Advertisement
ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಹೊಸ ಸರಕಾರ ಕೈಗೊಂಡಿರುವ ಕ್ರಮಗಳ ಪೈಕಿ ಒಂದನ್ನಂತೂ ನಾವು ಸ್ವಾಗತಿಸಲೇಬೇಕು. ಅದೆಂದರೆ, ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಹಿರಿಯ ಅನುಭವಿ ಕಾಂಗ್ರೆಸಿಗ ಕೆ.ಆರ್. ರಮೇಶ್ ಕುಮಾರ್ ಅವರ ಆಯ್ಕೆ. ರಮೇಶ್ ಕುಮಾರ್ ಅವರದ್ದು ಅತ್ಯಂತ ಸಹಜವಾಗಿ ನಡೆದಿರುವ ಸೂಕ್ತ ಆಯ್ಕೆ ಎನ್ನಬಹುದು. ಯಾಕೆಂದರೆ ಅವರು ಆಡಳಿತಾರೂಢ ಮಿತ್ರ ಪಕ್ಷಗಳ ಹಾಗೂ ವಿರೋಧ ಪಕ್ಷಗಳ ಪಾಲಿಗೆ ಓರ್ವ ಸ್ಪೀಕಾರಾರ್ಹ ವ್ಯಕ್ತಿಯೇ ಹೌದು. ನಮ್ಮ ಇಂದಿನ ಅನೇಕ ರಾಜಕಾರಣಿಗಳಂತೆ ರಮೇಶ್ ಕುಮಾರ್ ಅವರೂ ಕಾಂಗ್ರೆಸ್ ಪಕ್ಷ ಹಾಗೂ ಜನತಾದಳ ಅಥವಾ ಜನತಾ ಪಾರ್ಟಿಯ ನಡುವೆ ಓಡಾಟ ನಡೆಸಿದವರು. ಸ್ಪೀಕರ್ ಆಗಿ ಮೊದಲ ಅವಧಿಗೆ (1994- 99) ಕಾರ್ಯ ನಿರ್ವಹಿಸುವ ಹೊತ್ತಿಗೆ ಅವರು ಜನತಾದಳದ ಸದಸ್ಯರಾಗಿದ್ದರು. ಅವರೆಂದೂ ಬಿಜೆಪಿಯ ತೆಕ್ಕೆಯಲ್ಲಿರಲಿಲ್ಲ.
Related Articles
Advertisement
ಸ್ಪೀಕರ್ ಹುದ್ದೆ ಬೇಕಿಲ್ಲ ಎನ್ನುವವರುಇದುವರೆಗಿನ ಇಷ್ಟು ವರ್ಷಗಳ ಅವಧಿಯಲ್ಲಿ ನಮ್ಮ ಅನೇಕ ರಾಜಕಾರಣಿಗಳು ಸ್ಪೀಕರ್ ಹುದ್ದೆಯನ್ನಾಗಲಿ, ಮೇಲ್ಮನೆಯ ಸಭಾಪತಿ ಹುದ್ದೆಯನ್ನಾಗಲಿ ಬೇಡ ಎನ್ನುತ್ತ ಬಂದಿದ್ದಾರೆ. ಇದರ ಬದಲಿಗೆ ಮಂತ್ರಿಗಿರಿಗೆ ಸೈ ಅನ್ನುತ್ತಿದ್ದಾರೆ. ಸ್ಪೀಕರ್ ಅಥವಾ ಸಭಾಪತಿ ಹುದ್ದೆಗೆ ಆಯ್ಕೆಯೆನ್ನುವುದು “ಸಹಜ ಆಯ್ಕೆ’ ಅನ್ನಿಸಿಕೊಂಡಿರು ವುದು ತೀರಾ ಅಪರೂಪ. ಇದು ಈ ರಾಜಕಾರಣಿಗಳ ನಿಷ್ಪಕ್ಷ ಪಾತತನದ ಬಗೆಗೆ ದೊಡ್ಡದೊಂದು