ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಸಂಚಾಲಕತ್ವದ ಎಸ್. ಎಂ. ಶೆಟ್ಟಿ ಇಂಟರ್‌ನ್ಯಾಶನಲ್ ಸ್ಕೂಲ್ ಮತ್ತು ಜೂನಿಯರ್ ಕಾಲೇಜಿಗೆ 2022ನೇ ಸಾಲಿನ ಪ್ರತಿಷ್ಠಿತ ರಾಮಕೃಷ್ಣ ಬಜಾಜ್ ನ್ಯಾಶನಲ್ ಕ್ವಾಲಿಟಿ ಅವಾರ್ಡ್ ಲಭಿಸಿದೆ.
ಇಂಡಿಯನ್ ಮರ್ಚೆಂಟ್ ಛೇಂಬರ್ಸ್‌ನಲ್ಲಿ ಎ. 30ರಂದು ನಡೆದ ವರ್ಣರಂಜಿತ ಸಮಾರಂಭದಲ್ಲಿ ಎಸ್‌ಎಂ ಶೆಟ್ಟಿ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಾಧನೆಗಾಗಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಭಾರ ತೀಯ ವಾಣಿಜ್ಯೋದ್ಯಮಿ ಮತ್ತು ಮಾರಿಕೋ ಸಂಸ್ಥಾ ಪಕಾಧ್ಯಕ್ಷ ಹರ್ಷ ಮಾರಿವಾಲಾ ಅವರು ಬಂಟರ ಸಂಘ ಪೊವಾಯಿ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಬಿ. ಆರ್. ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪೊವಾಯಿ ಎಸ್. ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ವಸಂತ ಶೆಟ್ಟಿ ಪಲಿಮಾರು, ಪ್ರಧಾನ ವ್ಯವಸ್ಥಾಪಕ ಮತ್ತು ಆಡಳಿತಾಧಿಕಾರಿ ಡಾ| ಸಂದೀಪ್ ಸಿಂಗ್ ಮತ್ತು ಪ್ರಾಂಶುಪಾಲ ಮಿಲ್ಫ್ರೇಡ್ ಲೋಬೋ ಉಪಸ್ಥಿತರಿದ್ದರು.
ಪೊವಾಯಿ ಎಸ್. ಎಂ. ಶೆಟ್ಟಿ ಶಿಕ್ಷಣ ಸಂಕುಲ ಶಿಕ್ಷಣ ಸಂಸ್ಥೆಗಳಲ್ಲಿ ಮಾದರಿ ಶಿಕ್ಷಣ ಸಂಸ್ಥೆ ಎಂದೇ ಖ್ಯಾತಿ ಪಡೆದಿರುವ ಬಂಟರ ಸಂಘ ಮುಂಬಯಿ ಸಂಚಾಲಕತ್ವದ ಪೊವಾಯಿ ಎಸ್. ಎಂ. ಶೆಟ್ಟಿ ಹೈಸ್ಕೂಲ್, ಜೂನಿಯರ್ ಕಾಲೇಜ್ ವಿಜ್ಞಾನ, ವಾಣಿಜ್ಯ ಮತ್ತು ಮ್ಯಾನೇಜ್‌ಮೆಂಟ್ ಸ್ಟಡೀಸ್ ಕಾಲೇಜು, ಏಂಜೆಲ್ ಡೇ ಕೇರ್ ಸೆಂಟರ್, ಪ್ಲೇ ಸ್ಕೂಲ್, ಪ್ರೀ ಪ್ರೈಮರಿ ಶಿಕ್ಷಕರ ತರಬೇತಿ ಅಕಾಡೆಮಿ, ಇಂಟರ್‌ನ್ಯಾಶನಲ್ ಶಿಕ್ಷಕರ ತರಬೇತಿ ಅಕಾಡೆಮಿ ಸಂಘದ ವಿಶೇಷ ಕೊಡುಗೆಗಳಾಗಿವೆ. 