ಮುಂಬೈ: ಕಳೆದ 33 ವರ್ಷಗಳ ಹಿಂದೆ ಕಿರುತೆರೆಯಲ್ಲಿ ಪ್ರಸಾರಗೊಂಡಿದ್ದ ‘ರಾಮಾಯಣ’ ಧಾರಾವಾಹಿ ಇದೀಗ ಪುನಃ ಪ್ರಸಾರವಾಗುತ್ತಿದೆ.
ಕೋವಿಡ್ ಹಿನ್ನೆಲೆ ಕಳೆದ ವರ್ಷ ದೇಶಾದ್ಯಂತ ಹೇರಲಾಗಿದ್ದ ಲಾಕ್ ಡೌನ್ ವೇಳೆ (ಮಾರ್ಚ್,2020) ದೂರದರ್ಶನದಲ್ಲಿ ರಾಮಾಯಣ ಮರುಪ್ರಸಾರ ಮಾಡಲಾಗಿತ್ತು. ಇದೀಗ ಮತ್ತೊಂದು ಬಾರಿ ಖಾಸಗಿ ವಾಹಿನಿಯಲ್ಲಿ ಇಂದಿನಿಂದ( ಏಪ್ರಿಲ್ 15) ರಾಮಾಯಣ ಪ್ರಸಾರವಾಗುತ್ತಿದೆ.
ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ನಾಗಾಲೋಟದಲ್ಲಿ ಹಬ್ಬುತ್ತಿದೆ. ದಿನದಿಂದ ದಿನಕ್ಕೆ ಉಲ್ಭಣಗೊಳ್ಳುತ್ತಿರುವ ಕೋವಿಡ್ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಸೆಕ್ಷನ್ 144 , ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯದ ಲಾಕ್ ಡೌನ್ ಘೋಷಣೆ ಮಾಡಿದೆ. ಮಹಾಮಾರಿಯಿಂದಾಗಿ ಮನೆಯಲ್ಲಿರುವವರಿಗಾಗಿ ಇದೀಗ ಮತ್ತೊಂದು ಸಾರಿ ರಾಮಾಯಣ ಧಾರಾವಾಹಿ ಪ್ರಸಾರವಾಗುತ್ತಿದೆ.
ರಾಮಾಯಣ ಧಾರಾವಾಹಿ ಯಲ್ಲಿ ಸೀತಾ ಪಾತ್ರದಲ್ಲಿ ನಟಿಸಿದ್ದ ನಟಿ ದೀಪಿಕಾ ಚಿಕ್ಲಿಯಾ ಟೋಪಿವಾಲಾ ಈ ಬಗ್ಗೆ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಕಿರುತೆರೆಯಲ್ಲಿ ಪ್ರಸಾರಗೊಂಡಿದ್ದ ರಾಮಾಯಣ ಧಾರವಾಹಿ ಈ ವರ್ಷವೂ ಪ್ರಸಾರಗೊಳ್ಳುತ್ತಿರುವುದಕ್ಕೆ ಉತ್ಸುಕಳಾಗಿದ್ದೇನೆ. ಇದನ್ನೆಲ್ಲ ನೋಡಿದ್ರೆ ಇತಿಹಾಸ ಮತ್ತೆ ಮರುಳುತ್ತಿದೆ ಎನಿಸುತ್ತಿದೆ. ಪ್ರತಿದಿನ ಸಂಜೆ 7 ಗಂಟೆಗೆ ಸ್ಟಾರ್ ಭಾರತ ಟಿವಿಯಲ್ಲಿ ತಪ್ಪದೆ ಈ ಧಾರಾವಾಹಿ ನೋಡಿ ಎಂದು ದೀಪಿಕಾ ಬರೆದುಕೊಂಡಿದ್ದಾರೆ.
ಇನ್ನು ರಾಮಾಯಣ ಧಾರಾವಾಹಿ ಯನ್ನು ರಮಾನಂದ್ ಸಾಗರ್ ಅವರು ಬರೆದು, ನಿರ್ದೇಶಿಸಿ, ನಿರ್ಮಾಣ ಕೂಡ ಮಾಡಿದ್ದರು. 1987 ರಲ್ಲಿ ದೂರದರ್ಶನದಲ್ಲಿ ಈ ಧಾರವಾಹಿ ಪ್ರಸಾರವಾಗುತ್ತಿತ್ತು. ರಾಮನ ಪಾತ್ರದಲ್ಲಿ ಅರುಣ್ ಗೊವಿಲ್, ಲಕ್ಷಣ ಪಾತ್ರದಲ್ಲಿ ಸುನಿಲ್ ಲಹರಿ, ರಾವಣನ ಪಾತ್ರದಲ್ಲಿ ಅರವಿಂದ್ ತ್ರಿವೇದಿ ಹಾಗೂ ಹನುಮಾನ್ ಪಾತ್ರಕ್ಕೆ ದಾರಾ ಸಿಂಗ್ ಜೀವ ತುಂಬಿದ್ದರು.