ಬೆಳಗಾವಿ: ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮೆಂಟಲ್ ಕೇಸ್. ಅಂಥವರ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಚುನಾವಣೆ ಮುನ್ನವೇ ರಾಜ್ಯ ಸರಕಾರ ತರಾತುರಿಯಲ್ಲಿ ಹಲವು ಕಾಮಗಾರಿಗಳ ಅಲ್ಪಾವಧಿ ಟೆಂಡರ್ ಕರೆದು ಕಾರ್ಯಾದೇಶ ನೀಡುತ್ತಿದ್ದು, ಚುನಾವಣೆ ಸಮೀಪಿಸಿದ್ದರಿಂದ ಹಣ ಸಂಗ್ರಹಿಸಿಟ್ಟು ರಾಜ್ಯವನ್ನು ಲೂಟಿ ಮಾಡುತ್ತಿದೆ. ಈ ಸಲ ಬಿಜೆಪಿ ಸರಕಾರ ಬರುವುದಿಲ್ಲ ಎಂಬುದು ಸಿಎಂ ಬಸವರಾಜ ಬೊಮ್ಮಾಯಿಗೆ ಗೊತ್ತಿದೆ.
ಹೀಗಾಗಿ ಅಕ್ರಮವಾಗಿ ಟೆಂಡರ್ ಕರೆದು ಹಣ ಲೂಟಿ ಮಾಡುತ್ತಿದ್ದಾರೆ. ನಮ್ಮ ಸರಕಾರ ಈ ಸಲ ಬರುವುದು ಖಚಿತ. 15 ದಿನಗಳಲ್ಲಿ ಈಗಿನ ಎಲ್ಲ ಟೆಂಡರ್, ಕಾರ್ಯಾದೇಶಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು. ಸಂಬಂಧಿಸಿದ ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧ ಕಠಿನ ಕ್ರಮ ಕೈಗೊಂಡು ಮನೆಗೆ ಕಳುಹಿಸಲಾಗುವುದು ಎಂದರು.
ಬಿಜೆಪಿಯ ಭ್ರಷ್ಟ ಸರ್ಕಾರದಿಂದ ಅಗತ್ಯವಸ್ತುಗಳ ಬೆಲೆ ಏರುತ್ತಿದೆ. ಭ್ರಷ್ಟಾಚಾರದಿಂದ ಜನರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಬಂದ ಬಳಿಕ ಕುಟುಂಬ ಯಜಮಾನಿಗೆ 2 ಸಾವಿರ ರೂ. ನೀಡಲು ಹಣ ಎಲ್ಲಿಂದ ತರುತ್ತೀರಿ ಎಂದು ಬಿಜೆಪಿಯವರು ನಮ್ಮನ್ನು ಕೇಳುತ್ತಿದ್ದಾರೆ. ಭ್ರಷ್ಟಾಚಾರ ನಿಂತರೆ, ಲೂಟಿ ನಿಂತರೆ ಹಣ ಸರ್ಕಾರದ ಬೊಕ್ಕಸಕ್ಕೆ ಬರುತ್ತದೆ. ರಾಜ್ಯ ಸರ್ಕಾರದ ವಿಪರೀತ ಭ್ರಷ್ಟಾಚಾರಕ್ಕೆ ಜನರು ಬೇಸತ್ತಿದ್ದಾರೆ. ಭ್ರಷ್ಟ ಸರ್ಕಾರದ ವಿರುದ್ಧ ಮಾ. 9ರಂದು ಎರಡು ತಾಸುಗಳವರೆಗೆ ಪ್ರತಿಭಟನೆ, ಬಂದ್‌ಗೆ ಕರೆ ನೀಡಲಾಗಿದೆ ಎಂದರು.