Advertisement

ಚಿತ್ರ ವಿಮರ್ಶೆ: ಆ್ಯಕ್ಷನ್‌ ಅಬ್ಬರದಲ್ಲಿ ರಣ ಕಹಳೆ

09:09 AM Mar 27, 2021 | Team Udayavani |

ದೇಶದಾದ್ಯಂತ ರೈತಪರ ಹೋರಾಟ, ಖಾಸಗೀಕರಣದ ಪರ-ವಿರೋಧ ಚರ್ಚೆಗಳು ಜೋರಾಗಿ ನಡೆಯುತ್ತಿರುವಂತೆಯೇ ಅಂಥಹದೇ ಕಥಾಹಂದರ ಹೊಂದಿರುವ ರಣಂ ಚಿತ್ರ ಈ ವಾರ ತೆರೆಗೆ ಬಂದಿದೆ.

Advertisement

ಮೂಲ ಸೌಕರ್ಯಗಳಿಂದ ವಂಚಿತರಾದ, ನೀರಾವರಿ, ಮಳೆ-ಬೆಳೆಯಿಲ್ಲದೆ ಕಂಗೆಟ್ಟ ಹಳ್ಳಿಯ ರೈತರ ಜಮೀನನ್ನು ಕಬ ಳಿಸಲು ಹೊಂಚು ಹಾಕುವ ರಾಜಕಾರಣಿ ವಿರುದ್ದ ಸಿಡಿದೇಳುವ ಕೆಲ ಯುವಕರು ತಮ್ಮದೇ ರಣವ್ಯೂಹದಲ್ಲಿ ಆತನನ್ನು ಸಿಲುಕಿಸಿ, ಹೇಗೆ ನ್ಯಾಯ ಪಡೆಯುತ್ತಾರೆ. ವ್ಯವಸ್ಥೆಯಲ್ಲಿನ ಲೋಪಗಳನ್ನು ಬಳಸಿಕೊಂಡು ಹೇಗೆ ಜನರಿಗೆ ನ್ಯಾಯ ಕೊಡಿಸುತ್ತಾರೆ ಎನ್ನುವುದು ರಣಂ ಚಿತ್ರದ ಕಥಾಹಂದರ. ಅದು ಹೇಗೆಲ್ಲ ನಡೆಯುತ್ತದೆ ಅನ್ನೋದನ್ನ ತೆರೆಮೇಲೆ ನೋಡಬೇಕು.

“ರಣಂ’ ಚಿತ್ರದ ಹೆಸರೇ ಹೇಳುವಂತೆ, ಇದೊಂದು ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ ಕಥಾಹಂದರ ಹೊಂದಿರುವ ಚಿತ್ರ. ರೈತಸಮಸ್ಯೆ, ಭ್ರಷ್ಟಾಚಾರ, ಯುವಕರ ಹೋರಾಟ ಹೀಗೆ ಹತ್ತಾರು ವಿಷಯಗಳನ್ನು ಪೋಣಿಸಿ ಕಥೆಯನ್ನು ತೆರೆಮೇಲೆ ಹೇಳಿದ್ದಾರೆ ನಿರ್ದೇಶಕ ವಿ. ಸಮುದ್ರ. ಚಿತ್ರದ ಕಥೆ ಚೆನ್ನಾಗಿದ್ದರೂ, ರಣಂ ಚಿತ್ರಕಥೆ, ನಿರೂಪಣೆಗಿಂತ ನಿರ್ದೇಶಕರು ಮೇಕಿಂಗ್‌ ಕಡೆಗೇ ಹೆಚ್ಚು ಗಮನ ಕೊಟ್ಟಂತಿದೆ. ಮೇಕಿಂಗ್‌ನಂತೆಯೇ ಚಿತ್ರದ ಸ್ಕ್ರಿಪ್ಟ್ ಕಡೆಗೂ ನಿರ್ದೇಶಕರು ಇನ್ನಷ್ಟು ಗಮನ ಕೊಟ್ಟಿದ್ದರೆ ರಣಂ ಇನ್ನೂ ಪರಿಣಾಮಕಾರಿಯಾಗಿ ಮೂಡಿಬರುವ ಎಲ್ಲಾ ಸಾಧ್ಯತೆಗಳಿದ್ದವು.

ಒಂದು ಪ್ರಯತ್ನವಾಗಿ “ರಣಂ’ ಚಿತ್ರ ವನ್ನು ಮೆಚ್ಷಬಹುದು. ಸಾಕಷ್ಟು ಅಂಶ ಗಳು ಇಲ್ಲಿ ಗಮನ ಸೆಳೆಯುತ್ತಾ ಸಾಗುತ್ತವೆ. ಇಲ್ಲಿಯವರೆಗೆ ಲವರ್‌ಬಾಯ್‌ ಆಗಿ ಸ್ಮಾರ್ಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಚೇತನ್‌ ರಣಂ ಚಿತ್ರದಲ್ಲಿ ಕೊಂಚ ರಗಡ್‌ ಲುಕ್‌ನಲ್ಲಿ ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ರಫ್ ಆ್ಯಂಡ್‌ ಟಫ್ ಪೊಲೀಸ್‌ ಅಧಿಕಾರಿಯಾಗಿ ಚಿರು ಸರ್ಜಾ ತಮ್ಮ ಅಭಿನಯದಲ್ಲಿ ಗಮನ ಸೆಳೆಯುತ್ತಾರೆ. ಇನ್ನು ನಾಯಕಿ ವರಲಕ್ಷ್ಮೀ ಕೂಡ ಚಿತ್ರದಲ್ಲಿ ಆ್ಯಕ್ಷನ್‌ ಲೇಡಿಯಾಗಿ ಕಾಣಿಸಿಕೊಂಡಿದ್ದು, ತಮ್ಮ ಮ್ಯಾನರಿಸಂ ಮೂಲಕ ವರಲಕ್ಷ್ಮೀ ಕೂಡ ಗಮನ ಸೆಳೆಯುತ್ತಾರೆ.

ಚಿತ್ರದಲ್ಲಿ ಸಾಧುಕೋಕಿಲ, ಬುಲೆಟ್‌ ಪ್ರಕಾಶ್‌ ಕಾಮಿಡಿ ಕಚಗುಳಿ ಇಡುವ ಪ್ರಯತ್ನ ಮಾಡಿದ್ದಾರೆ. ಉಳಿದಂತೆ ಚಿತ್ರದ ಇತರ ಪಾತ್ರಗಳಲ್ಲಿ ಬಹುತೇಕ ಹೊಸ ಪ್ರತಿಭೆಗಳು ಕಾಣಿಸಿಕೊಂಡಿದ್ದು, ಬಹುತೇಕ ಕಲಾವಿದರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ ಎಂಟರ್‌ಟೈನ್ಮೆಂಟ್‌ ಬಯಸುವ ಮಾಸ್‌ ಆಡಿಯನ್ಸ್‌ನ ಗಮನದಲ್ಲಿ ಇಟ್ಟುಕೊಂಡು ಮಾಡಲಾದ ರಣಂ ಚಿತ್ರವನ್ನು ಆ್ಯಕ್ಷನ್‌ ಪ್ರಿಯರು ಒಮ್ಮೆ ನೋಡಲಡ್ಡಿಯಿಲ್ಲ.

  • ಜಿ.ಎಸ್‌.ಕೆ
Advertisement
Advertisement

Udayavani is now on Telegram. Click here to join our channel and stay updated with the latest news.

Next