Advertisement

ರಮೇಶ್‌ –ಹೆಬ್ಟಾಳ್ಕರ್‌ ನಡುವೆ ಪ್ರತಿಷ್ಠೆಯ ಕದನ: ಲಕ್ಷ್ಮೀ ಕ್ಷೇತ್ರದಲ್ಲಿ ಕಾಂಚಾಣ-ಕಾಣಿಕೆ ಸವಾಲು ಜೋರು

11:45 PM Jan 22, 2023 | Team Udayavani |

ಬೆಳಗಾವಿ: ನಗರದ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ವಿಷಯದಲ್ಲಿ ಶಾಸಕರಾದ ರಮೇಶ್‌ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಟಾಳ್ಕರ್‌ ನಡುವೆ ಹತ್ತಿಕೊಂಡ ರಾಜಕೀಯ ಬೆಂಕಿ ಇನ್ನೂ ಆರಿಲ್ಲ. ಸರಕಾರವೇ ಉರುಳಿದ ಉದಾಹರಣೆಯ ಈ ಇಬ್ಬರ ನಡುವಿನ ರಾಜಕೀಯ ವೈಷಮ್ಯ ಹಾಗೂ ಪ್ರತಿಷ್ಠೆಯ ಕಿಡಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ತೀವ್ರತೆ ಪಡೆ ದು ಮತ್ತಷ್ಟು ಪ್ರದೇಶಕ್ಕೆ ವ್ಯಾಪಿಸುತ್ತಿದೆ.

Advertisement

2018ರ ಚುನಾವಣೆಯಲ್ಲಿ ಹೆಬ್ಟಾಳ್ಕರ್‌ ಪರ ನಿಂತು ಚುನಾವಣೆ ಮಾಡಿ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಮೇಶ್‌ ಈಗ ಅದೇ ಹೆಬ್ಟಾಳ್ಕರ್‌ಸೋಲಿಸಲು ಪಣತೊಟ್ಟಿದ್ದಾರೆ. ಇದು ತಮ್ಮ ಏಕೈಕ ಅಜೆಂಡಾ ಎನ್ನುವಂತೆ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಿರಂತರ ಸಂಚಾರ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ನಿರ್ಣಾಯಕರಾಗಿರುವ ಮರಾಠಾ ಸಮುದಾಯದ ಜನರನ್ನು ಸೇರಿಸಿ ಸಭೆಗಳನ್ನು ಮಾಡುತ್ತಿದ್ದಾರೆ. ಮತದಾರರಿಗೆ ಬಹಿರಂಗವಾಗಿಯೇ ಹಣ ಮತ್ತು ಕಾಣಿಕೆಯ ಆಮಿಷ ಸಹ ತೋರಿಸುತ್ತಿದ್ದಾರೆ.

ಹಾಗೆ ನೋಡಿದರೆ ಲಕ್ಷ್ಮೀ ಹೆಬ್ಟಾಳ್ಕರ್‌ ಮತ್ತು ರಮೇಶ್‌ ಜಾರಕಿಹೊಳಿ ನಡುವಿನ ಸ್ನೇಹ ಮತ್ತು ಆತ್ಮೀಯತೆಗೆ ಧಕ್ಕೆ ಬರಲು ಕೇವಲ ಬೆಳಗಾವಿ ಪಿಎಲ್‌ಡಿ ಬ್ಯಾಂಕ್‌ ಚುನಾವಣೆಯೊಂದೇ ಕಾರಣವಲ್ಲ. ಅದು ನೆಪ ಅಷ್ಟೇ. ಕಾರಣಗಳೇ ಬೇರೆ ಎಂಬುದು ಅವರ ಆಪ್ತರ ಮಾತು. ಇದರ ಜತೆಗೆ ಮುಖ್ಯವಾಗಿ ಜಿಲ್ಲೆಯ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್‌ ಅವರ ನೇರ ಹಸ್ತಕ್ಷೇಪ ರಮೇಶ್‌ಅವರ ಮುನಿಸಿಗೆ ಕಾರಣವಾಯಿತು. ಶಿವಕುಮಾರ್‌ ನಡೆಯ ಬಗ್ಗೆ ರಮೇಶ್‌ ಹಾಗೂ ಸಹೋದರ ಸತೀಶ್‌ ಜಾರಕಿಹೊಳಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಇದು ಪಿಎಲ್‌ಡಿ ಬ್ಯಾಂಕ್‌ ಚುನಾವಣೆಯಲ್ಲಿ ಸ್ಪಷ್ಟವಾಗಿ ಎದ್ದುಕಂಡಿತು. ಇದಾದ ಬಳಿಕ ರಮೇಶ್‌ ಜಾರಕಿಹೊಳಿ ತಮ್ಮ ರಾಜಕೀಯ ಸಾಮರ್ಥಯ ತೋರಿಸಲು ತೊಡೆತಟ್ಟಿ ನಿಂತರು. ಅದುವರೆಗೆ ಗೋಕಾಕ ಕ್ಷೇತ್ರಕ್ಕೆ ಮಾತ್ರ ತಮ್ಮನ್ನು ಸೀಮಿತಮಾಡಿಕೊಂಡಿದ್ದ ರಮೇಶ್‌ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಘಟನೆಯ ಅನಂತರ ರಾಜ್ಯ ನಾಯಕರಾಗಿ ಬೆಳೆದರು. ಶಿವಕುಮಾರ್‌ ಹಾಗೂ ಹೆಬ್ಟಾಳ್ಕರ್‌ ಮೇಲಿನ ಅವರ ಸಿಟ್ಟು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಸರಕಾರಕ್ಕೆ ಶಾಪವಾಗಿ ಪರಿಣಮಿಸಿತು. ದೇವರ ಮುಂದೆ ಪ್ರತಿಜ್ಞೆ ಮಾಡಿದವರಂತೆ ರಮೇಶ್‌ ಜಾರಕಿಹೊಳಿ ಸರಕಾರದ ಪತನಕ್ಕೆ ಕಾರಣರಾದರು. ತಮ್ಮನ್ನು ಸಚಿವ ಸ್ಥಾನದಿಂದ ಕೈಬಿಟ್ಟ ಸರಕಾರವನ್ನೇ ಪತನಗೊಳಿಸಿದರು. ಹೆಬ್ಟಾಳ್ಕರ್‌ ಮೇಲಿನ ಸಿಟ್ಟು ರಾಜ್ಯ ರಾಜಕಾರಣದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿತು. ಮುಂದೆ ನಡೆದಿ¨ªೆಲ್ಲ ಈಗ ಇತಿಹಾಸ.

