ಬಾಗಲಕೋಟೆ: ನಗರಕ್ಕೆ ಘೋಷಣೆ ಯಾಗಿರುವ ಸರಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಅನುದಾನಕ್ಕೆ ನಮ್ಮದೇನು ತಕರಾರು ಇಲ್ಲ ಎಂದು ಶಾಸಕ ವೀರಣ್ಣ ಚರಂತಿಮಠ ನೀಡಿದ ಹೇಳಿಕೆ ಬಾಲಿಶತನದಿಂದ ಕೂಡಿದೆ ಎಂದು ಕರವೇ ಜಿಲ್ಲಾ ಅಧ್ಯಕ್ಷ ರಮೇಶ ಬದ್ನೂರ ಆರೋಪಿಸಿದ್ದಾರೆ.
ನವನಗರದ ಕಸಾಪ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಏ. 6ರಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ನೇತೃತ್ವದಲ್ಲಿ ಬೃಹತ್ ಜನಾಂದೋಲನ ಹೋರಾಟದ ಕುರಿತ ಜಿಲ್ಲೆಯ ವಿವಿಧ ಪಕ್ಷದ ಹಾಗೂ ಸಂಘಟನೆಯ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಶಾಸಕ ವೀರಣ್ಣ ಚರಂತಿಮಠ 2018ರಿಂದ ಇಲ್ಲಿಯವರೆಗೆ ಕಾಲೇಜು ಅನುದಾನಕ್ಕೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಎಷ್ಟು ಬಾರಿ ಪತ್ರ ಬರೆದಿದ್ದಾರೆ ಎಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕು. ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ಸಂಸದರು ಎಷ್ಟು ಬಾರಿ ಮುಖ್ಯಮಂತ್ರಿಗಳ ಬಳಿ ನಿಯೋಗ ತೆಗೆದುಕೊಂಡು ಹೋಗಿದ್ದೇವೆ ಎಂದು ಸ್ಪಷ್ಟನೆ ನೀಡಬೇಕು.
ಬಜೆಟ್ ಅಧಿವೇಶನದಲ್ಲಿ ಕಾಲೇಜು ಆರಂಭಕ್ಕೆ ಮಾತನಾಡಿದ್ದೀರಿ ಎಂಬುದನ್ನು ವಿಡಿಯೋ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ತಾವು ಬಸವೇಶ್ವರ ಸಂಘವನ್ನು ಎಷ್ಟು ಪ್ರೀತಿಯಿಂದ ಬೆಳೆಸುತ್ತಿದ್ದೀರಿ, ಅದೇ ಮಾದರಿಯಲ್ಲಿ ಜಿಲ್ಲೆಯಲ್ಲಿ ಮಂಜೂರಾಗಿರುವ ಸರಕಾರಿ ವೈದ್ಯಕೀಯ ಕಾಲೇಜನ್ನು ಜಿಲ್ಲೆಗೆ ತಂದು ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಬೇಕು. ಜಿಲ್ಲೆಯ ಶ್ರಮಿಕರ ಹಾಗೂ ಬಡವರ, ದೀನ ದಲಿತರ, ಪರವಾಗಿ ಧ್ವನಿ ಎತ್ತಿ ಕಾಲೇಜನ್ನು ಆರಂಭಕ್ಕೆ ಮುಂದಾಗಬೇಕು ಎಂದು ವಿನಂತಿಸಿದ್ದೇವೆ ವಿನಃ ನಿಮ್ಮನ್ನು ತೇಜೋವಧೆ ಮಾಡುವ ಉದ್ದೇಶ ನಮ್ಮದಲ್ಲ ಎಂದು ಹೇಳಿದರು.
ಯುವ ಮುಖಂಡ ಸಂತೋಷ ಹೊಕ್ರಾಣಿ ಮಾತನಾಡಿ, ಜಿಲ್ಲೆಗೆ ಮಂಜೂರಾದ ಸರಕಾರಿ ವೈದ್ಯಕೀಯ ಕಾಲೇಜನ್ನು ಮಂಜೂರಿ ಮಾಡಿಸಲು ಪûಾತೀತ ಹೋರಾಟ ಅಗತ್ಯ. ಅದಕ್ಕೆ ನಮ್ಮ ಬೆಂಬಲವಿದೆ. ಕಾರಣ ಜಿಲ್ಲೆಯ ಪ್ರಗತಿಪರ ಚಿಂತಕರು, ಬುದ್ದಿ ಜೀವಿಗಳು, ವಿವಿಧ ಸಂಘಟನೆಯ ಮುಖಂಡರು ಬೃಹತ್ ಜನಾಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಿಲ್ಲೆಗೆ ಮಂಜೂರಾದ ಸರಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಸಹಕರಿಸಬೇಕು ಎಂದರು.
ಶಿವರಾಮೇಗೌಡ ಬಣದ ಕರವೇ ಜಿಲ್ಲಾಧ್ಯಕ್ಷ ಬಸನಗೌಡ ಪಾಟೀಲ, ಜಯ ಕರ್ನಾಟಕ ಸಂಘದ ಜಿಲ್ಲಾಧ್ಯಕ್ಷ ಆರ್.ಡಿ.ಬಾಬು ಮಾತನಾಡಿದರು. ಪೂರ್ವಭಾವಿ ಸಭೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಮುಖಂಡ ಅಶೋಕ ಮುತ್ತಿನಮಠ, ನಗರಸಭಾ ಸದಸ್ಯರಾದ ಚೆನ್ನವೀರ ಅಂಗಡಿ, ಲಕ್ಷ್ಮೀ ಚವ್ಹಾಣ, ಕಾಂಗ್ರೆಸ್ ಮುಖಂಡರಾದ ಹಣಮಂತ ರಾಕುಂಪಿ, ಗೋವಿಂದ ಬಳ್ಳಾರಿ, ಎಸ್.ಎನ್. ರಾಂಪುರ, ನಿಂಗಪ್ಪ ಕೋಟಿ, ಮಹೇಶ ಜಾಲವಾದಿ, ಮಂಜುನಾಥ ಮುಚಖಂಡಿ, ಮಂಜುನಾಥ ಪುರತಗೇರಿ, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಅಮರೇಶ ಕೊಳ್ಳಿ, ಮಹಿಳಾ ಮುಖಂಡರಾದ ಭಾಗ್ಯಶ್ರೀ ಬೆಟಗೇರಿ, ಕರವೇ ಪದಾಧಿಕಾರಿಗಳಾದ ಬಸವರಾಜ ಧರ್ಮಟ್ಟಿ, ಬಸವರಾಜ ಅಂಬಿಗೇರ, ವಿನೂತ ಮೇಲಿನಮನಿ, ಮಲ್ಲು ಕಟ್ಟಿಮನಿ ಉಪಸ್ಥಿತರಿದ್ದರು.