ಬೆಂಗಳೂರು: ದಕ್ಷಿಣ ಭಾರತದ ಸಾಂಪ್ರದಾಯಿಕ ಹತ್ತಿ ಬಟ್ಟೆಯ ಉಡುಪುಗಳ ಬ್ರಾಂಡ್‌ನೊಂದಿಗೆ ದೇಶವ್ಯಾಪಿ ಮಾರುಕಟ್ಟೆ ಪಡೆದುಕೊಳ್ಳುತ್ತಿರುವ “ರಾಮ್‌ರಾಜ್ ಕಾಟನ್’ನ ನಾಲ್ಕನೇ ನೂತನ ಮಾರಾಟ ಮಳಿಗೆಯನ್ನು ನಗರದ ಬಸವನಗುಡಿಯ ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿ ಉದ್ಘಾಟಿಸಲಾಯಿತು.
ಬಿಬಿಎಂಪಿ ಮೇಯರ್ ಜಿ. ಪದ್ಮಾವತಿ ಹಾಗೂ ಎಫ್ಕೆಸಿಸಿಐ ಅಧ್ಯಕ್ಷ ಕೆ. ರವಿ ನೂತನ ಮಾರಾಟ ಮಳಿಗೆಗೆ ಭಾನುವಾರ ಚಾಲನೆ ನೀಡಿದರು. ಈಗಾಗಲೇ ಬೆಂಗಳೂರಿನಲ್ಲಿ ಮೂರು ಮಾರಾಟ ಮಳಿಗೆಗಳಿದ್ದು, ಈಗ ಮತ್ತೂಂದು ಮಳಿಗೆ ಮಾರುಕಟ್ಟೆ ಪ್ರವೇಶಿಸಿದೆ.
ನೂತನ ಮಳಿಗೆಗೆ ಚಾಲನೆ ನೀಡಿ ಮಾತನಾಡಿದ ಮೇಯರ್ ಪದ್ಮಾವತಿ, ರಾಮ್‌ರಾಜ್ ಬ್ರ್ಯಾಂಡ್‌ನ ಬಟ್ಟೆಗಳು ಇಂದು ರಾಜ್ಯದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿವೆ. ವಿಶೇಷವಾಗಿ ರಾಮ್‌ರಾಜ್ ಉಡುಪುಗಳು ಗ್ರಾಹಕರಿಗೆ ಅತ್ಯಂತ ಆಕರ್ಷಿಣಿಯ. ಏಳು ಸಾವಿರ ಕಾರ್ಮಿಕರ, 20 ಸಾವಿರ ಕುಟುಂಬಗಳ ಬದುಕಿಗೆ ಆಧಾರವಾಗಿ ನಿಂತಿರುವ ರಾಮ್‌ರಾಜ್ ಕಾಟನ್ ಇನ್ನಷ್ಟು ಜನಪ್ರಿಯತೆ ಪಡೆಯಲಿ ಎಂದು ಆಶಿಸಿದರು.
ಎಫ್ಕೆಸಿಸಿಐ ಅಧ್ಯಕ್ಷ ಕೆ. ರವಿ ಮಾತನಾಡಿ, “ಜಿಎಸ್‌ಟಿ ಜಾರಿಗೆ ಬಂದಾಗಿನಿಂದ ಬ್ರಾಂಡೆಡ್ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆ ನಿರ್ಮಾಣ ಆಗುತ್ತಿದೆ. ಅದರಂತೆ ರಾಮ್‌ರಾಜ್ ಕಾಟನ್‌ಗೆ ತನ್ನ ಮಾರುಕಟ್ಟೆ ವಿಸ್ತರಣೆಗೆ ಹೆಚ್ಚು ಅವಕಾಶಗಳಿವೆ. ಬೆಂಗಳೂರಿನಲ್ಲಿ ಮಾರಾಟ ಮಳಿಗೆಯಷ್ಟೇ ತೆರೆದರೆ ಸಾಲದು, ಉದ್ಯೋಗ ಸೃಷ್ಟಿಯ ಉದ್ದೇಶದಿಂದ ತಯಾರಿಕಾ ಘಟಕ ಸ್ಥಾಪಿಸಬೇಕು. ಇದಕ್ಕೆ ಬೇಕಾದ ಸಹಕಾರ ಎಫ್ಕೆಸಿಸಿಐ ನೀಡಲಿದೆ,’ ಎಂದರು.
ರಾಮ್‌ರಾಜ್ ಕಾಟನ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಆರ್. ನಾಗರಾಜನ್, ಬೆಂಗಳೂರಿನಲ್ಲಿ ನಾಲ್ಕನೇ ಮಳಿಗೆ ಉದ್ಘಾಟನೆ ನಮ್ಮ ಉತ್ಪನ್ನಗಳ ಬೇಡಿಕೆ ಮತ್ತು ಇಲ್ಲಿನ ಗ್ರಾಹಕರ ವಿಶ್ವಾಸಕ್ಕೆ ಸಾಕ್ಷಿ. “ಗುಣಮಟ್ಟದೊಂದಿಗೆ ರಾಜಿಯಿಲ್ಲ’ ಅನ್ನುವುದು ನಮ್ಮ ಮೂಲ ಮಂತ್ರ. ಇದಕ್ಕೆ ಯಾವತ್ತೂ ನಾವು ಬದ್ಧರಾಗಿರುತ್ತೇವೆ.
ವ್ಯಾಪಾರ ವಿಸ್ತರಣೆ, ಲಾಭ ಗಳಿಕೆ ನಮ್ಮ ಉದ್ದೇಶವಲ್ಲ. ಬದಲಾಗಿ ನಮ್ಮ ಸಾಂಪ್ರದಾಯಿಕ ಉಡುಪುಗಳನ್ನು ದೇಶ-ವಿದೇಶಗಳಿಗೆ ಪರಿಚಯಿಸುವುದು ನಮ್ಮ ಗುರಿ. ಮಾರುಕಟ್ಟೆ ವಿಸ್ತರಣೆಗೆ ಸಾಕಷ್ಟು ಬೇಡಿಕೆ ಇದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಗ್ರಾಹಕರ ನಂಬಿಕೆಗೆ ಚ್ಯುತಿ ಬರದಂತೆ ರಾಮ್‌ರಾಜ್ ಕಾಟನ್ ನಡೆದುಕೊಳ್ಳಲಿದೆ ಎಂದು ಭರವಸೆ ನೀಡಿದರು.