ಇನ್ನು ರಮೇ ಶ್‌ ತಮ್ಮ ಗೋಕಾಕ ಕ್ಷೇತ್ರಕ್ಕಿಂತ ಹೆಬ್ಟಾಳ್ಕರ್‌ ಪ್ರತಿನಿಧಿಸುತ್ತಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರುವುದು ಅಚ್ಚರಿ ಉಂಟುಮಾಡಿದರೂ ಸಾಕಷ್ಟು ಕುತೂಹಲ ಮೂಡಿಸಿರುವುದು ಸುಳ್ಳಲ್ಲ. ಬೆಳಗಾವಿಗೆ ಬಂದಾಗಲೊಮ್ಮೆ ಗ್ರಾಮೀಣ ಕ್ಷೇತ್ರದ ಕಾರ್ಯಕರ್ತರು ಹಾಗೂ ಮುಖಂಡರ ಸಭೆ ಮಾಡುತ್ತಿರುವ ರಮೇಶ್‌, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಬಿಜೆಪಿ ವಶ ಮಾಡಿಕೊಳ್ಳುವ ಸವಾಲು ಹಾಕಿದ್ದಾರೆ. ಇಲ್ಲಿ ಬಿಜೆಪಿ ಗೆಲ್ಲಬೇಕು ಎನ್ನುವುದಕ್ಕಿಂತ ಹೆಬ್ಟಾಳ್ಕರ್‌ ಸೋಲಬೇಕು ಎಂಬುದು ಅವರ ಏಕೈಕ ಗುರಿ. ಇದು ಯಾರಿಗೆ ಲಾಭ ತಂದುಕೊಡುತ್ತದೆ ಕಾದು ನೋಡ ಬೇಕು.

ಚುನಾವಣೆಯಲ್ಲಿ ಸೋಲು-ಗೆಲುವಿನ ಕಾರಣದಿಂದ ಇಬ್ಬರೂ ನಾಯಕರು ಪರಸ್ಪರ ನೇರ ಸವಾಲು ಹಾಕಿಕೊಂಡಿದ್ದಾರೆ. ಪಕ್ಷದ ವರಿಷ್ಠರು ಹೇಳಿದರೆ ಗೋಕಾಕ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಸಿದ್ಧ ಎಂದು ಹೆಬ್ಟಾಳ್ಕರ್‌ ಹೇಳಿದರೆ; ಈ ಕಡೆ ರಮೇಶ್‌ ಜಾರಕಿಹೊಳಿ ಗ್ರಾಮೀಣ ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆ ನಿಶ್ಚಿತ. ನಾನೇ ಖುದ್ದು ಇದರ ಉಸ್ತುವಾರಿ ವಹಿಸಿಕೊಂಡು ಬಿಜೆಪಿ ಅಭ್ಯರ್ಥಿ ಗೆಲ್ಲಿಸುತ್ತೇನೆ ಎಂದು ಪ್ರತಿಸವಾಲು ಹಾಕಿದ್ದಾರೆ. ಇಬ್ಬರ ಪ್ರತಿಷ್ಠೆಯೂ ಪಣಕ್ಕಿದೆ. ಯಾರಿಗೆ ನಗು ಮತ್ತು ಸಿಹಿ ಎಂಬುದು ಈಗಲೇ ಹೇಳುವುದು ಬಹಳ ಕಷ್ಟ. ಆದರೆ ಈ ಬಾರಿಯ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆಯುವುದು ನಿಶ್ಚಿತ.

