ಮೊಳಕಾಲ್ಮೂರು: ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರ ಸ್ವಕ್ಷೇತ್ರ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ಬಸ್ ನಿಲ್ದಾಣ ಆವರಣ ತಗ್ಗು ಗುಂಡಿಗಳಿಂದ ಕೂಡಿದ್ದು, ಬಸ್ ನಿಲ್ದಾಣಕ್ಕೆ ಕಾಯಕಲ್ಪ ನೀಡಲು ಸಚಿವರು ಮುಂದಾಗಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬಂದಿದೆ.
ಬಸ್ ನಿಲ್ದಾಣದ ಆವರಣದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡದೇ ಇರುವುದರಿಂದ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಹಾಗೂ ಇನ್ನಿತರ ವಾಹನ ಸವಾರರು ಪ್ರಯಾಸ ಪಡುವಂತಾಗಿದೆ. ರಾಂಪುರ ಗ್ರಾಮದ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಬೆಂಗಳೂರಿನಿಂದ ಬಳ್ಳಾರಿ, ರಾಯಚೂರು, ಸಿಂಧನೂರು, ವಿಜಯಪುರ, ಕಲಬುರಗಿ ದೂರದ ಪ್ರಮುಖ ಪ್ರದೇಶಗಳಿಗೆ ಕೆಎಸ್ ಆರ್‌ಟಿಸಿ ಬಸ್‌ಗಳು ಸಂಚರಿಸುತ್ತವೆ. ಖಾಸಗಿ ಬಸ್ ಗಳೂ ಸೇರಿದಂತೆ ಹೆಚ್ಚಿನ ವಾಹನಗಳು ಸಂಚರಿಸುವ ಪ್ರಮುಖ ಬಸ್ ನಿಲ್ದಾಣ ಇದಾಗಿದೆ. ಆದ್ದರಿಂದ
ಬಸ್ ನಿಲ್ದಾಣದ ಆವರಣದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡುವ ಅಗತ್ಯವಿದೆ.
ಬಸ್ ನಿಲ್ದಾಣದ ಆವರಣದಲ್ಲಿ ಸಿಸಿ ರಸ್ತೆ ನಿರ್ಮಾಣವಾಗದಿರುವುದರಿಂದ ತಗ್ಗು ಗುಂಡಿಗಳು ಬಿದ್ದಿವೆ. ಇದರಿಂದ ಮಳೆಯಾದರೆ ಇಡೀ ಬಸ್ ನಿಲ್ದಾಣದ ಆವರಣವೇ ಜಲಾವೃತವಾಗಿ ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸಮೀಪದಲ್ಲೇ ಇರುವ ಬೀದಿಬದಿ ವ್ಯಾಪಾರಸ್ಥರ ಪಾಡು ಹೇಳತೀರದಾಗಿದೆ. ಅಲ್ಲದೆ ಈ ಬಸ್ ನಿಲ್ದಾಣದ ಕಟ್ಟಡದ ಮೇಲ್ಛಾವಣಿಗೂ ಹಾನಿಯಾಗಿರುವುದರಿಂದ ಮಳೆ ನೀರು ಸೋರುತ್ತದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ನೀಡಲು ಸಂಬಂಧಿಸಿದವರು ತುರ್ತು ಕ್ರಮ ಕೈಗೊಳ್ಳಬೇಕಿದೆ.
– ಎಸ್. ರಾಜಶೇಖರ