Advertisement
ಈ ಹಿನ್ನೆಲೆಯಲ್ಲಿ ಬುಧವಾರ ರೈತ ಸಂಘದ ನೇತೃತ್ವದಲ್ಲಿ ರೈತ ಮುಖಂಡರು ಬೆಳಗಾವಿ ಎಕ್ಸಿಸ್ ಬ್ಯಾಂಕಿನ ಎದುರು ಧರಣಿ ನಡೆಸಿದ್ದರು. ಆ ಸಂದರ್ಭದಲ್ಲಿ ಬ್ಯಾಂಕಿನ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಧರಣಿ ನಿರತ ರೈತರೊಂದಿಗೆ ಚರ್ಚಿಸಿ ತಾವು ಇಂತಹ ಯಾವುದೇ ನೋಟಿಸ್, ಅರೆಸ್ಟ್ ವಾರಂಟ್ ಕಾರ್ಯಕ್ಕೆ ಮುಂದಾಗಿಲ್ಲ ಎಂದು ಹೇಳಿ ಯಾವುದೇ ಕಾರಣಕ್ಕೆ ರೈತರನ್ನು ಬಂಧಿಸುವ ಕೆಲಸಕ್ಕೆ ಹೋಗುವುದಿಲ್ಲ ಎಂದು ಪತ್ರದ ಮೂಲಕ ಸ್ಪಷ್ಟಪಡಿಸಿದ್ದಾರೆ. ಋಣಮುಕ್ತ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ರೈತ ಮುಖಂಡರು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ವಸ್ತು ಸ್ಥಿತಿಯನ್ನು ವಿವರಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ, ಈ ರೀತಿ ಯಾವುದೇ ತರಹದ ತೊಂದರೆ ಕೊಡದಂತೆ ಈಗಾಗಲೇ ಎಲ್ಲ ಬ್ಯಾಂಕುಗಳಿಗೆ ಸೂಚಿಸಲಾಗಿದೆ. ಈಗ ಮತ್ತೆ ಈ ಕುರಿತು ಬ್ಯಾಂಕುಗಳಿಗೆ ಸೂಚಿಸಲಾಗುವುದು. ಅಲ್ಲದೇ ಇದನ್ನು ಸರಕಾರದ ಗಮನಕ್ಕೂ ತರಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ ನಂತರ ರೈತರು ನಿರಾಳರಾಗಿದ್ದಾರೆ. ಘಟನೆ ವಿವರ: 2005ರಲ್ಲಿ ಬೆಳಗಾವಿ ಎಕ್ಸಿಸ್ ಬ್ಯಾಂಕಿನಿಂದ ಟ್ರ್ಯಾಕ್ಟರ್ ಸಾಲ ಪಡೆದುಕೊಂಡಿದ್ದ ಚಂದರಗಿಯ ರೈತ ದೊಡ್ಡಸಂಗಪ್ಪ ವೀರಪ್ಪ ಅಡಗಿಮನಿಗೆ ಕೋಲ್ಕತಾ ನ್ಯಾಯಾಲಯದಿಂದ ಫೆ. 2ರಂದು ಅರೆಸ್ಟ್ ವಾರೆಂಟ್ ಬಂದಿತ್ತು.ಟ್ರ್ಯಾಕ್ಟರ್ ಸಾಲವನ್ನು ಅಲ್ಪ ಪ್ರಮಾಣದಲ್ಲಿ ಮರುಪಾವತಿ ಮಾಡಿದ್ದ ರೈತ ನಂತರದ ದಿನಗಳಲ್ಲಿ ಬರಗಾಲ ಆವರಿಸಿದ್ದರಿಂದ ಸಾಲದ ಕಂತು ತುಂಬಲಾಗಿರಲಿಲ್ಲ. 2007ರಲ್ಲಿ ಬ್ಯಾಂಕಿನವರು ಟ್ರ್ಯಾಕ್ಟರ್ ಜಪ್ತು ಮಾಡಿಕೊಂಡು 2008ರಲ್ಲಿ ಹರಾಜು ನಡೆಸಿ 2.20 ಲಕ್ಷ ಸಾಲ ತುಂಬಿಕೊಂಡಿದ್ದರು. ಇನ್ನ್ನುಳಿದ 4.80 ಲಕ್ಷ ಮೊತ್ತಕ್ಕೆ ರೈತರ ಭೂಮಿಯ ಮೇಲೆ ಭೋಜಾ ಹೇರಿದ್ದರು. ಸಾಲ ಪಡೆದುಕೊಳ್ಳುವ ಸಂದರ್ಭದಲ್ಲಿ ರೈತ ದೊಡ್ಡಸಂಗಪ್ಪ ನೀಡಿದ್ದ ಖಾಲಿ ಚೆಕ್ ಅನ್ನು ಆಧಾರವಾಗಿಟ್ಟುಕೊಂಡು ಫೆ. 2ರಂದು ಕೋಲ್ಕತಾ ನ್ಯಾಯಾಲಯದಿಂದ ಅರೆಸ್ಟ್ ವಾರೆಂಟ್ ಜಾರಿಯಾಗಿದ್ದರಿಂದ ಆತಂಕಗೊಂಡ ರೈತ ರೈತ ಸಂಘದ ಮೊರೆ ಹೋಗಿದ್ದ.
•ದೊಡ್ಡಸಂಗಪ್ಪ ಅಡಗಿಮನಿ, ರೈತ