Advertisement

ರಣಜಿ ಮುಖಾಮುಖಿ: ರಾಜಸ್ಥಾನವನ್ನು ಕೆಡವಿದ ಕರ್ನಾಟಕ

10:36 PM Jan 12, 2023 | Team Udayavani |

ಆಲೂರು: ರಾಜಸ್ಥಾನ ವಿರುದ್ಧದ ರಣಜಿ ಮುಖಾಮುಖಿಯಲ್ಲಿ ಕರ್ನಾಟಕ ತಂಡ 10 ವಿಕೆಟ್‌ಗಳ ಅಧಿಕಾರಯುತ ಗೆಲುವು ಸಾಧಿಸಿದೆ. ಇದರೊಂದಿಗೆ “ಸಿ’ ವಿಭಾಗದ ಅಂಕಪಟ್ಟಿಯ ಅಗ್ರಸ್ಥಾನ ಅನ್ಯರ ಪಾಲಾಗದು ಎಂಬುದನ್ನು ಸಾರಿಹೇಳಿದೆ.

Advertisement

ಗೆಲುವಿಗೆ ಕೇವಲ 15 ರನ್‌ ಗಳಿಸ ಬೇಕಿದ್ದ ಕರ್ನಾಟಕ ವಿಕೆಟ್‌ ನಷ್ಟವಿಲ್ಲದೆ ಗುರಿ ಮುಟ್ಟಿತು. ಇದರೊಂದಿಗೆ ಪಂದ್ಯ ಮೂರೇ ದಿನದಲ್ಲಿ ಮುಗಿಯಿತು. ಇದು 5 ಪಂದ್ಯಗಳಲ್ಲಿ ಕರ್ನಾಟಕ ಮೊಳಗಿಸಿದ 3ನೇ ಜಯಭೇರಿ. ಉಳಿದೆರಡು ಪಂದ್ಯ ಡ್ರಾಗೊಂಡಿದೆ. ಅಂಕ 26ಕ್ಕೆ ಏರಿದೆ. ಕರ್ನಾಟಕಕ್ಕೆ ಶರಣಾದ ರಾಜಸ್ಥಾನ ಇಷ್ಟೇ ಪಂದ್ಯಗಳಿಂದ 14 ಅಂಕ ಹೊಂದಿದೆ. ಒಂದು ಜಯ, ಒಂದು ಸೋಲು ಹಾಗೂ 3 ಡ್ರಾ ರಾಜಸ್ಥಾನದ ಸಾಧನೆಯಾಗಿದೆ.

ರಾಜಸ್ಥಾನವನ್ನು 129ಕ್ಕೆ ತಡೆದು ನಿಲ್ಲಿಸಿದ ಕರ್ನಾಟಕ, ಇದಕ್ಕೆ ಜವಾಬಾಗಿ 445 ರನ್‌ ಪೇರಿಸಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಸುಧಾರಿತ ಬ್ಯಾಟಿಂಗ್‌ ಪ್ರದರ್ಶಿಸಿದರೂ ರಾಜಸ್ಥಾನದ ಮೊತ್ತ 330ರ ಗಡಿಯಲ್ಲಿ ನಿಂತಿತು. ಇನ್ನಿಂಗ್ಸ್‌ ಸೋಲಿನಿಂದ ಬಚಾವಾದುದೊಂದೇ ರಾಜಸ್ಥಾನದ ಸಾಧನೆ. ಮಾಯಾಂಕ್‌ ಅಗರ್ವಾಲ್‌ 10, ಆರ್‌. ಸಮರ್ಥ್ 5 ರನ್‌ ಮಾಡಿ ಅಜೇಯರಾಗಿ ಉಳಿದರು.

