Advertisement

ಜಿಲ್ಲೆಗೆ ಬಿಜೆಪಿ ಕೊಡುಗೆ ಏನು

05:17 PM Dec 19, 2019 | Naveen |

ರಾಮನಗರ: ಜಿಲ್ಲೆಗೆ ಮಂಜೂರಾಗಿರುವ ಅಭಿವೃದ್ಧಿ ಯೋಜನೆಗಳು ರದ್ದಾಗಿವೆ. ಅಥವಾ ಹಿಂಪಡೆಯಲಾಗಿದೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿಲ್ಲ. ಆದರೂ. ಸ್ಥಳೀಯ ಬಿಜೆಪಿ ಮುಖಂಡರು ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ವಸ್ತು ಸ್ಥಿತಿ ಅರಿತು ಮಾತನಾಡುವುದನ್ನು ಕಲಿಯಬೇಕು ಎಂದು ಮಾಗಡಿ ಕ್ಷೇತ್ರದ ಶಾಸಕ ಎ.ಮಂಜು ತಿರುಗೇಟು ನೀಡಿದರು.

Advertisement

ತಾಲೂಕಿನ ಬಿಡಿದಯ ಪುರಸಭಾ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ ನೆರೆವೇರಿಸಿ ಮಾತನಾಡಿದ ಅವರು, ಇತ್ತೀಚೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್‌ ಪತ್ರಿಕಾಗೋಷ್ಠಿ ನಡೆಸಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡಿದ್ದನ್ನು ಪ್ರಸ್ತಾಪಿಸಿ ಅವರು ಪ್ರತಿಕ್ರಿಯಿಸಿದರು.

ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ಎಚ್‌ .ಡಿ.ಕುಮಾರಸ್ವಾಮಿ ಅವರ ಪಾತ್ರ, ಶ್ರಮ ಇರುವ ಬಗ್ಗೆ ಇಡೀ ಜಿಲ್ಲೆಯ ಜನಕ್ಕೆ ಗೊತ್ತಿದೆ. ಬಿಜೆಪಿ ಮುಖಂಡರ ಪ್ರಯತ್ನ, ಶ್ರಮ, ಕೊಡುಗೆ ಏನಿದೆ ಎಂದು ಜನಕ್ಕೆ ಗೊತ್ತಾಗಬೇಕಾಗಿದೆ ಎಂದು ಕುಟುಕಿದರು. ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದು ಕೆಲವು ತಿಂಗಳುಗಳಲ್ಲಿ ಗೊತ್ತಾಗಲಿದೆ. ಅಲ್ಲಿಯವರೆಗೂ ಬಿಜೆಪಿ ನಾಯಕರು ತಾಳ್ಮ
ಇಟ್ಟುಕೊಳ್ಳಬೇಕು ಎಂದು ವಾಗ್ಧಾಳಿ ನಡೆಸಿದರು.

ವ್ಯವಧಾನ ಬೆಳೆಸಿಕೊಳ್ಳದ ಕೆಲವು ಬಿಜೆಪಿ ಮುಖಂಡರು ಕುಮಾರಸ್ವಾಮಿ ಅವರನ್ನು ಗುರಿ ಮಾಡಿಕೊಂಡು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು. ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಸರ್ಕಾರದ ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾಗಡಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದ ಅನುದಾನದಡಿಯಲ್ಲಿ ಬಿಡದಿ ಪುರಸಭೆ ವ್ಯಾಪ್ತಿಯ ವಿವಿಧೆಡೆ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ ಅಧಿಕಾರ ಬಿಜೆಪಿ ಪಾಲಿಗಿದೆ.