ಪ್ರಶ್ನೆ ಚಿಹ್ನೆ ಉದ್ಭವಿಸುವಂತೆ ಮಾಡಿದೆ. ಸ್ಪೀಕರ್ ಹುದ್ದೆ ಕೇವಲ ಸದನದ ಕಲಾಪಗಳ ಮಧ್ಯಸ್ಥಿಕೆ ದಾರನ/ದಾರಳ ಕುರ್ಚಿಯಲ್ಲ. ಆತ/ಆಕೆ ಶಾಸನಸಭೆಯ ನಿಯಮಾವಳಿಗಳ ಪ್ರಕ್ರಿಯೆಗಳ, ಪರಂಪರಾಗತ ಶಿಸ್ತು ಕ್ರಮಗಳ ಹಾಗೂ ಪದ್ಧತಿಗಳನ್ನು ಕಾಪಾಡುವ ಅಧೀಕ್ಷಕ /ಅಧೀಕ್ಷಕಿ ಕೂಡ. ಲೋಕಸಭೆಯ ಪ್ರಪ್ರಥಮ ಸ್ಪೀಕರ್ ಜಿ.ವಿ. ಮಾವಳಂಕರ್ ಮಾಡಿದ್ದು ಇದನ್ನೇ. ಅವರು ವಸ್ತುತಃ ವಿದೇಶದ ಹೌಸ್ ಆಫ್ ಕಾಮನ್ಸ್‌ನ ಅಥವಾ ಇತರ ವಿದೇಶೀ ಶಾಸನ ಸಭೆಗಳ ಕ್ರಮ ನಿಯಮಗಳನ್ನು ಭಾರತೀಯ ಸನ್ನಿವೇಶಕ್ಕೆ ಒಗ್ಗಿಸಿ ಕೊಂಡರು. ಕುತೂಹಲಕಾರಿ ಅಂಶವೆಂದರೆ ಮಾವಳಂಕರ್ ಒಬ್ಬ ಸ್ಪೀಕರ್ ಆಗಿ ಸದಾ ಸರಳ ಉಡುಪಿನಲ್ಲಿದ್ದರು. ಹಳೆಯ ರಾಜ ಪ್ರಭುತ್ವ ಪರಂಪರೆಯ ಶಾಸನ ಸಭೆಗಳ ವೇಷ ಭೂಷಣಗಳನ್ನು (ವಿಗ್ ಹಾಗೂ ಗೌನ್ ಧರಿಸುವ ಪದ್ಧತಿ ಯನ್ನು) ಕೈ ಬಿಟ್ಟರು. ಹಿಂದಿನ ವಿಧಾನ ಸಭೆಯಲ್ಲಿ ಕಾಗೋಡು ತಿಮ್ಮಪ್ಪ ಅವರು ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡಿ ಮಂತ್ರಿಯಾದರು. ಸ್ಪೀಕರ್ ಹುದ್ದೆಗಿಂತಲೂ ಮಂತ್ರಿಗಿರಿಯೇ ಮೇಲೆಂದು ಈ ಮೂಲಕ ತೋರಿಸಿಕೊಟ್ಟರು. ಹೀಗೆ ಮಾಡಿದ್ದು ಅವರೊಬ್ಬರೇ ಅಲ್ಲ. ಅವರಿ ಗಿಂತ ಹಿಂದೆಯೇ ಎಸ್.ಎಂ. ಕೃಷ್ಣ ಕೂಡ ಉಪಮುಖ್ಯಮಂತ್ರಿ ಯಾಗುವುದಕ್ಕಾಗಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸ್ಪೀಕರ್ ಸ್ಥಾನದಲ್ಲಿ ಉಪಸಭಾಧ್ಯಕ್ಷರಾಗಿ ಕುಳಿತಿದ್ದವರಲ್ಲಿ ಅನೇಕರು ಮುಂದಿನ ವಿಧಾನಸಭಾ ಅವಧಿಯಲ್ಲಿ ಮಂತ್ರಿಗಳಾದ ಉದಾಹರಣೆಗಳೂ ಇವೆ. ನಮ್ಮ ಅನೇಕ ರಾಜಕಾರಣಿಗಳ ಮೂಲ ಬಯಕೆ ಮಂತ್ರಿಯಾಗಿ ಸೇವೆ ಸಲ್ಲಿಸಬೇಕೆಂಬುದೇ ಆಗಿದೆ. ಹಾಗಾಗಿ ಸ್ಪೀಕರ್ ಆಗಿದ್ದವರು ಮಂತ್ರಿಯಾಗಕೂಡದೆಂಬ ವೆಸ್ಟ್ ಮಿನಿಸ್ಟರ್ ಅಥವಾ ಬ್ರಿಟಿಷ್ ವ್ಯವಸ್ಥೆಯಲ್ಲಿನ ನಿಷೇಧ ನಮ್ಮ ದೇಶಕ್ಕೆ ಅನ್ವಯವಾಗುವುದಿಲ್ಲ! ಈ ವಿಷಯದಲ್ಲಿ ಮೊತ್ತಮೊದಲ “ಕೆಟ್ಟ ಉದಾಹರಣೆ’ ತೋರಿಸಿಕೊಟ್ಟವರು ಲೋಕಸಭಾ ಸ್ಪೀಕರ್ ಆಗಿದ್ದ ಜಿ.ಎಸ್. ಧಿಲ್ಲಾನ್ (1975ರಲ್ಲಿ). ಅವರು ಇಂದಿರಾಗಾಂಧಿ ಸಂಪುಟದಲ್ಲಿ ಸಚಿವರಾಗುವುದಕ್ಕಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಪಕ್ಷದ ಟಿಕೆಟ್‌ನಿಂದಲೇ ಆಯ್ಕೆಯಾಗಿದ್ದ ಲೋಕಸಭಾ ಸ್ಪೀಕರ್ ಒಬ್ಬರನ್ನು ಪಕ್ಷವೇ ಉಚ್ಚಾಟಿಸಿದ ಅಪರೂಪದ ಪ್ರಸಂಗವೂ 2008ರಲ್ಲಿ ನಡೆದಿದೆ. ಆಗಿನ ಸ್ಪೀಕರ್ ಸೋಮನಾಥ ಚಟರ್ಜಿಯವರು ಯುಪಿಎ ಸರಕಾರದ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ಗೊತ್ತುವಳಿಯ ವಿರುದ್ಧ ಮತ ಹಾಕಲು ಒಪ್ಪಲಿಲ್ಲವೆಂಬ ಕಾರಣಕ್ಕೆ ಸಿಪಿಎಂನಿಂದ ಅವರನ್ನು ಹೊರಹಾಕಲಾಯಿತು. ಯಶಸ್ವೀ ವಕೀಲರಾಗಿದ್ದ ಸೋಮನಾಥ ಚಟರ್ಜಿ ತಮ್ಮ ನಿಷ್ಪಕ್ಷಪಾತ ಧೋರಣೆಯನ್ನು ಎಂದೂ ಬಿಟ್ಟುಕೊಡದಿದ್ದವರು; ಒಬ್ಬ ಆದರ್ಶ ನಿಲುವಿನ ಸ್ಪೀಕರ್ ಎಂದೇ ಪರಿಗಣಿತರಾದವರು. ಈಚಿನ ವರ್ಷಗಳಲ್ಲಿ ಲೋಕಸಭೆ ಹಾಗೂ ವಿಧಾನಸಭೆಗಳ ಸ್ಪೀಕರ್ ಹುದ್ದೆಯಲ್ಲಿರುವವರನ್ನು ಪ್ರಜ್ಞಾವಂತ ಜನರು ಎಚ್ಚರದಿಂದ ಗಮನಿಸುತ್ತಿದ್ದಾರೆ. ಸದಸ್ಯರ ಉಚ್ಚಾಟನೆ, ಪಕ್ಷಾಂತರ ಮಾಡಿದ್ದಕ್ಕಾಗಿ ಸದಸ್ಯತ್ವದಿಂದ ಅನರ್ಹಗೊಳಿಸುವ ಪ್ರಕ್ರಿಯೆ ಹಾಗೂ ಸಂಸದೀಯ ನೀತಿಯ ಉಲ್ಲಂಘನೆ ಮುಂತಾದ ವಿಷಯಗಳಲ್ಲಿ ಸ್ಪೀಕರ್‌ಗಳಾದವರು ತಮ್ಮದೇ ನಿರ್ಧಾರವನ್ನು ತಳೆಯಬೇಕಾಗು ತ್ತದೆ. ನಮ್ಮ ವಿಧಾನಸಭೆಯ ಹಿಂದಿನ
