Advertisement

3 ಪಕ್ಷಗಳ ಚಿಹ್ನೆಯಡಿ ಸ್ಪರ್ಧಿಸಿ ಗೆದ್ದು ಬೀಗಿದವರು

02:55 PM May 18, 2023 | Team Udayavani |

ರಾಮನಗರ: ಒಂದು ಪಕ್ಷದಲ್ಲಿ ಗೆಲುವು ಸಾಧಿಸಲು ತಿಣುಕಾಡುವ ಸಮಯದಲ್ಲಿ ಜಿಲ್ಲೆಯ ಇಬ್ಬರು ರಾಜಕೀಯ ಮುಖಂಡರು, ಮೂರು ಪಕ್ಷಗಳಲ್ಲಿ ಗೆಲುವು ಸಾಧಿಸಿದ್ದಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮೂರು ಬೇರೆ ಬೇರೆ ಪಕ್ಷದಿಂದ ಗೆಲುವು ಸಾಧಿಸುವ ಮೂಲಕ ಜಿಲ್ಲೆಯ ರಾಜಕಾರಣ ವೈಶಿಷ್ಟ್ಯತೆಗೆ ಸಾಕ್ಷಿಯಾಗಿದ್ದಾರೆ.

Advertisement

ಹೌದು.., ಮಾಗಡಿ ಕ್ಷೇತ್ರದಲ್ಲಿ ಇದೀಗ ಕಾಂಗ್ರೆಸ್‌ ನಿಂದ ಗೆದ್ದಿರುವ ಎಚ್‌.ಸಿ. ಬಾಲಕೃಷ್ಣ ಹಾಗೂ ಚನ್ನಪಟ್ಟಣದ ಪರಾಜಿತ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ಅವರು ಮೂರು ಪಕ್ಷದ ಚಿಹ್ನೆಯಲ್ಲಿ ಗೆಲುವು ಸಾಧಿಸಿರುವುದು ವಿಶೇಷ. ಈ ಇಬ್ಬರು ಮುಖಂಡರು 3 ಪಕ್ಷಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

ಮೂರು ಚಿಹ್ನೆಯಲ್ಲಿ ಗೆದ್ದ ಬಾಲಕೃಷ್ಣ: 5ನೇ ಬಾರಿಗೆ ವಿಧಾನಸೌಧ ಪ್ರವೇಶಿಸುತ್ತಿರುವ ಮಾಗಡಿ ಕ್ಷೇತ್ರದ ಬಾಲಕೃಷ್ಣ ತಮ್ಮ ರಾಜಕೀಯ ಜೀವನ ಆರಂಭಿ ಸಿದ್ದು 1994ರಲ್ಲಿ ಬಿಜೆಪಿ ಪಕ್ಷದಿಂದ. ಅಂದಿಗೆ ಇಡೀ ರಾಜ್ಯದಲ್ಲಿ ಜನತಾದಳದ ಪರವಾದ ಅಲೆ ಇತ್ತಾದರೂ, ಇವರು ಮಾಗಡಿ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಸ್ಪರ್ಧೆಮಾಡಿ ಎಚ್‌.ಎಂ. ರೇವಣ್ಣ ಅವರ ವಿರುದ್ಧ ಗೆದ್ದು ಪ್ರಥಮ ಬಾರಿಗೆ ಕಮಲ ಚಿಹ್ನೆಯಡಿ ಶಾಸಕರಾದರು.

ಬಳಿಕ 1999ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತರಾದ ಇವರು, 2004ರಲ್ಲಿ ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಗೊಂಡು ಜೆಡಿಎಸ್‌ ನಿಂದ ಗೆದ್ದು ಶಾಸಕರಾದರು. ಜೆಡಿಎಸ್‌ ಪಕ್ಷದಿಂದ 2008, 2013ರಲ್ಲಿ ಮತ್ತೆ ಗೆಲುವು ಸಾಧಿಸಿದ ಇವರು, 2018ರಲ್ಲಿ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡು ಪರಾಜಿತರಾದರು. ಇದೀಗ ಕಾಂಗ್ರೆಸ್‌ ಪಕ್ಷದಿಂದ ಗೆಲುವು ಸಾಧಿಸುವ ಮೂಲಕ ಮೂರು ಪಕ್ಷದಲ್ಲಿ ಗೆದ್ದ ಹಿರಿಮೆಯನ್ನು ಪಡೆದುಕೊಂಡಿದ್ದಾರೆ.

