ರಮೇಶ್ ಅರವಿಂದ್ ನಟನೆಯ “ಶಿವಾಜಿ ಸುರತ್ಕಲ್-2′ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಆಕಾಶ್ ಶ್ರೀವತ್ಸ ಚಿತ್ರಕಥೆ ಬರೆದು, ಸಂಕಲನ ಮಾಡಿ, ನಿರ್ದೇಶನ ಮಾಡಿರುವ ಈ ಚಿತ್ರವನ್ನು ಅಂಜನಾದ್ರಿ ಸಿನಿ ಕ್ರಿಯೇಶನ್ಸ್ ಮೂಲಕ ಅನೂಪ್ ಗೌಡ ಮತ್ತು ರೇಖಾ ಕೆ ಎನ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ರಾಘು ರಮಣಕೊಪ್ಪ, ವಿದ್ಯಾ ಮೂರ್ತಿ, ಆರಾಧ್ಯ ಸೇರಿದಂತೆ ಹಲವಾರು ಕಲಾವಿದರು ನಟಿಸಿದ್ದಾರೆ. ರಮೇಶ್ ಅರವಿಂದ್ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದು, ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ಶಿವಾಜಿ ಸುರತ್ಕಲ್’ ಸಿನಿಮಾ ಮಾಡೋದಕ್ಕೆ ನಾವು ಏನೇನು ಪರಿಶ್ರಮ ಹಾಕಿದ್ದೆವೋ, ಅದರ ದುಪ್ಪಟ್ಟು ಪರಿಶ್ರಮ “ಶಿವಾಜಿ ಸುರತ್ಕಲ್-2′ ಸಿನಿಮಾಕ್ಕೆ ಹಾಕಿದ್ದೇವೆ. ಕಲಾವಿದರು, ತಂತ್ರಜ್ಞರು, ಲೊಕೇಶನ್ಸ್, ಶೂಟಿಂಗ್ ಮಾಡಿರುವ ದಿನಗಳು, ಸಿನಿಮಾದ ಬಜೆಟ್.. ಹೀಗೆ ಪ್ರತಿಯೊಂದು ವಿಷಯದಲೂ ಶಿವಾಜಿ ಸುರತ್ಕಲ್’ ಸಿನಿಮಾಕ್ಕಿಂತ “ಶಿವಾಜಿ ಸುರತ್ಕಲ್-2′ ಸಿನಿಮಾ ದುಪ್ಪಟ್ಟು ಆಗಿದೆ. ಹಾಗಾಗಿ “ಶಿವಾಜಿ ಸುರತ್ಕಲ್’ ಸಿನಿಮಾದಲ್ಲಿ ಆಡಿಯನ್ಸ್‌ಗೆ ಸಿಕ್ಕ ಎಕ್ಸ್ ಪೀರಿಯನ್ಸ್‌ನ ಡಬಲ್ “ಶಿವಾಜಿ ಸುರತ್ಕಲ್-2′ ಸಿನಿಮಾದಲ್ಲಿ ಸಿಗಲಿದೆ
ಸಂಬಂಧಗಳ ಸಂಭ್ರಮಿಸುವ ವಿಷಯ: ಮೇಲ್ನೋಟಕ್ಕೆ “ಶಿವಾಜಿ ಸುರತ್ಕಲ್-2′ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾದಂತೆ ಕಂಡರೂ, ಥಿಯೇಟರ್ ಒಳಗೆ ಸಿನಿಮಾ ಆಡಿಯನ್ಸ್‌ಗೆ ಬೇರೆಯದ್ದೇ ಅನುಭವ ಕೊಡುತ್ತದೆ. ಇಲ್ಲಿ ಕೇವಲ ಸಸ್ಪೆನ್ಸ್-ಥ್ರಿಲ್ಲರ್ ಅಂಶಗಳಲ್ಲದೆ, ಆಡಿಯನ್ಸ್ ಗಮನವನ್ನು ಸೆಳೆಯುವ ಬೇರೆ ಬೇರೆ ಅಂಶಗಳಿವೆ. ಆಡಿಯನ್ಸ್‌ನ ಸಂಪೂರ್ಣವಾಗಿ ತನ್ನೊಳಗೆ ಎಳೆದುಕೊಳ್ಳುವಂತಹ ಅಪರೂಪದ ಕಥೆ ಈ ಸಿನಿಮಾದಲ್ಲಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಸಂಬಂಧಗಳನ್ನು ಸಂಭ್ರಮಿಸುವ ವಿಷಯಗಳಿವೆ. ಇದು ಎಲ್ಲ ವರ್ಗದ ಪ್ರೇಕ್ಷಕರಿಗೂ ಖಂಡಿತವಾಗಿಯೂ ಮನ ಮುಟ್ಟುತ್ತದೆ.
