ಶ್ರೀನಿವಾಸಪುರ: ಇಂದಿನ ಆಡಳಿತಾರೂಢ ಸರ್ಕಾರದಲ್ಲಿ ವೃದ್ಧರಿಗೆ ಪಿಂಚಣಿ ಇಲ್ಲ, ಮಂಜೂರಾಗಿರುವಮನೆ, ರಸ್ತೆ, ಸಮುದಾಯ ಭವನಗಳಿಗೆ ಹಣವಿಲ್ಲ, ರೈತರಿಗಾಗಿ ಹೊಸ ಯೋಜನೆಗಳಿಲ್ಲ. ಶೂನ್ಯ ಆಶ್ವಾ ಸನೆಗಳಿಂದ ಬಲವಂತದ ಮೇಲೆ ಸರ್ಕಾರ ನಡೆಸುತ್ತಿದ್ದು, ಇವರನ್ನು ಜನ ತಿರಸ್ಕರಿಸುವುದು ಖಚಿತ. ಮುಂದೆ ಆಡಳಿತಕ್ಕೆ ಬರುವುದು ನಮ್ಮದೇ ಸರ್ಕಾರ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ದೊಡ್ಡ ಪ್ರಮಾಣದ ವ್ಯವಸಾಯ ಸೇವಾ ಸಹಕಾರ ಸಂಘ ಡಿಸಿಸಿ ಬ್ಯಾಂಕ್‌ನ ಅರ್ಥಿಕ ನೆರವಿನಿಂದ 258 ಮಂದಿ ರೈತರಿಗೆ 2.58 ಕೋಟಿ ರೂ. ಬೆಳೆ ಸಾಲ ವಿತರಿಸಿ ಅವರು ಮಾತನಾಡಿದರು.
ಕಷ್ಟಕಾಲದಲ್ಲಿ ಆರ್ಥಿಕ ಸಹಾಯ ಮಾಡುವವರು ತಂದೆಗೆ ಸಮಾನ.ಆ ಕೆಲಸ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಡಿಸಿಸಿ ಬ್ಯಾಂಕ್ ಮಾಡುತ್ತಿದೆ. ಇದುವರೆಗೂ 1600 ಕೋಟಿ ಸಾಲ ನೀಡಲಾಗಿದೆ. ಮುಂದಿನ ದಿನಗಳಲ್ಲಿ 50 ಸಾವಿರ ಕೋಟಿ ರೂ.ವಹಿವಾಟು ನಡೆಯುವುದು ನೋಡುವುದು ನನ್ನ ಕನಸಾಗಿದೆ ಎಂದರು.
ಶೂನ್ಯ ಬಡ್ಡಿಯಲ್ಲಿ ಸಾಲ: ಪ್ರತಿ ರೈತ ಕುಟುಂಬಕ್ಕೆ ಸಾಲ ಕೊಡುವ ನಿಟ್ಟಿನಲ್ಲಿ ಪ್ರತಿ ಗ್ರಾಮದಲ್ಲಿ ಷೇರುದಾರರ ಸಂಖ್ಯೆ ಹೆಚ್ಚಿಸಿಕೊಂಡು ಶೂನ್ಯ ಬಡ್ಡಿಯಲ್ಲಿ ಸಾಲ ನೀಡಲು ಸೊಸೈಟಿಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಕಾರ್ಯೋನ್ಮುಖರಾಗಬೇಕೆಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ. ವೆಂಕಟರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್‌ಅಶೋಕ್, ಮುಖಂಡರಾದ ಅಮೀರ್‌ಖಾನ್,ರಾಮಕೃಷ್ಣೇಗೌಡ, ಅಪ್ಪಿರೆಡ್ಡಿ,ಕೋಡಿಪಲ್ಲಿ ಸುಬ್ಬಿರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ್‌ರೆಡ್ಡಿ, ಕೆ.ಕೆ. ಮಂಜುನಾಥ್, ವಿಎಸ್‌ಎಸ್ ಅಧ್ಯಕ್ಷ ಸತ್ಯನಾರಾಯಣ, ಸಿಇಒ ಈರಪ್ಪರೆಡ್ಡಿ, ದ್ವಾರಸಂದ್ರ ನಾರಾ ಯಣಸ್ವಾಮಿ, ಜಾಮಕಾಯಿಲು ವೆಂಕಟೇಶ್, ಜಿ. ರಮೇಶ್‌ಬಾಬು ಹಾಜರಿದ್ದರು.