ಬೆಳಗಾವಿ: ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ಬಿಜೆಪಿ ಸೇರ್ಪಡೆ ಆಗುವ ಹಿಂದಿನ ದಿನ ನನಗೆ ಒಂದು ನಿಮಿಷವೂ ನಿದ್ದೆ ಬರಲಿಲ್ಲ ಎಂದು ಗೋಕಾಕ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಒಡಲಾಳದ ಮಾತು ಬಿಚ್ಚಿಟ್ಟರು.
ಗೋಕಾಕದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದ ನಾನು ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಕಟ್ಟಾ ಅಭಿಮಾನಿ. ಈಗ ಕಾಂಗ್ರೆಸ್‌ನಲ್ಲಿ ಬ್ಯಾಗ್ ಹಿಡಿದು ಬಾಗಿಲು ಕಾಯುವವರು ಲೀಡರ್ ಆಗುತ್ತಿದ್ದಾರೆ. ಮಾಸ್ ಲೀಡರ್‌ಗಳಿಗೆ ಯಾವುದೇ ಬೆಲೆ ಇಲ್ಲ ಎಂದು ಹೇಳಿದರು.
ನನ್ನ ದುಖಃವನ್ನು ಬಹಿರಂಗವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ದುಖ ನುಂಗಿಕೊಳ್ಳಬೇಕಾದ ಅನಿರ್ವಾಯ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್‌ನಲ್ಲಿಯೇ ಇದ್ದಿದ್ದರೆ ನನ್ನನ್ನು ಸಂಪೂರ್ಣ ನಿರ್ನಾಮ ಮಾಡುತ್ತಿದ್ದರು ಎಂದು ಭಾವುಕರಾದ ರಮೇಶ ಜಾರಕಿಹೊಳಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ. ಪಕ್ಷದಲ್ಲಿ ಏನೇ ಆದರೂ ಮಲ್ಲಿಕಾರ್ಜುನ ಖರ್ಗೆ ನೋಡಲ್ಲ. ಸಿದ್ದರಾಮಯ್ಯ ದರ್ಪದ, ಡಿಕೆಶಿ ಪೋಸ್ ಕೋಡೋ ಲೀಡರ್ ಮಾತ್ರ. ಖರ್ಗೆ ಬ್ಲ್ಯಾಕ್‌ಮೇಲ್ ಮಾಡಲ್ಲ, ಧೈರ್ಯವನ್ನೂ ಮಾಡಲ್ಲ. ಆದರೆ ಸಿದ್ದರಾಮಯ್ಯ ಎರಡನ್ನೂ ಮಾಡಿ ಮುಖ್ಯಮಂತ್ರಿ ಆಗಿ ಬಿಟ್ಟರು ಎಂದು ಟೀಕಿಸಿದರು.