ಯೋಚಿಸಬೇಕಾದ ವಿಷಯ..: ಕೆಲವು ಸಿನಿಮಾಗಳು ಪ್ರೇಕ್ಷಕರನ್ನು ಹಾಗೇ ನೋಡಿಸಿಕೊಂಡು ಹೋಗುತ್ತವೆ. ಆದರೆ ಇನ್ನು ಕೆಲವು ಸಿನಿಮಾಗಳು ಪ್ರೇಕ್ಷಕರನ್ನು ತನ್ನ ಜೊತೆಗೇ ಕರೆದುಕೊಂಡು ಹೋಗುತ್ತವೆ. “ಶಿವಾಜಿ ಸುರತ್ಕಲ್-2′ ತನ್ನ ಕಥೆಯ ಜೊತೆಗೇ ಪ್ರೇಕ್ಷಕರನ್ನೂ ಕರೆದುಕೊಂಡು ಹೋಗುವಂಥ ಸಿನಿಮಾ. ಸಿನಿಮಾದಲ್ಲಿ ಬರುವ ಪ್ರತಿ ಸನ್ನಿವೇಶಗಳು, ಅದರಲ್ಲಿ ಬರುವ ಪಾತ್ರಗಳು, ಅದರ ಹಿನ್ನೆಲೆ ಎಲ್ಲವೂ ಕೂಡ ನೋಡುಗರನ್ನು ಯೋಚನೆಗೆ ಇಳಿಯುವಂತೆ ಮಾಡುತ್ತದೆ. ನೊಡುಗರನ್ನ ಸೀಟಿನ ತುದಿಯಲ್ಲಿ ಕೂರಿಸುತ್ತದೆ. ಅಂಥದ್ದೊಂದು ಬ್ರಿಲಿಯೆಂಟ್ ಸ್ಕ್ರಿಪ್ಟ್ ಸಿನಿಮಾದಲ್ಲಿದೆ.
ಗೆಲುವಿನ ಮುನ್ಸೂಚನೆ ಕಾಣುತ್ತಿದೆ…: “ಶಿವಾಜಿ ಸುರತ್ಕಲ್-2′ ತುಂಬ ಒಳ್ಳೆಯ ಸಿನಿಮಾ ಎಂಬ ವಿಶ್ವಾಸ ನನಗಿದೆ. ನಿರ್ದೇಶಕ ಆಕಾಶ್ ಶ್ರೀವತ್ಸ ಮತ್ತು ಚಿತ್ರತಂಡ ಹೊಸಥರದಲ್ಲಿ ಜನರಿಗೆ ಇಷ್ಟವಾಗುವಂಥ ವಿಷಯವನ್ನು ಸಿನಿಮಾದಲ್ಲಿ ಹೇಳಿದೆ. ಇದು ಮನಸ್ಸು, ಬುದ್ಧಿ ಮತ್ತು ಹೃದಯವನ್ನು ಮುಟ್ಟುವಂಥ ಸಿನಿಮಾ. ಈಗಾಗಲೇ “ಶಿವಾಜಿ ಸುರತ್ಕಲ್-2′ ಸಿನಿಮಾದ ಟೀಸರ್, ಟ್ರೇಲರ್ ಮತ್ತು ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲೂ ಬಿಗ್ ರೆಸ್ಪಾನ್ಸ್ ಸಿಗುತ್ತಿದೆ. “ಶಿವಾಜಿ’ ಮತ್ತೂಮ್ಮೆ ಗೆಲ್ಲಲಿದ್ದಾನೆ ಎಂಬ ಸೂಚನೆ ಕಾಣುತ್ತಿದೆ.
26 ವರ್ಷದ ಹಿಂದಿನ ನೆನಪು…: ಸುಮಾರು 26 ವರ್ಷಗಳ ಹಿಂದೆ (1996, ಏ. 11), ಏಪ್ರಿಲ್ ಎರಡನೇ ವಾರ ನಾನು ಅಭಿನಯಿಸಿದ್ದ “ಅಮೆರಿಕಾ ಅಮೆರಿಕಾ..’ ಸಿನಿಮಾ ಬಿಡುಗಡೆಯಾಗಿತ್ತು. ಬೇಸಿಗೆಯಲ್ಲಿ ತೆರೆಗೆ ಬಂದ ಈ ಸಿನಿಮಾ ದೊಡ್ಡ ಮಟ್ಟದ ಹಿಟ್ ಆಗಿ ದಾಖಲೆ ಬರೆದಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಮತ್ತೆ ಅಂಥದ್ದೇ ವಾತಾವರಣದಲ್ಲಿ (ಬೇಸಿಗೆಯಲ್ಲಿ) ಏಪ್ರಿಲ್ ಎರಡನೇ ವಾರ (ಏ. 14) “ಶಿವಾಜಿ ಸುರತ್ಕಲ್-2′ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಕೂಡಅದರಂತೆಯೇ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ನನಗಿದೆ.
ಜಿ.ಎಸ್.ಕಾರ್ತಿಕ ಸುಧನ್