ಬೆಂಗಳೂರು: ಬೆಂಗಳೂರು ಸಹಿತ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ರಾಮಭಕ್ತರು ಮೈಸೂರು ಬ್ಯಾಂಕ್ ವೃತ್ತ, ಜೆ.ಸಿ.ನಗರ, ದೊಡ್ಡಗಣಪತಿ ದೇವಸ್ಥಾನ, ಶಿರಸಿ ವೃತ್ತ ಹಾಗೂ ವಿಶ್ವೇಶ್ವರಪುರದಿಂದ ಬೃಹತ್ ಶೋಭಾಯಾತ್ರೆ ಮೂಲಕ ನ್ಯಾಷನಲ್ ಹೈಸ್ಕೂಲ್ ಮೈದಾನ ತಲುಪಿದರು.
ವಿಶೇಷವಾಗಿ ಶ್ರೀರಾಮ, ಲಕ್ಷ್ಮಣ, ಹನುಮಂತ, ಸೀತೆಯ ವೇಷಧಾರಿಗಳು, ಕೇಸರಿ ಬಾವುಟ, ಹಿಂದೂ ಧರ್ಮ, ಸಂಸ್ಕೃತಿ, ಪರಂಪರೆ ಬಿಂಬಿಸುವ ಫಲಕಗಳು ಮೆರವಣಿಗೆ ಕಳೆ ಕಟ್ಟಿದ್ದವು. ಜತೆಗೆ ಕೆಲವರು ರಾಮನ ಸ್ತ್ರೋತ್ರ ಪಠಿಸುತ್ತಾ, ಭಕ್ತಿಗೀತೆ ಹಾಡುತ್ತಾ ಸಾಗಿದರೆ ಇನ್ನು ಕೆಲವರು ನೃತ್ಯ ಮಾಡಿಕೊಂಡು ಸಾಗಿದರು.
17 ಅಡಿ ಎತ್ತರದ ರಾಮನ ಮೂರ್ತಿಯೊಂದಿಗೆ ಜೆ.ಸಿ.ನಗರ ಕಡೆಯಿಂದ ಹೊರಟ ಮೆರವಣಿಗೆಯು ಮೇಖೀ ವೃತ್ತ, ಗುಟ್ಟಹಳ್ಳಿ, ಬಸವೇಶ್ವರ ವೃತ್ತ, ಹಡ್ಸನ್ ವೃತ್ತ, ಲಾಲ್‌ಬಾಗ್ ಸಮೀಪದ ವೃತ್ತಗಳಲ್ಲಿ ಹಾದು ಹೋಯಿತು. ಇವರಿಗೆ ಕೇಸರಿ ಬಾವುಟ ಹಿಡಿದ ನೂರಾರು ಬೈಕ್ ಸವಾರರು ಸಾಥ್ ನೀಡಿದರು. ಮೈಸೂರು ಬ್ಯಾಂಕ್ ವೃತ್ತದಿಂದ ಬಂದ ಮೆರವಣಿಗೆಯಲ್ಲಿ 12 ಅಡಿ ಎತ್ತರದ ಆಂಜನೇಯ ಮೂರ್ತಿಯನ್ನು ಹೊತ್ತು ತರಲಾಯಿತು.
ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಕೇಸರಿ ಧ್ವಜಗಳು ರಾರಾಜಿಸಿದವು. ಮೆರವಣಿಗೆಯಲ್ಲಿ ಭಾಗವಹಿಸಿದವರು “ಅಯೋಧ್ಯೆಯಲ್ಲಿ ಮಂದಿರ ನಿರ್ಮಿಸುವುದು ಹಿಂದುಗಳ ಹಕ್ಕು’ ಇದಕ್ಕೆ ಸರ್ಕಾರ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಐದೂ ಕಡೆಗಳಿಂದ ಬಂದ ಮೆರವಣಿಗೆ ಮೈದಾನವನ್ನು ಸಂಜೆ ವೇಳೆಗೆ ತಲುಪಿತು.
ಇನ್ನು ಮೆರವಣಿಗೆಯಿಂದಾಗಿ ನಗರದ ಹಲವೆಡೆ ಸಂಚಾರ ದಟ್ಟಣೆ ಉಂಟಾಯಿತು. ಪ್ರಮುಖವಾಗಿ ಮೆರವಣಿಗೆ ಸಾಗಿ ಬಂದ ಮೇಖೀÅ ವೃತ್ತ, ಮೈಸೂರು ಬ್ಯಾಂಕ್, ಹಡ್ಸನ್ ವೃತ್ತ, ಲಾಲ್‌ಬಾಗ್ ಸುತ್ತಮುತ್ತ ಹಾಗೂ ನ್ಯಾಷನಲ್ ಹೈಸ್ಕೂಲ್ ಮೈದಾನದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಂಡುಬಂತು.