ರಾಮನಗರ: ನಾಲ್ಕು ವರ್ಷದ ಮಗುವಿನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ತೀವ್ರಗಾಯಗೊಳಿಸಿರುವ ಘಟನೆ ಚನ್ನಪಟ್ಟಣದ ಇಸ್ಲಾಂ ಪುರ ಮೊಹಲ್ಲಾದಲ್ಲಿ ಆ.1ರ ಮಂಗಳವಾರ ತಡರಾತ್ರಿಯಲ್ಲಿನಡೆದಿದೆ.
ಮನೆಯ ಮುಂದೆ ಆಟವಾಡುತ್ತಿದ್ದ ೪ ವರ್ಷದ ಹೆಣ್ಣು ಮಗು ಆಲ್ಪಯಾ ಮೇಲೆ ಬೀದಿನಾಯಿಗಳು ದಾಳಿ ಮಾಡಿದ್ದು, ಮಗುವಿನ ಮುಖ, ಕೈ ಕಾಲುಗಳ ಮೇಲೆ ಕಚ್ಚಿ ಗಾಯಗೊಳಿಸಿವೆ. ತೀವ್ರಗಾಯಗೊಂಡ ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಎರಡನೇ ಬಾರಿ ದಾಳಿ:
ಕೆಲ ದಿನಗಳ ಅಂತರದಲ್ಲಿ ಚನ್ನಪಟ್ಟಣದಲ್ಲಿ 2ನೇ ಬಾರಿ ಮಗುವಿನ ಮೇಲೆ ನಾಯಿ ದಾಳಿ ಮಾಡಿದೆ. 4 ದಿನಗಳ ಹಿಂದೆ ಮೆಹದಿನಗರದಲ್ಲಿ ಚಿಕ್ಕ ಮಗುವಿನ ಮೇಲೆ ನಾಯಿ ದಾಳಿ ಮಾಡಿತ್ತು. ಚನ್ನಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ನಗರಸಭೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ. ಇದರಿಂದಾಗಿ ಪುಟ್ಟ ಮಕ್ಕಳಿಗೆ ಸಮಸ್ಯೆ ಆಗುತ್ತಿದೆ. ಬೇಗ ಕ್ರಮವಹಿಸಿ ಎಂದು ಆಗ್ರಹಿಸಿದ್ದಾರೆ.
ಇತ್ತೀಚಿಗೆ ಚನ್ನಪಟ್ಟಣ ನಗರಸಭಾ ಕಚೇರಿಯಲ್ಲಿ ಸಭೆ ನಡೆಸಿದ ಜಿಲ್ಲಾಧಿಕಾರಿ ಬೀದಿ ನಾಯಿ ಹಾವಳಿ ಕಂಡು ಬಂದರೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.