Advertisement

ತಮಗೆ ರಾಜಕೀಯವಾಗಿ ಹಿನ್ನಡೆ ಮತ್ತು ಸಚಿವ ಸ್ಥಾನ ಕಳೆದುಕೊಳ್ಳುವಲ್ಲಿ ಕಾರಣರಾದವರಲ್ಲಿ ಹೆಬ್ಟಾ ಳ್ಕರ್‌ ಕೂಡ ಒಬ್ಬರು ಎಂದು ಖಚಿತವಾಗಿ ನಂಬಿರುವ ರಮೇಶ್‌ ಇದೇ ಕಾರಣದಿಂದ ಅ ವರ ಮೇಲೆ ತಿರುಗಿ ಬಿದ್ದಿದ್ದಾರೆ. ಬೆಳಗಾವಿ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಸಮಯದಲ್ಲಿ ಆರಂಭವಾದ ಈ ರಾಜಕೀಯ ದ್ವೇಷ ಈಗ ಪರಾಕಾಷ್ಠೆಗೆ ಬಂದು ನಿಂತಿದೆ. ಪರಸ್ಪರ ಆರೋಪ, ಟೀಕಾ ಪ್ರಹಾರ ರಾಜಕೀಯದ ಗಡಿ ಮೀರಿವೆ. ಒಮ್ಮೊಮ್ಮೆ ಜವಾಬ್ದಾರಿ ಮರೆತು ವೈಯಕ್ತಿಕ ಟೀಕೆಗಳು ಲಕ್ಷ ¾ಣ ರೇಖೆಯನ್ನೂ ದಾಟಿವೆ.

ಈಗ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಡೆಗೆ ಹೆಚ್ಚು ಗಮನಹರಿಸಿರುವ ರಮೇಶ್‌ ಈ ಕ್ಷೇತ್ರದಿಂದ ತಮ್ಮ ಆಪ್ತ ನಾಗೇಶ್‌ ಮುನ್ನೋಳಕರ ಅವರಿಗೆ ಬಿಜೆಪಿ ಟಿಕೆಟ್‌ ಕೊಡಿಸಲು ಶಕ್ತಿಮೀರಿ ಪ್ರಯತ್ನ ನಡೆಸಿದ್ದಾರೆ. ಈ ಸಂಬಂಧ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ಮನವರಿಕೆ ಮಾಡಿದ್ದಾರೆ. ಈ ಪ್ರಯತ್ನ ಎಷ್ಟರಮಟ್ಟಿಗೆ ಫಲಕಾರಿಯಾಗುವದೋ ಗೊತ್ತಿಲ್ಲ. ಆದರೆ ಇದರಿಂದ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಳ್ಳುವ ಲಕ್ಷಣಗಳು ಮಾತ್ರ ದಟ್ಟವಾಗಿವೆ.

ಈ ಕಡೆ ರಮೇಶ್‌ ಅವರ ಸವಾಲನ್ನು ಸ್ವೀಕಾರ ಮಾಡಿರುವ ಶಾಸಕಿ ಹೆಬ್ಟಾಳ್ಕರ್‌ ಸಹ ಸುಮ್ಮನೆ ಕೂತಿಲ್ಲ. ಒಂದೆಡೆ ಸ್ವಲ್ಪಮಟ್ಟಿನ ಆತಂಕ ಕಂಡುಬಂದರೂ ವಿಚಲಿತರಾಗದೆ ತಮ್ಮ ಎಲ್ಲ ರಾಜಕೀಯ ತಂತ್ರಗಾರಿಕೆಯನ್ನು ಒರೆಗೆ ಹಚ್ಚಿದ್ದಾರೆ. ಪ್ರೀತಿಯಿಂದ ನಾನು ನಿಮ್ಮ ಮನೆ ಮಗಳು’ ಎನ್ನುತ್ತಲೇ ಪ್ರತೀದಿನ ಕ್ಷೇತ್ರದ ಒಂದು ಗ್ರಾಮದಲ್ಲಿ ಸಭೆ ಮಾಡುತ್ತಿದ್ದಾರೆ. ಮತದಾರರನ್ನು ಯಾವ ರೀತಿ ಹಿಡಿದಿಟ್ಟುಕೊಳ್ಳಬೇಕು ಎಂಬುದನ್ನು ಕರಗತ ಮಾಡಿಕೊಂಡು ಆ ನಿಟ್ಟಿನಲ್ಲಿ ಕಾರ್ಯತಂತ್ರ ಹೆಣೆಯುತ್ತಿದ್ದಾರೆ.

– ಕೇಶವ ಆದಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next