1998ರಲ್ಲಿ ಖ್ಯಾತ ಉದ್ಯಮಿ, ಕೊಡುಗೈದಾನಿ ಎಸ್.ಎಂ. ಶೆಟ್ಟಿಯವರು ಪೊವಾಯಿ ಶಿಕ್ಷಣ ಸಂಸ್ಥೆಗಾಗಿ ಸ್ಥಳದಾನ ನೀಡಿದ ಫಲಶ್ರುತಿಯಿಂದಾಗಿ ಇವೆಲ್ಲವೂ ಸಾಧ್ಯವಾಗಿದೆ. ಬಂಟರ ಸಂಘದ ಶಿಕ್ಷಣದಲ್ಲಿ ಅವರ ಹೆಸರು ಚಿರಕಾಲ ಉಳಿಯುವಂಥದ್ದಾಗಿದೆ. ಸಂಘದ ಪೊವಾಯಿ ಶಿಕ್ಷಣ ಸಮಿತಿ ಸಂಚಾಲಕತ್ವದಲ್ಲಿರುವ ಎಸ್.ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯು ಕೆ.ಜಿ.ಯಿಂದ ಮೊದಲ್ಗೊಂಡು ಪಿ.ಜಿ. ಯವರೆಗೆ ಶಿಕ್ಷಣ ನೀಡುತ್ತಿರುವುದು, ಅಸಂಖ್ಯಾಕ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಭವ್ಯ ಭಾರತದ ಉತ್ತಮ ಪ್ರಜೆಗಳನ್ನಾಗಿಸುವಲ್ಲಿ ಪ್ರೇರಕ ಶಕ್ತಿಯಾಗಿ ರುವುದು ಶ್ಲಾಘನೀಯ.
ಬಂಟರ ಸಂಘದ ಉನ್ನತ ಶಿಕ್ಷಣ ಸಂಕುಲ ಬಂಟರ ಸಂಘದ ಇನ್ನೊಂದು ಶಿಕ್ಷಣ ಸಂಸ್ಥೆಯಾಗಿರುವ ಸಂಘದ ಉನ್ನತ ಶಿಕ್ಷಣ ಸಂಸ್ಥೆ ಸಂಘದ ಉನ್ನತ ಶಿಕ್ಷಣ ಸಮಿತಿಯ ಸಂಚಾಲಕತ್ವದಲ್ಲಿ ಪ್ರಗತಿಶೀಲವಾಗಿದೆ. ಕುರ್ಲಾ ಪೂರ್ವದ ಬಂಟರ ಭವನದ ಸಂಕೀರ್ಣದಲ್ಲಿ ಮಹಾದಾನಿ, ಸಂಘದ ಮಾಜಿ ಅಧ್ಯಕ್ಷ ಮನ್‌ಮೋಹನ್ ಆರ್. ಶೆಟ್ಟಿಯವರ ಪತ್ನಿ ಶಶಿ ಮನ್‌ಮೋಹನ್ ಶೆಟ್ಟಿಯವರ ಹೆಸರಿನಲ್ಲಿ ಸ್ಥಾಪನೆಗೊಂಡಿದೆ. ಸಂಕೀರ್ಣದಲ್ಲಿ ಅಣ್ಣ ಲೀಲಾ ಕಾಮರ್ಸ್ ಮತ್ತು ಎಕಾನೋಮಿಕ್ಸ್, ಶೋಭಾ ಜಯರಾಮ ಶೆಟ್ಟಿ ಬಿಎಂಎಸ್ ಕಾಲೇಜು, ಆರತಿ ಶಶಿಕಿರಣ್ ಶೆಟ್ಟಿ ಜೂನಿಯರ್ ಕಾಲೇಜು, ಬಾಕೂìರು ಧರ್ಮರಾಜ ಶೆಟ್ಟಿ ಮಾಸ್ ಮೀಡಿಯಾ ಕಾಲೇಜು, ಸುಧಾಕರ ಮಲ್ಲಪ್ಪ ಶೆಟ್ಟಿ ಸ್ನಾತಕೋತ್ತರ ವ್ಯಾಣಿಜ್ಯ ಕಾಲೇಜು, ರಮಾನಾಥ ಪಯ್ಯಡೆ ಅದರಾತಿಥ್ಯ ಮ್ಯಾನೇಜ್‌ಮೆಂಟ್ ಸ್ಟಡೀಸ್ ಕಾಲೇಜು, ಉಮಾಕೃಷ್ಣ ಶೆಟ್ಟಿ ಮ್ಯಾನೇಜ್‌ಮೆಂಟ್ ಮತ್ತು ರೀಸರ್ಚ್ ಕಾಲೇಜುಗಳು ಶಿಕ್ಷಣ ಸೇವೆ ಸಲ್ಲಿಸುತ್ತಿವೆ.
