ರಾಂಚಿ: ಕಾನೂನು ವಿದ್ಯಾರ್ಥಿನಿಯೊಬ್ಬಳ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಂಚಿ ನ್ಯಾಯಾಲವು ಎಲ್ಲಾ 11 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.
ರಾಂಚಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳೆಯನೊಂದಿಗೆ ಸ್ಕೂಟಿಯಲ್ಲಿ ಕಾಲೇಜಿಗೆಂದು ಬರುತ್ತಿದ್ದ ಸಂದರ್ಭದಲ್ಲಿ 12 ಜನರ ತಂಡವೊಂದು ಈ ವಿದ್ಯಾರ್ಥಿನಿಯನ್ನು ಸಾಮೂಹಿಕ ಅತ್ಯಾಚಾರಕ್ಕೊಳಪಡಿಸಿತ್ತು.
ಇವರು ಪ್ರಯಾಣಿಸುತ್ತಿದ್ದ ಸ್ಕೂಟಿಯಲ್ಲಿ ಪೆಟ್ರೋಲ್ ಖಾಲಿಯಾಗಿ ದಾರಿ ಮಧ್ಯೆ ನಿಂತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಲಿಫ್ಟ್ ಕೊಡುವ ನೆಪದಲ್ಲಿ ವಿದ್ಯಾರ್ಥಿನಿಯನ್ನು ಕರೆದೊಯ್ದು ಬಳಿಕ ಸಾಮೂಹಿಕ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ದೂರಿನ ಆಧಾರದಲ್ಲಿ ಒಟ್ಟು 16 ಜನರನ್ನು ಪೊಲೀಸರು ಬಂಧಿಸಿದ್ದರು ಹಾಗೂ ಇವರಲ್ಲಿ 12 ಜನ ತಮ್ಮ ಅಪರಾಧವನ್ನು ಪೊಲೀಸರ ತನಿಖೆಯಲ್ಲಿ ಒಪ್ಪಿಕೊಂಡಿದ್ದರು. ಇವರಲ್ಲರ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376ಡಿ, 366, 379, 323 ಮತ್ತು 120ಬಿ ಗಳಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು.
ಕುಲದೀಪ್ ಉರಾವ್, ಸುನಿಲ್ ಉರಾವ್, ಸಂದೀಪ್ ಟ್ರಿಕಿ, ಅಜಯ್ ಮುಂಡಾ, ರಾಜನ್ ಉರಾವ್, ನವೀನ್ ಒರೌನ್, ಬಸಂತ್ ಕಶ್ಯಪ್, ರವಿ ಒರೌನ್, ರೋಹಿತ್ ಒರೌನ್, ಸುನಿಲ್ ಮುಂಡಾ ಮತ್ತು ರಿಶಿ ಒರೌನ್ ಎಂಬವರೇ ಹನ್ನೊಂದು ಅತ್ಯಾಚಾರಿಗಳಾಗಿದ್ದಾರೆ. 12 ಮಂದಿ ಆರೋಪಿಗಳಲ್ಲಿ ಓರ್ವ ಬಾಲಾಪರಾಧಿಯಾಗಿದ್ದು ಆತನ ಮೇಲಿನ ಪ್ರಕರಣ ಬಾಲಾಪರಾಧ ನ್ಯಾಯ ಮಂಡಳಿಯಲ್ಲಿ ವಿಚಾರಣೆಗೆ ಬಾಕಿ ಇದೆ.