ರಾಜಸ್ಥಾನದ ದ್ವಿತೀಯ ಇನ್ನಿಂಗ್ಸ್‌ ನಲ್ಲಿ ಓಪನರ್‌ ಮಹಿಪಾಲ್‌ ಲೊನ್ರೋರ್‌ 99, ಆದಿತ್ಯ ಗರ್ವಾಲ್‌ 66, ಸಮರ್ಪಿತ್‌ ಜೋಶಿ 63 ರನ್‌ ಬಾರಿಸಿದರು. ಬೌಲಿಂಗ್‌ನಲ್ಲಿ ಮಿಂಚಿದವರೆಂದರೆ ವಿಜಯ್‌ಕುಮಾರ್‌ ವೈಶಾಖ್‌ (4 ವಿಕೆಟ್‌), ಕೆ. ಗೌತಮ್‌ (3 ವಿಕೆಟ್‌) ಮತ್ತು ವಾಸುಕಿ ಕೌಶಿಕ್‌ (2 ವಿಕೆಟ್‌).

ಮೊದಲ ಇನ್ನಿಂಗ್ಸ್‌ನಲ್ಲಿ 101 ರನ್‌ ಮಾಡಿದ ಮನೀಷ್‌ ಪಾಂಡೆ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.ಕರ್ನಾಟಕದ ಮುಂದಿನ ಎದುರಾಳಿ ಕೇರಳ. ಈ ಪಂದ್ಯ ಜ. 17ರಂದು ತಿರುವನಂತಪುರದಲ್ಲಿ ಆರಂಭವಾಗಲಿದೆ.

Advertisement

ಸಂಕ್ಷಿಪ್ತ ಸ್ಕೋರ್‌: ರಾಜಸ್ಥಾನ-129 ಮತ್ತು 330 (ಮಹಿಪಾಲ್‌ ಲೊನ್ರೋರ್‌ 99, ಆದಿತ್ಯ ಗರ್ವಾಲ್‌ 66, ಸಮರ್ಪಿತ್‌ ಜೋಶಿ 63, ವಿ. ವೈಶಾಖ್‌ 73ಕ್ಕೆ 4, ಕೆ. ಗೌತಮ್‌ 72ಕ್ಕೆ 3, ವಿ. ಕೌಶಿಕ್‌ 66ಕ್ಕೆ 2). ಕರ್ನಾಟಕ-445 ಮತ್ತು ವಿಕೆಟ್‌ ನಷ್ಟವಿಲ್ಲದೆ 15.

ಇನ್ನಿಂಗ್ಸ್‌ ಗೆಲುವಿನತ್ತ ಮುಂಬಯಿ
ಗುವಾಹಟಿ: ಆತಿಥೇಯ ಅಸ್ಸಾಂಗೆ ಫಾಲೋಆನ್‌ ಹೇರಿದ ಮುಂಬಯಿ ಇನ್ನಿಂಗ್ಸ್‌ ಗೆಲುವಿತ್ತ ಮುನ್ನಡೆದಿದೆ. ಮುಂಬಯಿಯ 687 ರನ್‌ಗೆ (4 ವಿಕೆಟಿಗೆ ಡಿಕ್ಲೇರ್‌) ಜವಾಬು ನೀಡಿದ ಅಸ್ಸಾಂ 370ಕ್ಕೆ ಆಲೌಟ್‌ ಆಯಿತು. ಇದು ಪೃಥ್ವಿ ಶಾ ಅವರ ವೈಯಕ್ತಿಕ ಗಳಿಕೆಗಿಂತಲೂ (379) ಕಡಿಮೆ ಮೊತ್ತವಾಗಿತ್ತು.

317 ರನ್ನುಗಳ ಇನ್ನಿಂಗ್ಸ್‌ ಹಿನ್ನಡೆಗೆ ಸಿಲುಕಿರುವ ಅಸ್ಸಾಂ 3ನೇ ದಿನದಾಟದ ಅಂತ್ಯಕ್ಕೆ ಕೇವಲ 36 ರನ್ನಿಗೆ 5 ವಿಕೆಟ್‌ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದೆ. ಅದಿನ್ನೂ 281 ರನ್‌ ಹಿಂದಿದೆ. ಶಾದೂìಲ್‌ ಠಾಕೂರ್‌ 3, ಮೋಹಿತ್‌ ಅವಸ್ತಿ 2 ವಿಕೆಟ್‌ ಕಿತ್ತು ಅಸ್ಸಾಂಗೆ ಬೆದರಿಕೆಯೊಡ್ಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next