ಕಳೆದ ವರ್ಷ “ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದಲ್ಲಿ ನಟನೆ
ಜೊತೆಗೆ ನಿರ್ಮಾಪಕರಾಗಿ ಗುರುತಿಸಿಕೊಂಡ ಅನೀಶ್, ಈಗ “ರಾಮಾರ್ಜುನ’ ಸಿನಿಮಾ ನಿರ್ದೇಶಿಸುವಲ್ಲಿಗೆ ಬಂದಿದ್ದಾರೆ. ಈ ಚಿತ್ರಕ್ಕೆ ಅವರೇ ಹೀರೋ, ನಿರ್ಮಾಣವೂ ಅವರದೇ ಅನ್ನೋದು ವಿಶೇಷ….
ಸಿನಿಮಾ ಸೆಳೆತವೇ ಹಾಗೆ. ಈ ಕಲರ್‌ಫುಲ್ ಲೋಕದಲ್ಲಿ ಕಾಲಿಟ್ಟ ಒಂದಷ್ಟು ಮಂದಿಗಂತೂ ಒಂದೊಮ್ಮೆ ನಾನೂ ನಿರ್ದೇಶಕ ಎನಿಸಿಕೊಳ್ಳಬೇಕು ಅನ್ನುವ ಯೋಚನೆ ಸಹಜವಾಗಿ ಬಂದೇ ಬರುತ್ತೆ. ಆ ಯೋಚನೆ ಹಿಂದೆ ಹೊರಟ ಬೆರಳೆಣಿಕೆ ಹೀರೋಗಳು ಈಗಾಗಲೇ ನಿರ್ದೇಶಕರಾಗಿದ್ದಾರೆ ಕೂಡ. ಅದರಲ್ಲಿ ಸಕ್ಸಸ್ ಪಡೆದಿದ್ದೂ ಇದೆ. ಫೇಲ್ಯೂರ್ ಆಗಿದ್ದೂ ಇದೆ. ಈಗ ಅಂತಹ ನಿರ್ದೇಶಕರ ಸಾಲಿಗೆ ನಟ ಅನೀಶ್ ತೇಜೇಶ್ವರ್ ಕೂಡ ಸೇರಿದ್ದಾರೆ.
ಹೌದು, ಕಳೆದ ವರ್ಷ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದಲ್ಲಿ ನಟನೆ ಜೊತೆಗೆ ನಿರ್ಮಾಪಕರಾಗಿ ಗುರುತಿಸಿಕೊಂಡ ಅನೀಶ್, ಈಗ ‘ರಾಮಾರ್ಜುನ’ ಸಿನಿಮಾ ನಿರ್ದೇಶಿಸುವಲ್ಲಿಗೆ ಬಂದಿದ್ದಾರೆ. ಈ ಚಿತ್ರಕ್ಕೆ ಅವರೇ ಹೀರೋ, ನಿರ್ಮಾಣವೂ ಅವರದೇ ಅನ್ನೋದು ವಿಶೇಷ. ಈ ಮೂರು ವಿಭಾಗವನ್ನೂ ಅಷ್ಟೇ ಜಾಣತನದಿಂದ, ಎಚ್ಚರಿಕೆಯಿಂದ ನಿರ್ವಹಿಸುವ ಮೂಲಕ ಶೇ.80 ರಷ್ಟು ಚಿತ್ರೀಕರಣವನ್ನೂ ಮುಗಿಸಿದ್ದಾರೆ ಅನ್ನೋದೇ ಈ ಹೊತ್ತಿನ ಸುದ್ದಿ. ಅಂದಹಾಗೆ, ತಮ್ಮ ಮೊದಲ ಚಿತ್ರ ನಿರ್ದೇಶನದ ಅನುಭವ ಹಂಚಿಕೊಳ್ಳಲೆಂದೇ ಇತ್ತೀಚೆಗೆ ತಂಡದೊಂದಿಗೆ ಪತ್ರಕರ್ತರ ಮುಂದೆ ಆಗಮಿಸಿದ್ದರು ಅನೀಶ್. ಅಂದು ಅವರು ಹೇಳಿದ್ದಿಷ್ಟು. ‘ನಾನು ನಿರ್ದೇಶಕ ಆಗ್ತೀನಿ ಅಂದುಕೊಂಡಿರಲಿಲ್ಲ. ಯಾವುದೇ ನಿರ್ದೇಶನದ ಕೋರ್ಸ್ ಕೂಡ ಮಾಡಿಲ್ಲ. ಯಾವ ನಿರ್ದೇಶಕರ ಬಳಿ ಸಹಾಯಕನಾಗಿ ಕೆಲಸವನ್ನೂ ಮಾಡಿಲ್ಲ. ಆದರೆ, ನನ್ನ ನಟನೆಯ ಪ್ರತಿ ಸಿನಿಮಾದಲ್ಲೂ ನಾನು ಎಲ್ಲವನ್ನೂ ಗಮನಿಸುತ್ತಿದ್ದೆ. ಅದರಲ್ಲೂ ತಾಂತ್ರಿಕವಾಗಿ ತಿಳಿದುಕೊಳ್ಳುತ್ತಿದ್ದೆ. ನಟಿಸುವಾಗಲೇ, ನಿರ್ದೇಶಕರು ಹೇಗೆಲ್ಲಾ ಕೆಲಸ ಮಾಡುತ್ತಾರೆ ಅನ್ನುವುದನ್ನು ಗಮನಿಸುತ್ತಿದ್ದೆ. ಕೆಲವು ಅನುಮಾನಗಳನ್ನು ಕೇಳಿ ಬಗೆಹರಿಸಿಕೊಳ್ಳುತ್ತಿದ್ದೆ.
ಬಹುಶಃ ಆ ಅಂಶಗಳೇ ಇಂದು ನಾನು ನಿರ್ದೇಶಕನಾಗಲು ಕಾರಣ’ ಎಂಬುದು ಅನೀಶ್ ಮಾತು. ತಮ್ಮ ನಿರ್ಮಾಣ ಸಂಸ್ಥೆಯ ಬಗ್ಗೆ ಮಾತನಾಡುವ ಅನೀಶ್, ‘ನಾನು ನಿರ್ಮಾಪಕನಾದೆ. ಅದು ಅಲ್ಲಿಗೆ ನಿಲ್ಲೋದಿಲ್ಲ. ನನ್ನ ನಿರ್ಮಾಣ ಸಂಸ್ಥೆಯಲ್ಲಿ ಒಳ್ಳೆಯ ಸಿನಿಮಾಗಳ ನಿರ್ಮಾಣ ಆಗುತ್ತೆ. ನಾನೊಬ್ಬನೇ ನಟಿಸೋದಿಲ್ಲ. ಬೇರೆಯವರ ಕಥೆ ಚೆನ್ನಾಗಿದ್ದರೆ, ಹೊಸಬರಿಗೂ ಅವಕಾಶ ಕೊಡ್ತೀನಿ. ಆ ಮೂಲಕ ನನ್ನ ಬ್ಯಾನರ್‌ಗೊಂದು ಗಟ್ಟಿನೆಲೆ ಕಟ್ಟುವ ಹಠವಿದೆ. ನಿರ್ದೇಶನ ಕೂಡ ನನ್ನ ಆಸೆಯಾಗಿತ್ತು. ಅದು ಇಷ್ಟು ಬೇಗ ಆಗುತ್ತೆ ಅಂದುಕೊಂಡಿರಲಿಲ್ಲ. ಈಗ ‘ರಾಮಾರ್ಜುನ’ ಒಂದೊಳ್ಳೆಯ ಕಮರ್ಷಿಯಲ್ ಚಿತ್ರ ಆಗಲಿದೆ. ಚಿತ್ರದ ಬಗ್ಗೆ ಹೇಳುವುದಾದರೆ, ‘ಒಂದು ಏರಿಯಾದಲ್ಲಿ ನಡೆಯುವ ಕಥೆ ಇದು. ನಾನೊಬ್ಬ ಮಿಡ್ಲ್ಕ್ಲಾಸ್ ಕುಟುಂಬದ ಹುಡುಗ. ಒಂದು ಇನ್ಸೂರೆನ್ಸ್ ಕಂಪೆನಿಯ ಏಜೆಂಟ್ ಕಾಣಿಸಿಕೊಂಡಿದ್ದೇನೆ. ಎಲ್ಲಿ ಸಾವು ಆಗುತ್ತೋ, ಅಲ್ಲಿಗೆ ಹೋಗಿ ಅವರ ಪರ ನಿಂತು ಕೆಲ ಸಮಸ್ಯೆ ಬಗೆಹರಿಸುವ ಪಾತ್ರ ಮಾಡಿದ್ದೇನೆ. ಒಂದು ಘಟನೆಯಲ್ಲಿ ಮರ್ಡರ್ ಆಗುತ್ತೆ. ಅದು ಯಾಕಾಯ್ತು, ಅದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ, ದುಷ್ಟರನ್ನು ಸದೆಬಡಿಯೋ ಕೆಲಸಕ್ಕಿಳಿಯುತ್ತಾನೆ’ ಇದರ ನಡುವೆ ಲವ್ವು, ಆ್ಯಕ್ಷನ್, ಸೆಂಟಿಮೆಂಟ್, ಗೆಳೆತನ ಇತ್ಯಾದಿ ಅಂಶಗಳು ಸೇರಿಕೊಂಡು ಹೊಸತನದ ಚಿತ್ರ ಆಗಿದೆ ಎಂಬ ನಂಬಿಕೆ ನನ್ನದು. ‘ರಾಮಾರ್ಜುನ’ ಕಥೆಯಲ್ಲಿ ಎರಡು ಶೇಡ್ ಇದೆ. ಮೊದಲರ್ಧದ ಕಥೆ ಬೇರೆ, ದ್ವಿತಿಯಾರ್ಧದ ಕಥೆ ಬೇರೆ’ ಎಂದು ಹೇಳುತ್ತಾರೆ ಅನೀಶ್.
