ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾನೂನು ಬೆಂಬಲಿಸಿ ಪ್ರಗತಿಪರ ದಲಿತ ಒಕ್ಕೂಟಗಳ ಮಹಾಸಭಾ ನೇತೃತ್ವದಲ್ಲಿ ವಿವಿಧ ದಲಿತಪರ ಸಂಘಟನೆಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುವ ಸಮಾವೇಶ ಗುರುವಾರ ನಡೆಯಿತು.
ಡಾ| ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಆರಂಭವಾದ ರ್ಯಾಲಿ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ನಡೆಯಿತು. ಸಮಾವೇಶಯುದ್ದಕ್ಕೂ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಪರವಾಗಿ ಘೋಷಣೆ ಕೂಗಿದರು. ನಂತರ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಆಗಮಿಸಿದ ತಹಶೀಲ್ದಾರ್ ಪ್ರಕಾಶ ನಾಸಿ ಅವರಿಗೆ ಮಹಾಸಭಾದ ಸಂಚಾಲಕರು ಅಭಿನಂದನಾ ಪತ್ರ ಸಲ್ಲಿಸಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಪಾಕಿಸ್ತಾನ, ಅಫಘಾನಿಸ್ತಾನ ಹಾಗೂ ಬಾಂಗ್ಲಾ ದೇಶದಲ್ಲಿ ಧಾರ್ಮಿಕ ದೌರ್ಜನ್ಯಕ್ಕೊಳಗಾದ ಅಲ್ಲಿನ ಅಲ್ಪಸಂಖ್ಯಾತರಿಗೆ ಪೌರತ್ವ ಕೊಡುವುದನ್ನು ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ವಿರೋಧ ಮಾಡುತ್ತಿವೆ. ದೌರ್ಜನ್ಯಕ್ಕೊಳಗಾಗಿರುವ ಬಹುತೇಕರು ದಲಿತ ವರ್ಗಕ್ಕೆ ಸೇರಿದವರಾಗಿದ್ದಾರೆ. ಅವರಿಗೆ ಪೌರತ್ವ ನೀಡಲು ಈ ಕಾಯ್ದೆ ತರಲಾಗಿದ್ದು, ಇದನ್ನು ವಿರೋಧ ಮಾಡುವ ಮೂಲಕ ಕಾಂಗ್ರೆಸ್ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಮಾತನಾಡಿ, ಈ ಕಾಯ್ದೆಗಳಿಂದ ದೇಶದಲ್ಲಿ ನೆಲೆಸಿರುವ ಅಲ್ಪಸಂಖ್ಯಾತರು ಹಾಗೂ ದಲಿತರಿಗೆ ಯಾವುದೇ ಸಮಸ್ಯೆಯಿಲ್ಲ. ಈ ಕಾನೂನು ವಿರೋಧ ಮಾಡುವ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ದಲಿತ ವಿರೋಧಿಗಳು ಎಂದು ಹೇಳಿದರು.
ಮುಖಂಡರಾದ ಚಂದ್ರಶೇಖರ ಗೋಕಾಕ, ಲಕ್ಷ್ಮಣ ಬಿಳಗಿ, ಮಹೇಂದ್ರ ಕೌತಾಳ, ರಂಗನಾಯಕ ತಪೇಲಾ, ಅರುಣ ಹುದ್ಲಿ, ರಾಕೇಶ ದೊಡ್ಡಮನಿ, ಸುಭಾಸ ಅಂಕಲಕೋಟಿ, ಹನುಮಂತಪ್ಪ ದೊಡ್ಡಮನಿ, ಪರಶುರಾಮ ಪೂಜಾರ, ಶಶಿಕಾಂತ ಬಿಜವಾಡ, ಅನೂಪ ಬಿಜವಾಡ, ಬಸವರಾಜ ಅಮ್ಮಿನಬಾವಿ, ಮಂಜುನಾಥ ಬಿಜವಾಡ, ನಾಗರಾಜ ಟಗರಗುಂಟಿ ಪಾಲ್ಗೊಂಡಿದ್ದರು.
ಇತ್ತೀಚೆಗೆ ಸ್ಥಳೀಯ ಶಾಸಕರೊಬ್ಬರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ದಲಿತರು ಇಲ್ಲದಿದ್ದರೂ ದಲಿತರ ಹೋರಾಟ ಎಂದು ಕಪಟ ನಾಟಕ ಮಾಡಿದ್ದಾರೆ. ದೌರ್ಜನ್ಯಕ್ಕೊಳಗಾಗಿ ದೇಶಕ್ಕೆ ಬಂದಿರುವ ದಲಿತರಿಗೆ ಪೌರತ್ವ ಕೊಡುವುದು ತಪ್ಪಾ? ದಲಿತರು ಹಾಗೂ ಅಲ್ಪಸಂಖ್ಯಾತರು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿಹಿಂದುಳಿಯುವಂತೆ ಮಾಡಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ.
–ಪ್ರಹ್ಲಾದ ಜೋಶಿ, ಸಚಿವ