ಕುಮಾರಸ್ವಾಮಿ ಅವರನ್ನು ಟೀಕಿಸುವ ಬದಲಿಗೆ ಜಿಲ್ಲೆಯ ಅಭಿವೃದ್ಧಿ ಮಾಡಿ ತೋರಿಸಲಿ ಎಂದು ಅವರು ಸವಾಲು ಎಸೆದರು.
ಅಭಿವೃದ್ಧಿಗೆ ಚಾಲನೆ: ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಎಚ್‌.ಡಿ.ಕುಮಾರಸ್ವಾಮಿ ಮಾಗಡಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದ ಅನುದಾನದಡಿಯಲ್ಲಿ ಬಿಡದಿ ಪುರಸಭೆ ವ್ಯಾಪ್ತಿಯ ವಿವಿಧೆಡೆ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಬಿಡದಿ ಪುರಸಭೆ ವ್ಯಾಪ್ತಿಯ ವಾರ್ಡ್‌ ನಂಬರ್‌-13 ಇಂದಿರಾನಗರದಲ್ಲಿ 9.17ಲಕ್ಷ ರೂ. ವೆಚ್ಚದ ನೂತನ ಅಂಗನವಾಡಿ ಕೇಂದ್ರದ ಕಟ್ಟಡ ಲೋಕಾರ್ಪಣೆ, ನಗರೋತ್ಥಾನ ಯೋಜನೆಯಡಿ ವಾರ್ಡ್‌ ನಂಬರ್‌-7 ಕೇತಗಾನಹಳ್ಳಿ ಹಾಗೂ ವಾರ್ಡ್‌ ನಂಬರ್‌-20ರ ವೃಷಭಾವತಿಪುರದಲ್ಲಿ 3.2 ಕೋಟಿ ರೂ.ಪಾಯಿ ವೆಚ್ಚದಲ್ಲಿ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣಕ್ಕೆ ಗುದ್ದಲಿಪೂಜೆ, 32ಲಕ್ಷ ರೂ. ವೆಚ್ಚದಲ್ಲಿ ಪುರಸಭೆಗೆ ಖರೀದಿಸಿರುವ ಸಕ್ಕಿಂಗ್‌ ಅಂಡ್‌ ಜಟ್ಟಿಂಗ್‌ ನೂತನ ಯಂತ್ರಕ್ಕೆ ಚಾಲನೆ ನೀಡಲಾಗಿದೆ.

Advertisement

ಲೋಕೋಪಯೋಗಿ ಇಲಾಖೆ ವತಿಯಿಂದ ವಾರ್ಡ್‌ ನಂಬರ್‌-6ರ ಅವರಗೆರೆ ಕಾಲೋನಿಯಲ್ಲಿ 10.30 ಲಕ್ಷ ರು. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ಸಿಎಂಜಿಆರ್‌ವೈ ಯೋಜನೆಯಡಿ ಬಿಡದಿ ಮುದುವಾಡಿ ರಸ್ತೆಯಿಂದ ಕರಿಯಪ್ಪನದೊಡ್ಡಿ ಮಾರ್ಗವಾಗಿ ಬಾನಂದೂರು ರಸ್ತೆ ಸೇರುವ ರಸ್ತೆ ಅಭಿವೃದ್ಧಿಗೆ 63.69ಲಕ್ಷ ರುಪಾಯಿ ವೆಚ್ಚದ
ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು.

ಎ.ಮಂಜುನಾಥ್‌ ಮಾಹಿತಿ ನೀಡಿದರು. ತಾಲೂಕು ಪಂಚಾಯ್ತಿ ಅಧ್ಯಕ್ಷ ಗಾಣಕಲ್‌ ನಟರಾಜು, ಬಿಡದಿ ಪುರಸಭೆ ಉಪಾಧ್ಯಕ್ಷೆ ಲಕ್ಷ್ಮೀದೇವಿ ರವಿಕುಮಾರ್‌, ಸದಸ್ಯರಾದ ದೇವರಾಜು, ರಾಕೇಶ್‌, ಶಿವಕುಮಾರ್‌, ಚಂದ್ರಕಲಾ ನಾಗೇಶ್‌, ಕುಮಾರ್‌, ಮಹೀಪತಿ, ಲೋಕೇಶ್‌, ಪುರಸಭೆ ಮುಖ್ಯಾಧಿಕಾರಿ ಚೇತನ್‌ ಎಸ್‌. ಕೊಳವಿ, ಕಂದಾಯ ಅಧಿಕಾರಿ ಬಿ.ವಿ.ನಾಗರಾಜ್‌, ಮುಖಂಡರಾದ ರಾಮಕೃಷ್ಣಯ್ಯ, ಶೇಷಪ್ಪ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next