ಮಂಗಳೂರು: ಅಮೃತ ಮಹೋತ್ಸವದ ಹೊಸ್ತಿಲಲ್ಲಿ ಇರುವ ಮಂಗಳೂರಿನ ಹೆಮ್ಮೆಯ ಆಧ್ಯಾತ್ಮಿಕ ಕೇಂದ್ರ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ವಿಶೇಷ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತವಾಗಿರುವ ಮಂಗಳೂರು ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಸಂಸ್ಥೆಗಳಿಗೆ ನಗರದ ನಾಗರಿಕರಿಂದ ಗೌರವಾಭಿನಂದನೆ ಹಾಗೂ ಪೌರ ಸಮ್ಮಾನ ಶನಿವಾರ ಪುರಭವನದಲ್ಲಿ ನೆರವೇರಿತು.
ಗೌರವಾಭಿನಂದನ ಸಮಿತಿ ಮತ್ತು ಸ್ವಚ್ಛ ಮಂಗಳೂರು ಫೌಂಡೇಶನ್ ಕಾರ್ಯಕ್ರಮ ಆಯೋಜಿಸಿತ್ತು. ಮಠದ ಅಧ್ಯಕ್ಷ ಶ್ರೀ ಜಿತಕಾಮಾನಂದಜಿ ಮಹಾರಾಜ್ ಅವರು ಸಮ್ಮಾನ ಸ್ವೀಕರಿಸಿದರು. ಶ್ರೀ ಏಕಗಮ್ಯಾನಂದ ಸ್ವಾಮೀಜಿ ಉಪಸ್ಥಿತರಿದ್ದರು.
ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಮತ್ತು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ ಭಟ್ ಗೌರವ ಅತಿಥಿಗಳಾಗಿದ್ದರು. ರಾಮಪ್ರಸಾದ್ ಕಾಂಚೋಡು ಅಭಿನಂದನ ಪತ್ರ ವಾಚಿಸಿದರು.
ಶಾಸಕರಾದ ಡಿ. ವೇದವ್ಯಾಸ ಕಾಮತ್, ಯು.ಟಿ. ಖಾದರ್, ಡಾ| ವೈ. ಭರತ್ ಶೆಟ್ಟಿ, ಮೇಯರ್ ಪ್ರೇಮಾನಂದ ಶೆಟ್ಟಿ, ಮಾಜಿ ಶಾಸಕ ಜೆ.ಆರ್. ಲೋಬೊ, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ| ಮಂಜುನಾಥ ಭಂಡಾರಿ, ಎಸ್‌ಸಿಎಸ್ ಆಸ್ಪತ್ರೆಯ ಮುಖ್ಯಸ್ಥ ಡಾ| ಜೀವರಾಜ್ ಸೊರಕೆ, ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ವೆಂಕಟೇಶ್ ಅವರು ಸ್ವಾಮೀಜಿ ಮತ್ತು ಸಂಸ್ಥೆಗಳನ್ನು ಅಭಿನಂದಿಸಿದರು.
ಇದನ್ನೂ ಓದಿ:ವಿಮಾನದಿಂದ ಇಳಿಯುವವರು ಕೊರೊನಾ ವರದಿ ತೋರಿಸಬೇಕಿಲ್ಲ
ಗೌರವಾಭಿನಂದನ ಸಮಿತಿಯ ದಿಲ್‌ರಾಜ್ ಆಳ್ವ ಸ್ವಾಗತಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ಪ್ರಸ್ತಾವನೆಗೈದರು. ಹರೀಶ್ ಆಚಾರ್ ವಂದಿಸಿದರು. ಸ್ಮಿತಾ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.
ಅನುಪಮ ಸೇವೆ
ಡಾ| ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ರಾಮಕೃಷ್ಣ ಮಿಷನ್ ಸ್ವಚ್ಛ ಭಾರತ / ಮಂಗಳೂರು ಅಭಿಯಾನ ಮತ್ತು ಇತರ ಸೇವಾ ಕಾರ್ಯಗಳ ಮೂಲಕ ಸಾಮಾನ್ಯನನ್ನು ಅಸಾಮಾನ್ಯನನ್ನಾಗಿಸಿದೆ. ಶ್ರೀ ಜಿತಕಾಮಾನಂದ ಮಹಾರಾಜ್ ಅವರ ಗಂಗೆಯಂತಹ ನಿರಂತರ ಪ್ರೊತ್ಸಾಹದ ಪ್ರವಾಹ ಹಾಗೂ ಶ್ರೀ ಏಕಗಮ್ಯಾನಂದ ಸ್ವಾಮೀಜಿ ಅವರ ಬಂಡೆಕಲ್ಲಿನಂತಹ ಅಚಲ ನಿರ್ಧಾರಗಳು ಮಠದ ಯೋಜನೆಗಳ ಗುರಿಯನ್ನು ಸಾಧಿಸಲು ಸಹಕಾರಿಯಾಯಿತು ಎಂದರು.