ಮಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಘೋಷಣೆ ಮಾಡಲಾಗಿರುವ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಿದೆ. ಇವು ಗ್ಯಾರಂಟಿ ಕಾರ್ಯಕ್ರಮಗಳು. ವರ್ತಮಾನದ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳ ಅಗತ್ಯವಿದೆ. ಹಾಗಾಗಿ ಇದನ್ನು ಈಡೇರಿಸಲಿದೆ. ಬಿಜೆಪಿಯ ಭರವಸೆಗಳಂತೆ ಇದು ಚುನಾವಣಾ ಜುಮ್ಲಾ ಅಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಚುನಾವಣಾ ಭರವಸೆಗಳನ್ನು ಸುಳ್ಳಿನ ಭರವಸೆ ಎಂದು ಬಿಜೆಪಿ ಆರೋಪಿಸಿದೆ. ಆದರೆ ಬಿಜೆಪಿಗೆ ಕಾಂಗ್ರೆಸ್ ಆ ಭರವಸೆಗಳನ್ನು ಈಡೇರಿಸುವ ಭಯ ಇದೆ. ಇದಕ್ಕೆ ಬಜೆಟ್ ಎಷ್ಟು ಬೇಕು ಎಂದು ಆಕ್ಷೇಪಿಸಲಾಗುತ್ತಿದೆ. ಇದು ಬಜೆಟ್ ವಿಚಾರ ಅಲ್ಲ. ಬಡವರಿಗೆ ಸಹಾಯ ಆಗುವ ಕಾರ್ಯವನ್ನು ಕಾಂಗ್ರೆಸ್ ಎಷ್ಟೇ ಕಷ್ಟ ಆದರೂ ಈಡೇರಿಸಲಿದೆ ಎಂದು ಅವರು ಹೇಳಿದರು.