ಸ್ಪೀಕರ್ ಕೆ.ಬಿ. ಕೋಳಿವಾಡರು ಜೆಡಿಎಸ್‌ನ ಮಾಜಿ ಶಾಸಕ ರಿಂದ ನಡೆದ ಪಕ್ಷಾಂತರ ಪ್ರಸಂಗವನ್ನು “ತಮ್ಮದೇ ರೀತಿ’ಯಲ್ಲಿ ನಿಭಾಯಿಸಿದರು! ಇನ್ನು, ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಕಾರ್ಯ ದರ್ಶಿಗಳ ನೈತಿಕ ಕಾರ್ಯಕ್ಷಮತೆಯಲ್ಲಿ ಕುಸಿತವಾಗಿರುವುದು ಯಾರ ಗಮನಕ್ಕೂ ಬೀಳದೆ ಹೋಗಿಲ್ಲ. ಸ್ಪೀಕರ್/ಸಭಾಪತಿ ಸ್ಥಾನದಲ್ಲಿರುವವರು ಅವರನ್ನೇ ಅವಲಂಬಿಸಿರುತ್ತಾರೆ. ವಿವಿಧ ಶಾಸಕಾಂಗ ಸಮಿತಿಗಳ ಮಟ್ಟಿಗೂ ಈ ಮಾತು ನಿಜ. ಈ ಹಿಂದೆ ಎರಡೂ ಸದನಗಳಿಗೆ ಒಂದೇ ಕಾರ್ಯಾಲಯವಿತ್ತು. ಕೆಳಹಂತದ ಕಾರ್ಯದರ್ಶಿಗಳ ಮಟ್ಟದಲ್ಲಿ ಕೂಡ ಅಧೀನ ಕಾರ್ಯದರ್ಶಿ ಗಳಂಥ ಅತ್ಯುತ್ತಮ ಕಾರ್ಯಕ್ಷಮತೆಯ ಅಧಿಕಾರಿಗಳಿದ್ದರು. ಇವರಲ್ಲಿ ಅನೇಕರು ಭಡ್ತಿ ದೊರೆಯದೆಯೇ ನಿವೃತ್ತರಾದರು. ಯಾವಾಗಲೂ ಉಲ್ಲೇಖೀಸಲ್ಪಡುವ ಸಮರ್ಥ ಶಾಸಕಾಂಗ ಕಾರ್ಯ ದರ್ಶಿಗಳ ಹೆಸರುಗಳೆಂದರೆ ಜಿ.ಎಸ್. ವೆಂಕಟರಮಣ ಅಯ್ಯರ್ (1950-65) ಹಾಗೂ ತೆ. ಹನುಮಂತಪ್ಪ (1965-76). ಮಮತಾ ಬ್ಯಾನರ್ಜಿ ಹಾಗೂ ಪೊಲೀಸರ ಮರ್ಜಿ
ನಮ್ಮ ಬೆಂಗಳೂರಿನ “ತುಂಬಾ ಕಟ್ಟುನಿಟ್ಟಿನ’ ಪೊಲೀಸರು ನೂತನ ಸರಕಾರದ ಪ್ರಮಾಣ ವಚನ ಸಮಾರಂಭಕ್ಕಾಗಿ ವಿಧಾನ ಸೌಧದತ್ತ ಸಾಗುತ್ತಿದ್ದ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಕಾರನ್ನು ತಡೆದು ನಿಲ್ಲಿಸಿದ ಪ್ರಸಂಗ ಘಟಿಸಿದೆ. ಪೊಲೀಸರ ಈ ಕ್ರಮ ಮಮತಾ ಬ್ಯಾನರ್ಜಿ ಪ್ರತಿನಿಧಿ ಸುತ್ತಿರುವ ಪಶ್ಚಿಮ ಬಂಗಾಲದ ಜನತೆಗೆ ಮಾಡಿರುವ ಬಹಿರಂಗ ಅವಮಾನವಲ್ಲದೆ ಇನ್ನೇನಲ್ಲ. ಆಕೆ ಪೊಲೀಸ್ ಮುಖ್ಯಸ್ಥೆಯಾದ ನೀಲಮಣಿ ರಾಜು ಅವರಲ್ಲಿ ದೂರು ಸಲ್ಲಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದು ನ್ಯಾಯವಾಗಿಯೇ ಇದೆ. ಒಂದು ವೇಳೆ ನಮ್ಮ ಪೊಲೀಸ್ ಸಿಬಂದಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನೂ ಹೀಗೆ ನಡೆಸಿಕೊಂಡಿದ್ದಿದ್ದರೆ ಏನಾಗುತ್ತಿತ್ತು? ಇದು ಕಾಂಗ್ರೆಸ್° ಅತ್ಯುನ್ನತ ನಾಯಕರಿಗೆ ತೋರಿದ ಅಗೌರವ; “ನರೇಂದ್ರ ಮೋದಿ – ಅಮಿತ್ ಶಾ ಜೋಡಿಯ ಸಂಚು’ ಇದು ಎಂದು ಕಾಂಗ್ರೆಸ್ ಪಕ್ಷ ಆಪಾದಿಸುವ ಸಾಧ್ಯತೆಯಿತ್ತು. ಇವರಿ
ಬ್ಬರೂ ಶಿಷ್ಟಾಚಾರದ ವಿಶೇಷ ವರ್ಗಕ್ಕೆ ಸೇರಿದ್ದಾರೆ ಎನ್ನುವುದಾದರೆ, ಕರ್ನಾಟಕದ ಮುಖ್ಯಮಂತ್ರಿ ಕೋಲ್ಕತ್ತಾಗೆ ಭೇಟಿ ನೀಡುವ ಸಂದರ್ಭದಲ್ಲಿ ಅಲ್ಲಿನ ಪೊಲೀಸರು ಅವರನ್ನು ಇದೇ ರೀತಿ ನಡೆಸಿಕೊಂಡರೆ ಏನಾದೀತು? ಮಮತಾ ಬ್ಯಾನರ್ಜಿ ಅನೂಹ್ಯ ಸ್ವಭಾವದ ವಿಚಿತ್ರ ನಡವಳಿಕೆಯ ವ್ಯಕ್ತಿಯಾಗಿರಬಹು ದೇನೋ ನಿಜ; ಆದರೆ ಆಕೆಯ ಸರಳತೆಯನ್ನು ನಾವು ಶ್ಲಾ ಸ ಲೇಬೇಕು. ಮಮತಾ ಬ್ಯಾನರ್ಜಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದು ಅತ್ಯಂತ ಸರಳ ಮಾದರಿಯಲ್ಲಿ. ಆಕೆ ವಾಸ್ತವ್ಯ ಹೂಡಿದ್ದು ನಮ್ಮ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಂತೆ ಪಂಚತಾರಾ ದರ್ಜೆಯ ಅಥವಾ ಇತರ ವೈಭವೋಪೇತ ಹೊಟೇಲಿನಲ್ಲಿ ಅಲ್ಲ; ಬದಲಿಗೆ ಸರಳ ವ್ಯವಸ್ಥೆಯಿರುವ ಕುಮಾರಕೃಪಾ ಸರಕಾರಿ ಅತಿಥಿಗೃಹದಲ್ಲಿ. ಇನ್ನೂ ವಿಶೇಷವೆಂದರೆ ಆಕೆ ಕುಮಾರಕೃಪಾ ಅತಿಥಿಗೃಹದಲ್ಲಿನ ಸೌಲಭ್ಯಗಳನ್ನು ಮೆಚ್ಚಿ ಮಾತಾಡಿದ್ದು.