ಸಂಘದ ಮತ್ತೂಂದು ಮಹತ್ವದ ಶಿಕ್ಷಣ ಸಂಸ್ಥೆಯ ಯೋಜನೆ ಬೊರಿವಲಿಯ ಐಸಿ ಕಾಲನಿಯಲ್ಲಿ ನಿರ್ಮಾಣಗೊಳ್ಳುತ್ತಿದೆ. ಈ ನೂತನ ಶಿಕ್ಷಣ ಸಂಕುಲದಲ್ಲಿ ಐಜಿಸಿಎಸ್‌ಇ ಕ್ಯಾಂಬ್ರಿಡ್ಜ್ ಯೂನಿವರ್ಸಿಟಿ , ಐಬಿ ಹಾಗೂ ಸಿಬಿಎಸ್‌ಇ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಂಟರ ಸಂಘದ ಶಿಕ್ಷಣ ಕ್ಷೇತ್ರದಲ್ಲಿ ಈ ಯೋಜನೆಯು ಮುಂಬಯಿ ಅಗ್ರಪಂಕ್ತಿಯ ಬೆಳವಣಿಗೆಯ ಶಿಕ್ಷಣ ಸಂಕುಲವನ್ನಾಗಿಸುವ ಎಲ್ಲ ವಿಶೇಷ ಸೌಲಭ್ಯ, ಸವಲತ್ತು ಗಳನ್ನು ಹೊಂದಿದ್ದು, ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟದೊಂದಿಗೆ ಪಂಚತಾರಾ ಹೊಟೇಲಿನ ಸೌಂದರ್ಯಕ್ಕೆ ಸಮವಾಗಿ ಶೋಭಿಸಲಿದೆ.
ಬಂಟರ ಸಂಘ ಎಸ್. ಎಂ. ಶೆಟ್ಟಿ ಇಂಟರ್‌ನ್ಯಾಶನಲ್ ಸ್ಕೂಲ್ ಮತ್ತು ಜೂನಿಯರ್ ಕಾಲೇಜಿಗೆ ಇದು ಸಂಭ್ರಮದ ಕ್ಷಣವಾಗಿದೆ. ತಂಡವು ಈ ಪ್ರಶಸ್ತಿಯನ್ನು ಪಡೆಯಲು ಅತ್ಯಂತ ಬದ್ಧತೆಯಿಂದ ಹಗಲಿರುಳು ಶ್ರಮಿಸಿದೆ. ಒಂದು ಸಂಸ್ಥೆಯಾಗಿ ನಾವು ಈ ಪ್ರಶಸ್ತಿಯನ್ನು ಬಂಟ್ಸ್ ಸಂಘ ಮುಂಬಯಿ ಮತ್ತು ನಮ್ಮ ಎಲ್ಲ ಪಾಲುದಾರರಿಗೆ ಅರ್ಪಿಸುತ್ತೇವೆ. ಗುಣಮಟ್ಟದ ಶಿಕ್ಷಣವನ್ನು ಸಾಧಿಸಲು ನಮ್ಮ ಶ್ರಮ ನಿರಂತರವಾಗಿರಲಿದ್ದು, ನಮ್ಮ ಬದ್ಧತೆಯನ್ನು ನವೀಕರಿಸುತ್ತೇವೆ.
-ಬಿ. ಆರ್. ಶೆಟ್ಟಿ, ಕಾರ್ಯಾಧ್ಯಕ್ಷರು ಎಸ್.ಎಂ. ಶೆಟ್ಟಿ ಶಿಕ್ಷಣ ಸಂಕುಲ ಪೊವಾಯಿ