Advertisement

ರಮೇಶ ಜಾರಕಿಹೊಳಿ ಸಚಿವಗಿರಿಗೆ ವಿಘ್ನಗಳೇ ಅಡ್ಡಿ; ಬಾಲಚಂದ್ರ ಬದಲಾವಣೆ ಕಷ್ಟ

05:48 PM Jan 25, 2022 | Team Udayavani |

ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರಕಾರದಲ್ಲಿ ರಾಜ್ಯದ ಪ್ರಭಾವಿ ನಾಯಕರೆಂದು ಗುರುತಿಸಿಕೊಂಡಿರುವ ರಮೇಶ ಜಾರಕಿಹೊಳಿ ಮತ್ತೆ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವರೇ?  – ಇಂತಹ ಒಂದು ಪ್ರಶ್ನೆ ರಾಜಕೀಯ ವಲಯದಲ್ಲಿ ಮತ್ತೆ ಮತ್ತೆ ಕೇಳಲಾರಂಭಿಸಿದೆ.

Advertisement

ಕಳೆದ ಒಂದು ತಿಂಗಳಿಂದ ಸಂಪುಟ ಪುನಾರಚನೆ, ಸಂಪುಟ ವಿಸ್ತರಣೆ ಬಗ್ಗೆ ವ್ಯಾಪಕ ಚರ್ಚೆ ಹಾಗೂ ಶಾಸಕರ ಲಾಬಿ ನಡೆದಿರುವ ಬೆನ್ನಲ್ಲೇ ರಮೇಶ ಅವರ ಸಚಿವ ಸ್ಥಾನದ ಅವಕಾಶ ಮಹತ್ವ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ತಮ್ಮ ಆಪ್ತರು ಹಾಗೂ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರೇಣುಕಾಚಾರ್ಯ ಅವರ ಜೊತೆ ರಮೇಶ ಚರ್ಚೆ ನಡೆಸಿರುವುದು ಇದಕ್ಕೆ ಪುಷ್ಟಿ ನೀಡಿದೆ.

ಬೊಮ್ಮಾಯಿ ಅವರು ಆಗಾಗ ಸಂಪುಟ ವಿಸ್ತರಣೆಯ ಬಗ್ಗೆ ಪ್ರಸ್ತಾಪ ಮಾಡುತ್ತಿರುವುದು ಸಹ ರಮೇಶ ಬೆಂಬಲಿಗರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಪಕ್ಷದ ವರಿಷ್ಠರು ಈ ವಿಷಯದಲ್ಲಿ ಯಾವುದೇ ಗಂಭೀರ ಚರ್ಚೆ ಮಾಡದಿದ್ದರೂ ಸಚಿವ ಸ್ಥಾನದ ಆಕಾಂಕ್ಷಿಗಳಿಂದ ಮಾತ್ರ ಪ್ರಯತ್ನ ನಿರಂತರವಾಗಿ ನಡೆದಿದೆ. ಮೂಲಗಳ ಪ್ರಕಾರ ಪಕ್ಷದ ವಲಯದಲ್ಲಿ ಈಗ ಸಚಿವ ಸಂಪುಟ ವಿಸ್ತರಣೆಯ ಪ್ರಸ್ತಾಪ ಇಲ್ಲ. ದೆಹಲಿ ಮಟ್ಟದಲ್ಲಿ ಸಹ ಇದರ ಬಗೆಗೆ ಚರ್ಚೆಗಳು ಆಗಿಲ್ಲ. ಇದೆಲ್ಲವೂ ಉತ್ತರಪ್ರದೇಶ, ಗೋವಾ, ಪಂಜಾಬ್‌ ರಾಜ್ಯಗಳ ಚುನಾವಣೆ ಫಲಿತಾಂಶದ ಮೇಲೆ ಅವಲಂಬನೆಯಾಗಿದೆ. ಇದರ ನಡುವೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ರಮೇಶ ಜಾರಕಿಹೊಳಿ ಮಾತ್ರ ದೆಹಲಿ ಮಟ್ಟದಲ್ಲಿ ಪ್ರಯತ್ನ ಮಾಡುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.ಹಾಗೆ ನೋಡಿದರೆ ಸಂದಿಗ್ಧ ಸ್ಥಿತಿಗೆ ಸಿಲುಕಿ ಸಚಿವ ಸ್ಥಾನ ಕಳೆದುಕೊಂಡ ನಂತರ ರಮೇಶ ಜಾರಕಿಹೊಳಿ ಒಂದರ್ಥದಲ್ಲಿ ರಾಜಕೀಯವಾಗಿ ಅತಂತ್ರರಾಗಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದರೂ ಅದು ಸಚಿವ ಸ್ಥಾನವನ್ನು ಮತ್ತೆ ಪಡೆದುಕೊಳ್ಳುವಲ್ಲಿ ಸಾಕಾಗುತ್ತಿಲ್ಲ. ಬದಲಾಗಿ ವಿಘ್ನಗಳ ಮೇಲೆ ವಿಘ್ನಗಳು ಎದುರಾಗುತ್ತಿವೆ. ಈ ವಿಘ್ನಗಳು ಅವರ ಪಕ್ಷದಲ್ಲೇ ಇರುವುದು ರಮೇಶ ಅವರಿಗೆ ಗೊತ್ತಿದೆ. ಆದರೆ ಈ ವಿಘ್ನಗಳ ನಿವಾರಣೆ ಸಾಧ್ಯವಾಗುತ್ತಿಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ನಡೆದ ರಾಜಕೀಯ ಬೆಳವಣಿಗೆಗಳಿಂದ ತೀವ್ರ ಬೇಸರಗೊಂಡಿದ್ದ ರಮೇಶ ಮತ್ತೆ ಸಚಿವರಾಗಲು ನಿರಂತರ ಪ್ರಯತ್ನ ನಡೆಸುತ್ತಲೇ ಇದ್ದಾರೆ. ದೆಹಲಿ ಮಟ್ಟದಲ್ಲಿ ತಮಗೆ ಸಾಧ್ಯವಾದ ಎಲ್ಲ ಪ್ರಭಾವ ಬಳಸಿದ್ದಾರೆ. ಆದರೆ ಇದಾವುದೂ ಪಕ್ಷದ ವರಿಷ್ಠರ ಮೇಲೆ ಪರಿಣಾಮ ಬೀರಿಲ್ಲ. ಇದು ಜಾರಕಿಹೊಳಿ ಕುಟುಂಬಕ್ಕೆ ಮತ್ತು ಅವರ ಬೆಂಬಲಿಗರಿಗೆ ಬಹುದೊಡ್ಡ ಹಿನ್ನಡೆ.