ಹಲವು ಪಕ್ಷದಲ್ಲಿ ಗೆದ್ದ ಯೋಗೇಶ್ವರ್‌: ತಮ್ಮ 25 ವರ್ಷಗಳ ರಾಜಕೀಯ ಜೀವನದಲ್ಲಿ ಯೋಗೇಶ್ವರ್‌ ಒಂದು ಲೋಕಸಭೆ ಹಾಗೂ 8 ವಿಧಾನಸಭೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಇದರಲ್ಲಿ ಮೂರು ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪರಾಜಿತರಾಗಿದ್ದಾರೆ. ಆದರೆ, ಇವರು ನಾಲ್ಕು ವಿಭಿನ್ನ ಚಿಹ್ನೆಗಳಡಿಯಲ್ಲಿ ಗೆಲುವು ಸಾಧಿಸಿ ವಿಧಾನಸೌಧ ಪ್ರವೇಶಿಸಿದ್ದಾರೆ ಎಂಬುದು ವಿಶೇಷ.

Advertisement

ಹೌದು.., 1999ರಲ್ಲಿ ಕಾಂಗ್ರೆಸ್‌ ಪಕ್ಷ ಟಿಕೆಟ್‌ ನಿರಾಕರಣೆ ಮಾಡಿದ ಹಿನ್ನೆಲೆ, ಪಕ್ಷೇತರ ಅಭ್ಯರ್ಥಿಯಾಗಿ ಟೀವಿ ಗುರುತಿನಿಂದ ಸ್ಪರ್ಧೆಮಾಡಿ ಗೆಲುವು ಸಾಧಿಸಿದರು. ಬಳಿಕ ಕಾಂಗ್ರೆಸ್‌ಗೆ ಸೇರ್ಪಡೆಗೊಂಡು 2004 ಮತ್ತು 2008ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದ ಯೋಗೇಶ್ವರ್‌ 2009ರಲ್ಲಿ ಪಕ್ಷಾಂತರ ಮಾಡಿ ಬಿಜೆಪಿ ಸೇರಿ ಲೋಕಸಭಾ ಚುನಾವಣೆ ಎದುರಿಸಿದರು. ಬಳಿಕ 2009ರ ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಪರಾಜಿತರಾದ ಇವರು, ಮತ್ತೆ 2011ರಲ್ಲಿ ಜೆಡಿಎಸ್‌ ಅಭ್ಯರ್ಥಿ ಎಂ.ಸಿ.ಅಶ್ವತ್ಥ್ ರಾಜೀನಾಮೆಯಿಂದ ನಡೆದ ಮರು ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು.

ಕಾಂಗ್ರೆಸ್‌ ಟಿಕೆಟ್‌ ನಿರಾಕರಣೆ: 2013ರಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷಕ್ಕೆ ಹಿಂದಿರುಗಲು ಹವಣಿಸಿದರಾದರೂ, ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಿದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದರು. 2018 ಮತ್ತು 2023ರಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಪರಾಜಿತರಾದರು. ಯೋಗೇಶ್ವರ್‌ ಪಕ್ಷೇತರವಾಗಿ ಒಂದು ಬಾರಿ, ಕಾಂಗ್ರೆಸ್‌ನಿಂದ ಎರಡು ಬಾರಿ, ಬಿಜೆಪಿಯಿಂದ ಒಂದು ಬಾರಿ ಮತ್ತು ಸಮಾಜವಾದಿ ಪಕ್ಷದಿಂದ ಒಂದು ಬಾರಿ ಗೆಲುವು ಸಾಧಿಸಿರುವುದು ವಿಶೇಷ.

