Advertisement
ರಾಮಕುಂಜ ಪರಿಸರದಲ್ಲಿ ಸಮರ್ಪಕ ವ್ಯವಸ್ಥೆಯ ಸಾರ್ವಜನಿಕ ಶ್ಮಶಾನ ಇಲ್ಲದೇ ಇರುವುದು ದೊಡ್ಡ ಸಮಸ್ಯೆಯಾಗಿತ್ತು. ಸಾಕಷ್ಟು ಜಮೀನು ಇದ್ದವರು ತಮ್ಮ ಜಮೀನಿನಲ್ಲಿಯೇ ಶವ ಸಂಸ್ಕಾರ ನಡೆಸಿದರೆ ಉಳಿದವರು ಪರದಾಡುವ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಗ್ರಾ.ಪಂ. ಆಡಳಿತ ಮಂಡಳಿ ಕಾಜರೊಕ್ಕು ಎಂಬಲ್ಲಿ ಅರಣ್ಯ ಇಲಾಖೆಯ ಜಾಗದ ಮಧ್ಯದಲ್ಲಿ ಸುಮಾರು 2 ಎಕ್ರೆ ಜಾಗ ಕಾದಿರಿಸಿ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಶ್ಮಶಾನ ನಿರ್ಮಾಣ ಮಾಡುತ್ತಿದೆ. ಎಂಟು ತಿಂಗಳ ಹಿಂದೆ ಶ್ಮಶಾನಕ್ಕೆ ಸಂಬಂಧಿಸಿದ ಕಟ್ಟಡಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಸುಮಾರು 3.20 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ಹಾಗೂ ಆವರಣ ಗೋಡೆ ನಿರ್ಮಾಣ ಮಾಡುವಷ್ಟರಲ್ಲಿ ಅನುದಾನ ಕೊರತೆ ಉಂಟಾಯಿತು. ಕೆಲಕಾಲ ಕೆಲಸ ಸ್ಥಗಿತವಾಗಿತ್ತು. ಆದರೂ ಅನಿವಾರ್ಯ ಪರಿಸ್ಥಿತಿಯಿಂದಾಗಿ ಶ್ಮಶಾನದ ಆವರಣದ ಒಳಗಡೆ 8 ತಿಂಗಳ ಅವಧಿಯಲ್ಲಿ 7-8 ಶವಗಳ ಸಂಸ್ಕಾರ ನಡೆಸಲು ಗ್ರಾ.ಪಂ. ಅವಕಾಶ ನೀಡಿತ್ತು.
ಶವ ಸಂಸ್ಕಾರ ನಡೆಸುವ ಲೋಹದ ಪೆಟ್ಟಿಗೆಯನ್ನು 1.20 ಲಕ್ಷ ರೂ. ವೆಚ್ಚದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಡಮಾಡಲಾಗುತ್ತಿದೆ. ಗ್ರಾ.ಪಂ. ಆಡಳಿತ ಮಂಡಳಿ ನಿರ್ಣಯ ಅಂಗೀಕರಿಸಿ, ಕ್ಷೇತ್ರಕ್ಕೆ ಬೇಡಿಕೆ ಸಲ್ಲಿಸಿದ್ದು, ಅನುಮೋದನೆ ದೊರೆತಿದೆ. ಸುಮಾರು 2.40 ಲಕ್ಷ ರೂ. ವೆಚ್ಚದಲ್ಲಿ ಕಟ್ಟಿಗೆ ಇಡಲು ಉಗ್ರಾಣ ಕೊಠಡಿ, ನೀರಿನ ಟ್ಯಾಂಕ್, ಸ್ನಾನಗೃಹ, ನೀರಿನ ಪೈಪ್ ಅಳವಡಿಕೆ ಮುಂತಾದ ಮೂಲ ಸೌಕರ್ಯಗಳೊಂದಿಗೆ ಶ್ಮಶಾನ ನಿರ್ಮಾಣವಾಗುತ್ತಿದೆ. ಶ್ಮಶಾನಕ್ಕೆ ಸಂಪರ್ಕ ಕಲ್ಪಿಸುವ 120 ಮೀ. ಉದ್ದದ ರಸ್ತೆಗೆ ಸುಮಾರು 5.70 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ಹಾಕಲಾಗಿದೆ. ವಿದ್ಯುತ್ ಸಂಪರ್ಕಕ್ಕೆ ಕಾಲಾವಕಾಶ ಬೇಕಾಗಿರುವುದರಿಂದ ತುರ್ತಾಗಿ ಸೋಲಾರ್ ದೀಪ ಅಳವಡಿಸಲಾಗಿದೆ. ರಸ್ತೆ ಸಹಿತ ಶ್ಮಶಾನದ ಒಟ್ಟು ವೆಚ್ಚ 12.50 ಲಕ್ಷ ರೂ. ಆಗಲಿದೆ. ಕಟ್ಟಿಗೆ ತಯಾರಿ, ಶ್ಮಶಾನದ ನಿರ್ವಹಣೆಯನ್ನು ಗ್ರಾ.ಪಂ. ಮಾಡಲಿದ್ದು, ಶವ ಸಂಸ್ಕಾರಕ್ಕೆ ಸಣ್ಣ ಮೊತ್ತದ ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ. ಮಾಸಾಂತ್ಯ ಉದ್ಘಾಟನೆ
ನಮ್ಮಲ್ಲಿ 4 ಕಾಲನಿಗಳಿದ್ದು, 300ಕ್ಕೂ ಹೆಚ್ಚು ಮನೆಗಳಿವೆ. ಇವರೆಲ್ಲರಿಗೂ ಶವ ಸಂಸ್ಕಾರಕ್ಕಾಗಿ ಜಾಗದ ಸಮಸ್ಯೆ ಇದೆ. ಹತ್ತಿರದ ಗ್ರಾಮಗಳ ಜನರು ಕೂಡ ಅಗತ್ಯ ಬಿದ್ದರೆ ಈ ಶ್ಮಶಾನವನ್ನು ಬಳಸಲು ಅವಕಾಶ ನೀಡಲಿದ್ದೇವೆ. ಶವ ಸಂಸ್ಕಾರ ಪೆಟ್ಟಿಗೆಗೆ ಧರ್ಮಸ್ಥಳದ ಸಹಕಾರ ಸಿಕ್ಕಿದೆ. ತಿಂಗಳಾಂತ್ಯದಲ್ಲಿ ಶ್ಮಶಾನದ ಉದ್ಘಾಟನೆ ಗುರಿ ಇರಿಸಲಾಗಿದೆ.
– ಪ್ರಶಾಂತ್ ಆರ್.ಕೆ., ಅಧ್ಯಕ್ಷರು, ರಾಮಕುಂಜ ಗ್ರಾ.ಪಂ.
Related Articles
Advertisement