ಮುಖ್ಯವಾಗಿ ರಮೇಶ ಅವರ ಮೇಲಿನ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಪಕ್ಷದ ವರಿಷ್ಠರು ಅನಗತ್ಯವಾಗಿ ಅಪಾಯವನ್ನು ಪಕ್ಷದ ಮೇಲೆ ಎಳೆದುಕೊಳ್ಳಲು ತಯಾರಿಲ್ಲ. ಸಚಿವರನ್ನಾಗಿ ಮಾಡಬೇಕೆಂದರೆ ಮೊದಲು ನ್ಯಾಯಾಲಯದ ಪ್ರಕರಣ ಬಗೆಹರಿಯಲಿ ಎಂಬ ಸಂದೇಶ ರವಾನಿಸಿದ್ದಾರೆ. ಇದು ಬಿಜೆಪಿ ಸರಕಾರ ರಚನೆಗೆ ಮುಖ್ಯ ಕಾರಣರಾಗಿದ್ದ ರಮೇಶ ಅವರಿಗೆ ಸಹಜವಾಗಿಯೇ ಆಘಾತ ಮತ್ತು ನಿರಾಸೆ ಉಂಟುಮಾಡಿದೆ. ಹೀಗಿರುವಾಗ ರಮೇಶ ಅವರ ಯಾವುದೇ ವಿಶ್ವಾಸದ ಮಾತುಗಳು ಮತ್ತು ಭರವಸೆಗಳು ಪಕ್ಷದ ವರಿಷ್ಠರ ಮೇಲೆ ಪರಿಣಾಮ ಬೀರಿದಂತೆ ಕಾಣುತ್ತಿಲ್ಲ ಎನ್ನುತ್ತಿವೆ ಪಕ್ಷದ ಮೂಲಗಳು.

Advertisement

ಇನ್ನೊಂದು ಕಡೆ ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ನೀಡದಿದ್ದರೆ ಅವರ ಸಹೋದರ ಬಾಲಚಂದ್ರ ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂಬ ಬೇಡಿಕೆ ಸಹ ಬಲವಾಗಿ ಕೇಳಿಬಂದಿದೆ. ಬಾಲಚಂದ್ರ ಅವರು ಮನಸ್ಸು ಮಾಡಿದ್ದರೆ ಯಡಿಯೂರಪ್ಪ ಸರಕಾರದಲ್ಲಿಯೇ ಮಂತ್ರಿ ಆಗಬಹುದಿತ್ತು. ಆದರೆ ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದ ಅವರು, ಸಚಿವ ಸ್ಥಾನಕ್ಕಿಂತ ಪ್ರಭಾವಶಾಲಿಯಾದ ಕರ್ನಾಟಕ ಹಾಲು ಮಹಾಮಂಡಳ(ಕೆಎಂಎಫ್)ಅಧ್ಯಕ್ಷ ಸ್ಥಾನದ ಮೇಲೆ ಕಣ್ಣುಹಾಕಿದ್ದರು. ಅಷ್ಟೇ ಅಲ್ಲ ಸುಲಭವಾಗಿ ಈ ಹುದ್ದೆ ಅಲಂಕರಿಸಿದರು.