ನಾನೊಬ್ಬ ನಿರ್ದೇಶಕನಾಗಿ ನನ್ನ ಕಲ್ಪನೆಗೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಇಲ್ಲಿ ಅಳವಡಿಸಿದ್ದೇನೆ ಎಂದು ಸಿನಿಮಾ ಬಗ್ಗೆ ಹೇಳುವ ಅನೀಶ್, ‘ನಿರ್ಮಾಪಕನಾಗಿ ನನಗೆ ಬೇಕಿದ್ದೆಲ್ಲವನ್ನೂ ಪಡೆದು ಚಿತ್ರ ಮಾಡಿದ್ದೇನೆ. ಒಬ್ಬ ನಟನಾಗಿ, ಆ ಪಾತ್ರಕ್ಕೆ ಎಷ್ಟು ಜೀವ ತುಂಬಬೇಕೋ, ಎಷ್ಟು ರಿಸ್ಕ್ ತಗೋಬೇಕೋ ಎಲ್ಲವನ್ನೂ ಮಾಡಿದ್ದೇನೆ. ಈ ರೀತಿಯ ಪ್ರಯತ್ನ ನನ್ನೊಬ್ಬನಿಂದ ಸಾಧ್ಯವಿಲ್ಲ. ಎಲ್ಲರ ಸಹಕಾರ, ಪ್ರೋತ್ಸಾಹದಿಂದ ಮಾತ್ರ ಸಾಧ್ಯವಾಗಿದೆ. ಇನ್ನು, ಸಾಂಗ್ಸ್ , ಫೈಟ್ ಬಾಕಿ ಇದೆ. ಅದು ಮುಗಿದರೆ ಚಿತ್ರ ಪೂರ್ಣಗೊಳ್ಳುತ್ತೆ. ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ’ ಎಂಬ ವಿವರ ಕೊಡುತ್ತಾರೆ ಅನೀಶ್.
ಚಿತ್ರಕ್ಕೆ ನಿಶ್ವಿಕಾ ನಾಯ್ಡು ನಾಯಕಿ. ಅನೀಶ್ ಜೊತೆ ಅವರಿಗೆ ಇದು ಎರಡನೇ ಸಿನಿಮಾ. ಈ ಹಿಂದೆ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರಕ್ಕೂ ನಾಯಕಿಯಾಗಿದ್ದರು. . ಹರೀಶ್‌ರಾಜು ಅವರಿಲ್ಲಿ ಡಾಕ್ಟರ್ ಪಾತ್ರ ಮಾಡಿದ್ದಾರೆ. ಇನ್ನು, ಶರತ್ ಲೋಹಿತಾಶ್ವ ಅವರಿಗೆ ಇಲ್ಲಿ ವಿಭಿನ್ನ ಗೆಟಪ್ ಇದೆಯಂತೆ. ಅನೀಶ್ ಜೊತೆ ಅವರಿಗೂ ಇದು ಎರಡನೇ ಸಿನಿಮಾ. ‘ನಾನಿಲ್ಲಿ ಹೀರೋಗೆ ಒಂದು ರೀತಿ ಗಾಡ್‌ಫಾದರ್ ಇರುವಂತಹ ಪಾತ್ರ. ಒಳ್ಳೆಯ ಗಾಡ್‌ಫಾದರ್ ಆಗಿರುತ್ತಾನೋ, ಇಲ್ಲವೋ ಅನ್ನೋದು ಸಸ್ಪೆನ್ಸ್’ ಎಂದರು ಶರತ್.
ಚಿತ್ರಕ್ಕೆ ವಿಕ್ರಮ್ ಮೋರ್ ಸಾಹಸ ಮಾಡಿದ್ದಾರೆ. ಅನೀಶ್ ಅಭಿನಯದ ‘ಅಕಿರ’ ಚಿತ್ರದ ಮೂಲಕ ವಿಕ್ರಮ್ ಮೋರ್ ಸ್ಟಂಟ್ ಮಾಸ್ಟರ್ ಆದವರು. ಇಲ್ಲಿಯವರೆಗೆ 90 ಚಿತ್ರಗಳಿಗೆ ಸಾಹಸ ಮಾಡಿದ್ದಾರೆ. ಈವರೆಗೆ ಅನೀಶ್ ಅವರ ನಾಲ್ಕು ಚಿತ್ರಗಳಿಗೆ ಸ್ಟಂಟ್ಸ್ ಮಾಡಿದ ಕುರಿತು ಹೇಳಿಕೊಂಡರು. ಸಂಭಾಷಣೆ ಬರೆದ ಕಿರಣ್, ಹಾಸ್ಯ ನಟ ಶಿವಾನಂದ ಸಿಂದಗಿ, ಸಂಗೀತ ನಿರ್ದೇಶಕ ಆನಂದ ರಾಜು ವಿಕ್ರಮ್ ಮಾತನಾಡುವ ಹೊತ್ತಿಗೆ ‘ರಾಮಾರ್ಜುನ’ ಮಾತುಕತೆಗೂ ಬ್ರೇಕ್ ಬಿತ್ತು.
ವಿಜಯ್ ಭರಮಸಾಗರ