Advertisement

ವಿಧಾನಸಭೆ ಚುನಾವಣೆಗೆ ಜೆಡಿಎಸ್‌ ರಣಕಹಳೆ

03:45 AM Feb 11, 2017 | |

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ವರ್ಷಕ್ಕೂ ಮೊದಲೇ ರಣಕಹಳೆ ಮೊಳಗಿಸಿರುವ ಜೆಡಿಎಸ್‌, ರಾಜ್ಯದಲ್ಲಿ ಸ್ವಂತ ಶಕ್ತಿ ಮೇಲೆ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಈಗಿಂದಲೇ ಕಾರ್ಯೋನ್ಮುರಾಗುವಂತೆ ಕಾರ್ಯಕರ್ತರು, ಮುಖಂಡರಿಗೆ ಕರೆ ನೀಡಿದೆ.

Advertisement

ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ಚುನಾವಣಾ ಪೂರ್ವ ಸಮಾವೇಶದಲ್ಲಿ ಪಾಲ್ಗೊಂಡಿದ್ದ ನಾಯಕರು, 2018 ರ ಚುನಾವಣೆ ಜೆಡಿಎಸ್‌ ಪಾಲಿಗೆ ಯುದ್ದ ಮಾದರಿಯ ಹೋರಾಟವಾಗಿದೆ. ಪಕ್ಷವನ್ನು ಅಧಿಕಾರಕ್ಕೆ ತರಲು ಸಜ್ಜಾಗಿ ಎಂದು ಹುರುಪು
ತುಂಬಿದರು. ಸಮಾವೇಶದಲ್ಲಿ ಮಾತನಾಡಿದ ಎಲ್ಲ ನಾಯಕರು ವಿಧಾನಪರಿಷತ್‌ನ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯ ಗೆಲುವು ಪ್ರಸ್ತಾಪಿಸಿ, ಇದು ಜೆಡಿಎಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂಬುದರ ಮುನ್ಸೂಚನೆ ಎಂದು ಬಣ್ಣಿಸಿದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಮಾತನಾಡಿ, “ಮುಂದಿನ ವಿಧಾನಸಭೆ ಚುನಾವಣೆ ನಮಗೆ ಅಗ್ನಿಪರೀಕ್ಷೆ. ಪಕ್ಷವನ್ನು ಅಧಿಕಾರಕ್ಕೆ ತರುವವರೆಗೂ ನಾನು ವಿರಮಿಸುವ ಮಾತೇ ಇಲ್ಲ. 224 ಕ್ಷೇತ್ರಗಳಲ್ಲೂ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಧಿಳಿಸಲಿದ್ದೇವೆ. ಮಾರ್ಚ್‌ ತಿಂಗಳೊಳಗೆ ಮಹಿಳಾ, ಹಿಂದುಳಿದ, ನಾಯಕ ಸಮುದಾಯದ ಸಮಾವೇಶಗಳು ನಡೆಯಲಿವೆ. ನಾನು ಸುಮ್ಮನೆ
ಕುಳಿತುಕೊಳ್ಳುವುದಿಲ್ಲ, ವಿಧಾನಪರಿಷತ್‌ ಉಪ ಚುನಾವಣೆ ನನಗೆ ಶಕ್ತಿ ತಂದುಕೊಟ್ಟಿದೆ’ ಎಂದರು. ಸದ್ಯದಲ್ಲೇ ಪಕ್ಷದ ಕಟ್ಟಡ ಉದ್ಘಾಟನೆಯಾಗಲಿದ್ದು, ಆ ಕಾರ್ಯಕ್ರಮದಲ್ಲಿ ಎರಡು ಲಕ್ಷ ಜನರನ್ನು ಸೇರಿಸಬೇಕು. ಒಂದೊಂದು ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ 1 ಸಾವಿರ ಜನರನ್ನು ಕರೆತಂದರೂ ಎರಡು ಲಕ್ಷ ಸೇರಿಸುವುದು ಕಷ್ಟವಲ್ಲ ಎಂದು ತಾಕೀತು ಮಾಡಿದರು. 

ಗೆಲುವಿನ ಆರಂಭವಾಗಿದೆ: ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್‌ ಎಲ್ಲಿದೆ ಎಂದು ಕೇಳಿದ
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇತ್ತೀಚೆಗೆ ನಡೆದ ವಿಧಾನಪರಿಷತ್‌ ಉಪ ಚುನಾವಣೆಯ ಫ‌ಲಿತಾಂಶ ಉತ್ತರ ಕೊಟ್ಟಿದೆ. ಇದು ನಮ್ಮ ಗೆಲುವಿನ ಪ್ರಾರಂಭ. ಪಕ್ಷದಲ್ಲಿ ಇರಬಹುದಾದ ಸಣ್ಣಪುಟ್ಟ ಗೊಂದಲ ನಿವಾರಿಸಿದರೆ ಮೈಸೂರಿನಲ್ಲಿ 10, ತುಮಕೂರಿನಲ್ಲಿ 11,
ಕೋಲಾರ-ಚಿಕ್ಕಬಳ್ಳಾಪುರದಲ್ಲಿ 10 ಸ್ಥಾನ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ. ಮ್ಯಾಜಿಕ್‌ ನಂಬರ್‌ 113ರ ಗಡಿ ದಾಟುವುದು ನನ್ನ ಗುರಿ ಎಂದರು. 

ಉತ್ತರ ಪ್ರದೇಶ ಚುನಾವಣೆ ಪ್ರಚಾರದಲ್ಲಿ ಬಿಜೆಪಿಯ ರಾಜನಾಥ್‌ಸಿಂಗ್‌ ಅವರು, ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಿದ್ದಾರೆ. ಆದರೆ, ಕೇಂದ್ರದಲ್ಲಿ ಅವರದೇ ಪಕ್ಷ ಅಧಿಕಾರದಲ್ಲಿದ್ದರೂ ಇಡೀ ದೇಶದ ರೈತರ ಸಾಲವನ್ನು
ಯಾಕೆ ಮನ್ನಾ ಮಾಡುತ್ತಿಲ್ಲ. ಮತಗಳಿಗಾಗಿ ಇಂತಹ ಮಾತು ಯಾಕೆ? ಎಂದು ಪ್ರಶ್ನಿಸಿದರು. “ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ ನನ್ನ ಹೇಳಿಕೆಯನ್ನು ಲೇವಡಿ ಮಾಡಲಾಗುತ್ತಿದೆ. ಇಂತಹ ಲೇವಡಿಗಳಿಗೆ ಮುಂದಿನ ಚುನಾವಣೆಯಲ್ಲಿ ಜನತೆ ಸೂಕ್ತ ಉತ್ತರ ನೀಡಲಿದ್ದಾರೆ’ ಎಂದರು.

Advertisement

ಕಾರ್ಯಾಧ್ಯಕ್ಷ ಬಸವರಾಜ ಹೊರಟ್ಟಿ, ಮಾಜಿ ಸಚಿವ ಬಂಡೆಪ್ಪ ಕಾಶಂಪುರ್‌ ಮಾತನಾಡಿದರು. ಸಮಾವೇಶದಲ್ಲಿ ವಿಧಾನಪರಿಷತ್‌ಗೆ ಆಯ್ಕೆಯಾದ ರಮೇಶ್‌ಬಾಬು ಅವರನ್ನು ಸನ್ಮಾನಿಸಲಾಯಿತು. ಕಲಬುರಗಿ ಜಿಲ್ಲೆ ಚಿಂಚೋಳಿಯ ಶಾಲಾ ಶಿಕ್ಷಕಿ ಸುಶೀಲಾ ಬಾಯಿ, ನಟ ಯೋಗಿ ಅವರ ತಂದೆ ಸಿದ್ದರಾಜು ಅವರು ಜೆಡಿಎಸ್‌ಗೆ ಸೇರ್ಪಡೆಗೊಂಡರು. ಮೊಯಿದ್ದೀನ್‌ ಅಲ್ತಾಫ್ ಅವರನ್ನು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ನೇಮಿಸಿರುವ ಬಗ್ಗೆಯೂ ಪ್ರಕಟಿಸಲಾಯಿತು. 

ಗೋಪಾಲಯ್ಯ ಹಾಜರ್‌
ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಹಿನ್ನೆಲೆಯಲ್ಲಿ ಪಕ್ಷದಿಂದ ಅಮಾನತುಗೊಂಡಿದ್ದ ಮಹಾಲಕ್ಷ್ಮಿ ಲೇಔಟ್‌
ಶಾಸಕ ಗೋಪಾಲಯ್ಯ ಸಮಾವೇಶದಲ್ಲಿ ಹಾಜರಿದ್ದರು. ಗುರುವಾರವಷ್ಟೇ ಅವರ ಆಮಾನತು ಆದೇಶ ವಾಪಸ್‌ ಪಡೆಯಲಾಗಿತ್ತು. ಈ ಬಗ್ಗೆ ಭಾಷಣದಲ್ಲೂ ದೇವೇಗೌಡರು ಪ್ರಸ್ತಾಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next