ಮಹಾಲಿಂಗಪುರ: ಜೀವ ಬಿಟ್ಟೆವು ತಾಲೂಕು ಬಿಡೇವು ನಿಲುವಿನೊಂದಿಗೆ 12 ನೇ ದಿನಕ್ಕೆ ಕಾಲಿಟ್ಟಿರುವ ಮಹಾಲಿಂಗಪುರ ತಾಲೂಕು ಹೋರಾಟಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಕೆಸರುಗೊಪ್ಪ ಗ್ರಾಮದ ರೈತರು ನೂರಾರು ಅಲಂಕೃತ ಎತ್ತಿನ ಗಾಡಿಗಳ ಬೃಹತ್ ರ್ಯಾಲಿ ನಡೆಸಿದರು.
ವಿಧಾನ ಪರಿಷತ್ ಸದಸ್ಯರಾದ ಹನುಮಂತ ನಿರಾಣಿ ಮತ್ತು ಅರುಣ ಶಹಾಪುರ ಸೋಮವಾರ ಬೆಳಗ್ಗೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಎತ್ತಿನ ಗಾಡಿಗಳ ರ್ಯಾಲಿಗೆ ಚಾಲನೆ ನೀಡಿದರು.
ರಾಣಿ ಚನ್ನಮ್ಮ ವೃತ್ತ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಜೋಡು ರಸ್ತೆ, ನಡುಚೌಕಿ, ಜವಳಿ ಬಜಾರ, ಗಾಂಧಿ ವೃತ್ತ ಮಾರ್ಗವಾಗಿ ಸಾಗಿ ಚನ್ನಮ್ಮ ವೃತ್ತದಲ್ಲಿ ಎತ್ತಿನ ಗಾಡಿಗಳ ಸರಪಳಿ ರಚಿಸಿ ರಸ್ತೆ ಬಂದ್ ಮಾಡಿ, ತಾಲೂಕು ಹೋರಾಟ ಪರ ಘೋಷಣೆ ಮತ್ತು ಜಯಘೋಷಗಳೊಂದಿಗೆ ಮಹಾಲಿಂಗಪುರ ತಾಲೂಕು ಘೋಷಣೆಗೆ ಒತ್ತಾಯಿಸಲಾಯಿತು.
ಮುಷ್ಕರದಲ್ಲಿ ಭಾಗಿಯಾಗಿ ಮಾಜಿ ಸಚಿವ ಆರ್. ಬಿ. ತಿಮ್ಮಾಪುರ ಮಾತನಾಡಿ, ಎಲ್ಲ ಅರ್ಹತೆಗಳಿದ್ದರೂ ತಾಲೂಕು ಘೋಷಣೆಗೆ ಸರ್ಕಾರ ಮನಸ್ಸು ಮಾಡದಿರುವುದೇ ಮಹಾಲಿಂಗಪುರ ತಾಲೂಕು ಘೋಷಣೆಯ ಹಿನ್ನಡೆಗೆ ಕಾರಣ. ಈಗ ಸಿದ್ದು ಸವದಿ ಅವರಿಗೆ ಎಲ್ಲ ಅವಕಾಶಗಳಿವೆ. ಹೇಳಿದಂತೆ ಕೇಳುವ ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯದಲ್ಲಿ ಅವರದೇ ಸರ್ಕಾರವಿದ್ದು, ಸವದಿ ಅವರಿಗೆ ಬಹುದೊಡ್ಡ ಅವಕಾಶವಿದೆ. ತಾಲೂಕು ಘೋಷಣೆಯಾದರೆ ಸವದಿಯವರು ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರದ ಹೆಸರು ಮಹಾಲಿಂಗಪುರ ಇತಿಹಾಸದಲ್ಲಿ ಅಜರಾಮರವಾಗುತ್ತದೆ ಎಂದರು.
ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ, ಧರೆಪ್ಪ ಸಾಂಗ್ಲಿಕರ, ಯಲ್ಲನಗೌಡ ಪಾಟೀಲ,ಮಲ್ಲಪ್ಪ ಸಿಂಗಾಡಿ, ಬಲವಂತಗೌಡ ಪಾಟೀಲ, ಜಾವೇದ ಭಾಗವಾನ,ಸಂಗಪ್ಪ ಹಲ್ಲಿ, ಮನೋಹರ ಶಿರೋಳ, ಚನ್ನು ದೇಸಾಯಿ ಭೀಮಶೀ ಸಸಾಲಟ್ಟಿ, ಮಾರುತಿ ತೇಜಪ್ಪಗೋಳ, ಮಾರುತಿ ಖರೋಶಿ, ಶ್ರೀಶೈಲ ಸತ್ತಿಗೇರಿ, ಪರಪ್ಪ ಬ್ಯಾಕೋಡ ಇದ್ದರು.
ಒಂದೇ ಮತಕ್ಷೇತ್ರದಲ್ಲಿ ಹುನಗುಂದ ಮತ್ತು ಇಳಕಲ್ಲ ತಾಲೂಕು ವಿಭಜಿಸಿದಂತೆ ತೇರದಾಳ ಮತಕ್ಷೇತ್ರದಲ್ಲೂ ತೇರದಾಳ ಮತ್ತು ಮಹಾಲಿಂಗಪುರ ಎರಡು ತಾಲೂಕು ಘೋಷಿಸಬಹುದು. ದೀರ್ಘ ಹೋರಾಟದ ನಂತರವೂ ಸರಿಯಾದ ಸಮಯದಲ್ಲಿ ತಾಲೂಕು ಘೋಷಣೆಯಾಗದಿರುವುದು ಮತ್ತು ಬೇರೆಲ್ಲ ತಾಲೂಕುಗಳ ಘೋಷಣೆ ಆದರೂ ಮಹಾಲಿಂಗಪುರ ಕಡೆಗಣಿಸುತ್ತಿರುವುದು ಅಚ್ಚರಿ ಮತ್ತು ವಿಷಾದದ ಸಂಗತಿ.
-ಆರ್. ಬಿ. ತಿಮ್ಮಾಪುರ, ಮಾಜಿ ಸಚಿವ