ಸೈಕಲ್‌ ಚಿಹ್ನೆಯಡಿ ಸ್ಫರ್ಧಿಸಿ ಗೆಲುವು ಸಾಧಿಸಿದ್ದ ಡಿಕೆಶಿ: ರಾಮನಗರ ಜಿಲ್ಲೆಯಲ್ಲಿ ಇಬ್ಬರು ರಾಜಕಾರಣಗಳು ರಾಜಕೀಯ ಪಾಳಯದಲ್ಲಿ ಸಕ್ರಿಯವಾಗಿರಲು ಸೈಕಲ್‌ ಚಿಹ್ನೆ ಮುಖ್ಯ ಕಾರಣವಾಗಿದೆ. ಕಾಂಗ್ರೆಸ್‌ ಪಕ್ಷ ಟಿಕೆಟ್‌ ನಿರಾಕರಿಸಿದಾಗ ಈ ಇಬ್ಬರು ರಾಜಕಾರಣಿಗಳು ಸೈಕಲ್‌ ಚಿಹ್ನೆಯನ್ನು ಹಿಡಿದು ರಾಜಕೀಯವಾಗಿ ದಡ ಸೇರಿದ್ದಾರೆ ಎಂಬುದು ವಿಶೇಷ. ಹೌದು, 1989ರಲ್ಲಿ ಕಾಂಗ್ರೆಸ್‌ನಿಂದ ಗೆದ್ದ ಬಂಗಾರಪ್ಪ ಆಪ್ತಬಳಗದಲ್ಲಿ ಗುರುತಿಸಿಕೊಂಡಿದ್ದ ಡಿ.ಕೆ.ಶಿವಕುಮಾರ್‌ ಮೊದಲ ಬಾರಿಗೆ ಬಂಧೀಖಾನೆ ಸಚಿವರಾಗಿದ್ದರು. ಆದರೆ, ಅಂದಿಗೆ ಕನಕಪುರ ಕ್ಷೇತ್ರದ ಸಂಸದರಾಗಿದ್ದ ಎಂ.ವಿ.ಚಂದ್ರಶೇಖರ್‌ ಮೂರ್ತಿ ಅವರು ಇವರೊಂದಿಗೆ ಸಂಬಂಧ ಹಳಸಿದ ಪರಿಣಾಮ ಡಿ.ಕೆ.ಶಿವಕುಮಾರ್‌ಗೆ ಟಿಕೆಟ್‌ ಕೈತಪ್ಪಿತು. ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಬಂಡಾಯ ಕಾಂಗ್ರೆಸ್‌ ಎಂದು ಘೋಷಿಸಿಕೊಂಡು ಸೈಕಲ್‌ ಚಿಹ್ನೆಯಡಿ ಪಕ್ಷೇತರವಾಗಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದರು. ಈ ಚುನಾವಣೆ ಡಿ.ಕೆ.ಶಿವಕುಮಾರ್‌ ಅವರ ರಾಜಕೀಯ ಜೀವನದ ಟರ್ನಿಂಗ್‌ ಪಾಯಿಂಟ್‌ ಆಯಿತು. ಇದಾದ ಬಳಿಕ ಕಾಂಗ್ರೆಸ್‌ ಪಕ್ಷದಲ್ಲಿ ಪ್ರಬಲ ನಾಯಕರಾಗಿ ಹೊರಹೊಮ್ಮಿದರು.

ಸೈಕಲ್‌ ತುಳಿದು ಸೈ ಎನಿಸಿಕೊಂಡ ಯೋಗೇಶ್ವರ್‌: 2013ರಲ್ಲಿ ಬಿಜೆಪಿಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಯೋಗೇಶ್ವರ್‌ ಮರಳಿದರಾದರೂ, ಕಾಂಗ್ರೆಸ್‌ ಪಕ್ಷ ಇವರಿಗೆ ಎಂಟ್ರಿ ನೀಡಲಿಲ್ಲ. ಕಾಂಗ್ರೆಸ್‌ ಪಕ್ಷ ಟಿಕೆಟ್‌ ನಿರಾಕರಿಸಿತು. ಈ ಸಮಯದಲ್ಲಿ ತಾಲೂಕಿಗೆ ಚಿರಪರಿಚಿತವಲ್ಲದ ಸಮಾಜವಾದಿ ಪಕ್ಷದ ಟಿಕೆಟ್‌ ಹಿಡಿದುಕೊಂಡು ಬಂದ ಯೋಗೇಶ್ವರ್‌ ಸೈಕಲ್‌ ಗುರುತಿನಲ್ಲಿ ಸ್ಪರ್ಧೆ ಮಾಡಿದರು. ಸೈಕಲ್‌ ಚಿಹ್ನೆಯಡಿ ಗೆಲುವು ಸಾಧಿಸಿದರು. ಅಂದು ಗೆಲುವು ಸಾಧಿಸದೇ ಹೋಗಿದ್ದರೆ ಯೋಗೇಶ್ವರ್‌ ರಾಜಕೀಯವಾಗಿ ಮೂಲೆಗುಂಪಾಗುತ್ತಿದ್ದರು. ಹೀಗಾಗಿ, ಜಿಲ್ಲೆಯ ಇಬ್ಬರು ಪ್ರಮುಖ ನಾಯಕರ ರಾಜಕೀಯ ಜೀವನಕ್ಕೆ ಸೈಕಲ್‌ ಚಿಹ್ನೆ ಟರ್ನಿಂಗ್‌ ಪಾಯಿಂಟ್‌ ಆಗಿದೆ.

-ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next