ಗಜೇಂದ್ರಗಡ: ರಂಜಾನ್ ತಿಂಗಳ ಉಪವಾಸ ವ್ರತಾಚರಣೆಯನ್ನು ಮನೆಯಲ್ಲಿಯೇ ಕೈಗೊಳ್ಳುವ ಮೂಲಕ ಕೋವಿಡ್ 19 ವೈರಸ್ ತಡೆಯಲು ಪ್ರಾರ್ಥಿಸಿ ಎಂದು ಠಾಣೆ ಪಿಎಸ್‌ಐ ಗುರುಶಾಂತ್ ದಾಶ್ಯಾಳ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಮನುಕುಲವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೋವಿಡ್ 19 ತಡೆಗಟ್ಟಲು ಸಾಮಾಜಿಕ ಅಂತರವೇ ರಹದಾರಿಯಾಗಿದೆ.
ಹೀಗಾಗಿ ಮುಸ್ಲಿಂ ಸಮುದಾಯದವರ ಪವಿತ್ರ ಆಚರಣೆಗಳಲ್ಲಿ ಒಂದಾಗಿರುವ ರಂಜಾನ್ ತಿಂಗಳ ವಿಶೇಷ ನಮಾಜ್ ಮನೆಯಲ್ಲಿಯೇ ನೆರವೇರಿಸಬೇಕು. ಇಫ್ತಾರ್ ಕೂಟವನ್ನು ಏರ್ಪಡಿಸುವ ಬದಲು ನಿರ್ಗತಿಕರ ಹಸಿವು ನೀಗಿಸಲು ಮುಂದಾಗಿ ಎಂದು ಸಲಹೆ ನೀಡಿದ ಅವರು, ಸರ್ಕಾರಗಳ ಆದೇಶವನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಎ.ಡಿ. ಕೋಲಕಾರ ಮಾತನಾಡಿ, ಕೋವಿಡ್ 19 ವೈರಸ್ ನಿಯಂತ್ರಣಕ್ಕೆ ಮುಸ್ಲಿಂ ಸಮುದಾಯ ಬದ್ದವಾಗಿದೆ. ಈಗಾಗಲೇ ಲಾಕ್‌ಡೌನ್ ಜಾರಿಯಾದಾಗಿನಿಂದ ಮಸೀದಿಯಲ್ಲಿ ನಮಾಜ್ ಕೈ ಬಿಡಲಾಗಿದೆ. ವಿಶೇಷ ಪ್ರಾರ್ಥನೆಗಳನ್ನು ಮನೆಯಲ್ಲಿಯೇ ನಿರ್ವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪಟ್ಟಣದ ಎಲ್ಲ ಮಸೀದಿಗಳಿಗೆ ಈಗಾಗಲೇ ಕಮೀಟಿಯಿಂದ ಮಾಹಿತಿ ಕಳುಹಿಸಲಾಗಿದ್ದು, ಕಾನೂನು ಪಾಲನೆಗೆ ಎಲ್ಲರೂ ಬದ್ಧರಾಗಿದ್ದೇವೆ ಎಂದರು.
ಎಂ.ಎಸ್. ಜಾಲಿಹಾಳ, ಮಾಸುಮಲಿ ಮದಗಾರ, ರಾಜು ಸಾಂಗ್ಲಿಕಾರ, ಹಸನ ತಟಗಾರ, ದಾದು ಹಣಗಿ, ಭೀಮಣ್ಣ ಇಂಗಳೆ ಇದ್ದರು.