ಹೊಸ ಸಂಕಷ್ಟ: ನ್ಯಾಯಾಲಯದ ಜೊತೆಗೆ ಈಗ ರಮೇಶ ಜಾರಕಿಹೊಳಿ ಅವರಿಗೆ ಬೆಳಗಾವಿ ಜಿಲ್ಲೆಯ ನಾಯಕರ ಹೊಸ ಸಂಕಷ್ಟ ಶುರುವಾಗಿದೆ. ವಿಧಾನ ಪರಿಷತ್‌ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶದ ನಂತರ ಜಾರಕಿಹೊಳಿ ಸಹೋದರರ ಬಗ್ಗೆ ಅಸಮಾಧಾನಗೊಂಡಿರುವ ಜಿಲ್ಲೆಯ ಬಿಜೆಪಿ ನಾಯಕರು ಅವರನ್ನು ದೂರವಿಟ್ಟು ಸಭೆ ಮಾಡಿದ್ದಲ್ಲದೆ ಸಂಪುಟ ರಚನೆ ಸಂದರ್ಭ ಅವರಿಗೆ ಅವಕಾಶ ನೀಡಬಾರದು ಎಂದು ಪಕ್ಷದ ವರಿಷ್ಠರ ಮೇಲೆ ಒತ್ತಡ ಹಾಕಲು ಚಿಂತನೆ ನಡೆಸಿದ್ದಾರೆ. ಇದು ರಮೇಶ ಅವರಿಗೆ ಹೊಸ ತಲೆನೋವು ತಂದಿದೆ. ಉಮೇಶ ಕತ್ತಿ ಅವರ ನಿವಾಸದಲ್ಲಿ ನಡೆದ ಶಾಸಕರ ಸಭೆ ಬಿಜೆಪಿಗೆ ಹೊಸ ಸಮಸ್ಯೆ ತಂದಿಟ್ಟಿದೆ. ಅಷ್ಟೇ ಅಲ್ಲ ಇದು ಜಾರಕಿಹೊಳಿ ಸಹೋದರರು ಹಾಗೂ ಜಿಲ್ಲೆಯ ನಾಯಕರ ನಡುವಿನ ಅಂತರ ಮತ್ತಷ್ಟು ಹೆಚ್ಚಲು ಕಾರಣವಾಗಲಿದೆ. ಇದೂ ಸಹ ರಮೇಶ ಅವರ ಸಚಿವರಾಗುವ ಕನಸಿಗೆ ಅಡ್ಡಿಯಾಗಲಿದೆ ಎನ್ನಲಾಗುತ್ತಿದೆ.

ಬಾಲಚಂದ್ರ ಬದಲಾವಣೆ ಕಷ್ಟ
ಕೆಎಂಎಫ್‌ ಅಧ್ಯಕ್ಷ ಸ್ಥಾನ ಬಿಡುವ ಮನಸ್ಸು ಬಾಲಚಂದ್ರ ಅವರಿಗೆ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅವರನ್ನು ಈ ಸ್ಥಾನದಿಂದ ಬದಲಾಯಿಸಿದರೆ ಮುಂದೆ ಚುನಾವಣೆಯ ಹೊಸ್ತಿಲಲ್ಲಿ ಮತ್ತೊಂದು ಹೊಸ ತಲೆನೋವು ಆರಂಭವಾಗುತ್ತದೆ ಎಂಬುದು ಸರಕಾರಕ್ಕೆ ಸಹ ಗೊತ್ತಿದೆ. ಹೀಗಾಗಿ ಅಂತಹ ಬದಲಾವಣೆಯ ಸಾಹಸಕ್ಕೆ ಸರಕಾರ ಕೈಹಾಕುವುದಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಒಂದು ವೇಳೆ ಬಾಲಚಂದ್ರ ಜಾರಕಿಹೊಳಿ ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಸಚಿವರಾಗಲು ಒಪ್ಪಿದರೆ ಆಗ ಕೆಎಂಎಫ್‌ ಅಧ್ಯಕ್ಷ ಗಾದಿಗೆ ಹತ್ತಾರು ಶಾಸಕರು ಪೈಪೋಟಿಗೆ ಇಳಿಯುತ್ತಾರೆ. ಹಿರಿಯ ಹಾಗೂ ಕಿರಿಯ ಶಾಸಕರ ನಡುವೆ ಸ್ಪರ್ಧೆ ಆರಂಭವಾಗುತ್ತದೆ. ಇದು ಪಕ್ಷದ ವರಿಷ್ಠರ ಮಟ್ಟಕ್ಕೂ ಹೋಗುತ್ತದೆ. ಇದರಿಂದ ಸರಕಾರ ಮತ್ತು ಪಕ್ಷ ಎರಡೂ ಇಕ್ಕಟ್ಟಿಗೆ ಸಿಲುಕುತ್ತವೆ.
ಈ ಎಲ್ಲ ಕಾರಣಗಳಿಂದ ಬಾಲಚಂದ್ರ ಅವರನ್ನು ಸಚಿವರನ್ನಾಗಿ ಮಾಡುವ ಆಸಕ್ತಿ ಸರಕಾರಕ್ಕೆ ಇಲ್ಲ.

*ಕೇಶವ ಆದಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next