹೆಮ್ಮೆಯ ಗರಿಗಳಾಗಿರಲಿವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅಭಿಪ್ರಾಯಪಟ್ಟಿದ್ದಾರೆ.
“ಉದಯವಾಣಿ’ ಕಚೇರಿಯಲ್ಲಿ ಮಂಗಳವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದ್ದು, ಗೃಹಿಣಿಯರಿಗೆ ಪ್ರತಿ ತಿಂಗಳು 2000ರೂ. ನೀಡುವ ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಗ್ಯಾರಂಟಿ ಸರಣಿಯನ್ನು ನಾವು ತರ್ಕಹೀನವಾಗಿ ರೂಪಿಸಿಲ್ಲ. ಅರ್ಥಶಾಸ್ತ್ರಜ್ಞರಾದ ಗೌರವ್ ವಲ್ಲಭ್, ಪಿ.ಚಿದಂಬರಂ ಮುಂತಾದವರ ಜತೆಗೆ ಚರ್ಚಿಸಿ ತೀರ್ಮಾನಿಸಿದ್ದೇವೆ. ರಾಜ್ಯದ ಒಟ್ಟು ಬಜೆಟ್ ಗಾತ್ರದ ಶೇ.15ರಷ್ಟು ಮಾತ್ರ ಇದಕ್ಕೆ ವೆಚ್ಚವಾಗಬಹುದು. ಒಟ್ಟಾರೆಯಾಗಿ ಈ ಮೊತ್ತ 35,000 ಕೋಟಿ ರೂ. ದಾಟುವುದಿಲ್ಲ. ಈ ವಿಚಾರದಲ್ಲಿ ಬಿಜೆಪಿ ಸೃಷ್ಟಿ ಮಾಡುತ್ತಿರುವ ತಪ್ಪು ವ್ಯಾಖ್ಯಾನಗಳಿಗೆ ಯಾರೂ ಕಿವಿಗೊಡಬೇಕಿಲ್ಲ ಎಂದು ಹೇಳಿದರು.
ಗೃಹಲಕ್ಷ್ಮಿ, 200 ಯುನಿಟ್ ಉಚಿತ ವಿದ್ಯುತ್, ನಿರುದ್ಯೋಗ ಭತ್ಯೆಯಂಥ ಉಚಿತ ಯೋಜನೆಗಳನ್ನು ನಾವು ಜಾರಿಗೆ ತಂದರೆ ಬಿಜೆಪಿ ಅಪಸ್ವರ ಎತ್ತುತ್ತದೆ. ಆದರೆ ಕೇವಲ 10 ಮಂದಿ ಕೈಗಾರಿಗೋದ್ಯಮಿಗಳಿಗೆ ಇದಕ್ಕಿಂತಲೂ ಹೆಚ್ಚು ಮೊತ್ತದ ಸಾಲ ಮನ್ನಾ ಮಾಡುವ ಮೂಲಕ ಬಿಜೆಪಿ ಆಡಳಿತ “ಬಡವರ ವಿರೋಧಿ’ ಎಂದು ಈಗಾಗಲೇ ಸಾಬೀತು ಮಾಡಿಕೊಂಡಿದೆ. ನಾವು ಕೊಟ್ಟಿರುವ ಭರವಸೆಗಳು “ಹಂಚಿಕೆ ನ್ಯಾಯ’ ಸಿದ್ಧಾಂತವನ್ನು ಆಧರಿಸಿದೆ. ಜಾತಿ, ಧರ್ಮ, ಬಣ್ಣ, ಪಂಥವನ್ನು ಮೀರಿ ಎಲ್ಲ ಕನ್ನಡಿಗರಿಗೂ ಅನುಕೂಲ ಕಲ್ಪಿಸುವುದಕ್ಕಾಗಿ ನಾವು ಈ ಯೋಜನೆ ಜಾರಿಗೆ ತರುತ್ತಿದ್ದೇವೆ ಎಂದು ವಿವರಿಸಿದರು.