Advertisement

ಅಕಾಲಿಕ ಮಳೆ ರಂಬುಟಾನ್‌ ಕೃಷಿಗೆ ಭಾರೀ ಹೊಡೆತ; ಮಾಗುವ ಮೊದಲೇ ಮಣ್ಣುಪಾಲು

01:53 AM May 29, 2022 | Team Udayavani |

ಕಡಬ: ಸಾಂಪ್ರದಾಯಿಕ ಕೃಷಿಯೊಂದಿಗೆ ಪರ್ಯಾಯ ವಾಣಿಜ್ಯ ಬೆಳೆಯಾಗಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ನೆಲೆ ಕಂಡಿರುವ ಮಲೇಶ್ಯಾ ಮೂಲದ ರಂಬುಟಾನ್‌ ಹಣ್ಣಿನ ಬೆಳೆಗಾರರು ಈ ಬಾರಿ ಬಂಪರ್‌ ಬೆಳೆಯ ನಿರೀಕ್ಷೆಯಲ್ಲಿದ್ದರು. ಆದರೆ ಅಕಾಲಿಕ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಕಾಯಿಗಳು ವ್ಯಾಪಕವಾಗಿ ಉದುರಲಾರಂಭಿಸಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

Advertisement

ಒಂದು ಅಂದಾಜಿನ ಪ್ರಕಾರ ದ.ಕ., ಉಡುಪಿ ಹಾಗೂ ಕೇರಳ ಗಡಿಭಾಗ ಸೇರಿದಂತೆ ಸುಮಾರು 200 ಹೆಕ್ಟೇರ್‌ ಪ್ರದೇಶದಲ್ಲಿ ವಿಸ್ತರಿಸಿಕೊಂಡಿರುವ ರಂಬುಟಾನ್‌ ತೋಟಗಳಲ್ಲಿ ಈ ಬಾರಿ 18ರಿಂದ 20 ಸಾವಿರ ಕ್ವಿಂಟಾಲ್‌ ಇಳುವರಿ ನಿರೀಕ್ಷಿಸಲಾಗಿತ್ತು. ಕೆ.ಜಿ.ಗೆ ಸರಾಸರಿ 225 ರೂ. ಧಾರಣೆ ನಿರೀಕ್ಷೆ ಮಾಡಲಾಗಿತ್ತು. ಜೂನ್‌ 10ರ ವೇಳೆಗೆ ಹಣ್ಣುಗಳು ಕಟಾವಿಗೆ ಸಿದ್ಧಗೊಳ್ಳಬೇಕಿತ್ತು. ಆದರೆ ಅಕಾಲಿಕ ಮಳೆಯಿಂದಾಗಿ ಬಹುತೇಕ ತೋಟಗಳಲ್ಲಿ ಶೇ. 60ರಷ್ಟು ಕಾಯಿಗಳು ಉದುರಿವೆ.

ರಂಬುಟಾನ್‌ ವಿಟಮಿನ್‌ ಸಿ, ಎ ಹಾಗೂ ಝಿಂಕ್‌ನಿಂದ ಸಮೃದ್ಧವಾಗಿರುವ ರುಚಿಕರ ಹಣ್ಣಾಗಿದ್ದು ಕೇರಳ ಹಾಗೂ ಚೆನ್ನೈಯಲ್ಲಿ ಹೆಚ್ಚಿನ ಬೇಡಿಕೆ ಹೊಂದಿದೆ. ವ್ಯಾಪಾರಿಗಳು ತೋಟಗಳಿಂದಲೇ ನೇರವಾಗಿ ಫಸಲನ್ನು ಖರೀದಿಸಿ ಕೊಂಡೊಯ್ಯುವ ವ್ಯವಸ್ಥೆ ಇದ್ದು, ಹಲವು ಮಂದಿ ಕೃಷಿಕರು ಈ ಬೆಳೆಯನ್ನು ದೊಡ್ಡಮಟ್ಟದಲ್ಲಿ ಕೈಗೊಂಡಿದ್ದಾರೆ.

4 ಎಕರೆ ತೋಟದಲ್ಲಿ ರಂಬುಟಾನ್‌ ಬೆಳೆದಿದ್ದು, 130 ಕ್ವಿಂಟಾಲ್‌ ಇಳುವರಿ ನಿರೀಕ್ಷಿಸಿದ್ದೆವು. ಕೆಲವು ದಿನಗಳ ಹಿಂದೆ ಕಾಣಿಸಿಕೊಂಡಿರುವ ಕಾಯಿಗಳು ಉದುರುವ ಸಮಸ್ಯೆಯಿಂದಾಗಿ ಈಗಾಗಲೇ 60ರಿಂದ 70 ಕ್ವಿಂಟಾಲ್‌ನಷ್ಟು ಫ‌ಸಲು ನಾಶವಾಗಿದೆ. 15 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಇನ್ನೂ ಕಾಯಿಗಳು ಉದುರುತ್ತಲೇ ಇದ್ದು, ಶೇ. 10ರಷ್ಟಾದರೂ ಫಸಲು ಕೈಸೇರುತ್ತದೋ ಇಲ್ಲವೋ ಎಂಬ ಚಿಂತೆ ಎದುರಾಗಿದೆ. ಸರಕಾರ ಬೆಳೆಗಾರರ ನೆರವಿಗೆ ಬರಬೇಕು.
– ಕೃಷ್ಣ ಶೆಟ್ಟಿ ಕಡಬ, ರಂಬುಟಾನ್‌ ಬೆಳೆಗಾರ

ಅಕಾಲಿಕ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ರಂಬುಟಾನ್‌ ಹಣ್ಣಾಗುವ ಮೊದಲೇ ಉದುರುತ್ತಿರುವುದು ಪ್ರಾಥಮಿಕ ಅವಲೋಕನದಿಂದ ತಿಳಿದುಬಂದಿದೆ. ಈಗಾಗಲೇ ನಾವು ಬೆಳ್ತಂಗಡಿ ಪರಿಸರದ ಕೆಲವು ತೋಟಗಳಿಗೆ ತಜ್ಞರ ಜತೆಗೆ ಭೇಟಿ ನೀಡಿದ್ದು, ಉದುರಿದ ಕಾಯಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಿದ್ದೇವೆ. ಪ್ರಯೋಗಾಲಯದ ವರದಿಯ ಬಳಿಕವಷ್ಟೇ ನಿಖರ ಮಾಹಿತಿ ಲಭಿಸಬಹುದು.
– ಹೊನ್ನಪ್ಪ ನಾಯ್ಕ
ಜಿಲ್ಲಾ ಉಪ ನಿರ್ದೇಶಕರು,
ತೋಟಗಾರಿಕೆ ಇಲಾಖೆ, ದ.ಕ.

Advertisement

– ಕರಾವಳಿಯ 200 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ
– 18ರಿಂದ 20 ಸಾವಿರ ಕ್ವಿಂಟಾಲ್‌ ಇಳುವರಿ ನಿರೀಕ್ಷೆ
– ಕೆ.ಜಿ.ಗೆ 225 ರೂ. ಧಾರಣೆ
– ಜೂನ್‌ 10ರ ವೇಳೆಗೆ ಕಟಾವು
– ಆದರೀಗ ಶೇ. 60ರಷ್ಟು ಕಾಯಿಗಳೇ ಮಣ್ಣುಪಾಲು

– ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next