ಹೊಸದಿಲ್ಲಿ : ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ನ್ಯಾಯಾಲಯದಿಂದ ಘೋಷಿತನಾಗಿರುವ ಸ್ವ ಘೋಷಿತ ದೇವಮಾನವ, ಡೇರಾ ಸಚ್ಚಾ ಸೌದಾ ಮುಖ್ಯಸ್ಥ, ಗುರ್‌ಮೀತ್ ರಾಮ್ ರಹೀಮ್ ಸಿಂಗ್ ಗೆ ಮರಣ ದಂಡನೆಯ ಶಿಕ್ಷೆ ನೀಡಬೇಕೆಂದು ವಾರಾಣಸಿಯ ಸಾಧುಗಳು ಆಗ್ರಹಿಸಿದ್ದಾರೆ.
ಡೇರಾ ಮುಖ್ಯಸ್ಥನಿಗೆ ನ್ಯಾಯಾಲಯ ಗರಿಷ್ಠ 7 ವರ್ಷಗಳ ಅಥವಾ ಜೀವಾವಧಿಯ ಜೈಲು ಶಿಕ್ಷೆಯನ್ನು ಪ್ರಕಟಿಸುವ ಸಾಧ್ಯತೆ ಇದೆ.
ಇಂದು ಸೋಮವಾರ ಮಧ್ಯಾಹ್ನ 2.30ರ ವೇಳೆಗೆ ಡೇರಾ ಮುಖ್ಯಸ್ಥನಿಗೆ ಶಿಕ್ಷೆಯನ್ನು ಪ್ರಕಟಿಸುವ ಕೋರ್ಟ್ ಕಲಾಪ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಆರಂಭಗೊಳ್ಳಲಿದೆ.
ರೋಹಟಕ್‌ನ ಸುನಾರಿಯಾ ಜೈಲಿನಲ್ಲಿ ನಡೆಯಲಿರುವ ಸಿಬಿಐ ನ್ಯಾಯಾಲಯದ ಕಲಾಪಕ್ಕೆ ಅತ್ಯಂತ ಬಿಗಿ ಭದ್ರತೆಯನ್ನು ವ್ಯವಸ್ಥೆಗೊಳಿಸಲಾಗಿದೆ. ಪಂಚಕುಲ, ಸಿರ್ಸಾ, ಉತ್ತರ ಪ್ರದೇಶದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಭಾರೀ ಸಂಖ್ಯೆಯ ಅರೆಸೈನಿಕ ದಳದ ಸಿಬಂದಿಳನ್ನು ನಿಯೋಜಿಸಲಾಗಿದೆ.
ಟಿವಿ ವಾಹಿನಿಗಳ ವರದಿಯ ಪ್ರಕಾರ ಸಿಬಿಐ ನ್ಯಾಯಾಧೀಶ ಜಗದೀಪ್ ಸಿಂಗ್ 11.30ರ ಹೊತ್ತಿಗೆ ಸೊನಾರಿಯಾ ಜೈಲಿಗೆ ಆಗಮಿಸಿದ್ದಾರೆ.
ಈ ನಡುವೆ ದಿಲ್ಲಿಯ ನಾರ್ತ್ ಬ್ಲಾಕ್‌ನಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್, ಎನ್‌ಎಸ್‌ಎ ಅಜಿತ್ ದೋವಾಲ್, ಗೃಹ ಕಾರ್ಯದರ್ಶಿ, ಐಬಿ ನಿರ್ದೇಶಕರು ಮತ್ತು ಗೃಹ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಉನ್ನತ ಮಟ್ಟದ ಸಭೆ ನಡೆಸುತ್ತಿದ್ದು ಪಂಜಾಬ್‌ನಲ್ಲಿನ ಭದ್ರತಾ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.