Advertisement

ಕೂಲಿ ಕಾರ್ಮಿಕರ ಮಕ್ಕಳ ಬಂಗಾರದ ಬೆಳೆ!

02:03 AM Apr 24, 2022 | Team Udayavani |

ಉಳ್ಳಾಲ: ಉಡುಪಿಯ ತೆಂಕನಿಡಿಯೂರು ಕಾಲೇಜಿನ ಎಂಎ ಇತಿಹಾಸ ವಿಭಾಗದ ವಿದ್ಯಾರ್ಥಿನಿ ಬೆಳ್ಮಣ್‌ ಸಚ್ಚರಿಪೇಟೆಯ ರಕ್ಷಿತಾ ಪೂಜಾರಿ ಎರಡು ಚಿನ್ನ ಮತ್ತು ಮೂರು ನಗದು ಪುರಸ್ಕಾರ ಪಡೆದಿದ್ದಾರೆ.

Advertisement

ಅವರ ತಂದೆ ಉಮೇಶ್‌ ಪೂಜಾರಿ ಮತ್ತು ತಾಯಿ ಲಲಿತಾ ಪೂಜಾರಿ ಕೂಲಿ ಕಾರ್ಮಿಕರು. ತಂಗಿ ನಸಿಂìಗ್‌ ವಿದ್ಯಾರ್ಥಿನಿ. ಕೆಲಸದೊಂದಿಗೆ ಪಿಎಚ್‌ಡಿ ಕನಸು ಕಂಡಿದ್ದಾರೆ. ಪದವಿ ಬಳಿಕ ಪೊಂಪೈ ಕಾಲೇಜಿನ ಮತ್ತು ಸ್ನಾತಕೋತ್ತರ ಪದವಿ ಮಾಡಿದ ತೆಂಕನಿಡಿಯೂರು ಕಾಲೇಜಿನ ಉಪನ್ಯಾಸಕರ ಪ್ರೋತ್ಸಾಹ ಮತ್ತು ಹೆತ್ತವರ ಶ್ರಮದಿಂದ ಇದು ಸಾಧ್ಯವಾಯಿತು ಎನ್ನುತ್ತಾರೆ ರಕ್ಷಿತಾ.

ರಜನಿ ಸಾಧನೆ
ತೆಂಕನಿಡಿಯೂರು ಕಾಲೇಜಿನ ಎಂಎ ಕನ್ನಡ ವಿದ್ಯಾರ್ಥಿನಿ ಕುಂದಾಪುರ ಕಾಳಾವರ ಮೂಲದ ರಜನಿ 1 ಚಿನ್ನ
ಮತ್ತು 6 ನಗದು ಪುರಸ್ಕಾರ ಪಡೆದಿ ದ್ದಾರೆ. ತಂದೆಯಿಲ್ಲದ ರಜನಿಗೆ ತಾಯಿ ಮೀನಾ ಕೂಲಿ ಕೆಲಸ ಮಾಡಿ ಶಿಕ್ಷಣ ನೀಡುತ್ತಿದ್ದಾರೆ.

ಅಣ್ಣ ಮತ್ತು ಇಬ್ಬರು ಮಾವಂದಿರ ಆರ್ಥಿಕ ಬೆಂಬಲದಿಂದ ಸಾಧನೆ ಮಾಡಿರುವ ರಜನಿ ಪದವಿಯಲ್ಲಿ ಸ್ವಲ್ಪವೇ ಅಂತರದಿಂದ ರ್‍ಯಾಂಕ್‌ ತಪ್ಪಿಸಿಕೊಂಡಿದ್ದರು. ಈ ಬಾರಿ ರ್‍ಯಾಂಕ್‌ ಪಡೆಯುವ ಛಲದಿಂದಲೇ ಕಠಿನ ಪರಿಶ್ರಮ ಹಾಕಿದ್ದರು. ಪಿಎಚ್‌ಡಿ ಮಾಡುವುದರೊಂದಿಗೆ ಮುಂದಕ್ಕೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದು ಐಎಎಸ್‌ ಅಥವಾ ಕೆಎಎಸ್‌ ಮಾಡುವ ಕನಸು ಇಟ್ಟುಕೊಂಡಿದ್ದಾರೆ.

ಸಾಧಕಿ ದೀಪಿಕಾ
ತೆಂಕನಿಡಿಯೂರು ಸರಕಾರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ದೀಪಿಕಾ ನಂದಿಕೂರು 2 ಚಿನ್ನ ಮತ್ತು 1 ನಗದು ಪುರಸ್ಕಾರ ಪಡೆದಿದ್ದಾರೆ. ದೀಪಿಕಾ ತಂದೆ ಜಯಕುಮಾರ್‌ ಕೂಲಿ ಕಾರ್ಮಿಕರಾಗಿದ್ದು, ತಾಯಿ ಲಲಿತಾ ಬೀಡಿ ಕಟ್ಟುವ ಕೆಲಸ ಮಾಡುತ್ತಾರೆ. ಬಿಎಡ್‌ ಪದವಿಯೊಂದಿಗೆ ಪಿಎಚ್‌ಡಿ ಮಾಡುವ ಕನಸು ಹೊಂದಿದ್ದು, ಉದ್ಯೋಗ ಮಾಡಿ ಹೆತ್ತವರಿಗೆ ಆಧಾರವಾಗಲು ಬಯಸಿದ್ದಾರೆ.

Advertisement

2 ಚಿನ್ನದ ಪದಕ ವಿಜೇತರು
ಪತ್ರಿಕೋದ್ಯಮ ವಿಭಾಗದಲ್ಲಿ ರ್‍ಯಾಂಕ್‌ ಪಡೆದ ಉಡುಪಿ ಕಟಪಾಡಿ ಮಣಿಪುರ ಗ್ರಾಮದ ಶಾಯಿನ್‌ ಎರಡು ಚಿನ್ನ ಮತ್ತು ಮೂರು ನಗದು ಪುರಸ್ಕಾರ ಪಡೆದಿದ್ದಾರೆ.

ಕೈಗಾರಿಕಾ ರಸಾಯನ ಶಾಸ್ತ್ರದಲ್ಲಿ ವಿಟ್ಲ ಮಂಗಿಲಪದವು ನಿವಾಸಿ ಕ್ರಿಸ್ಟಲ್‌ ಲಿವಿಯಾ ಮಸ್ಕರೇನಸ್‌ ಎರಡು ಚಿನ್ನದ ಪದಕ ಪಡೆದಿದ್ದಾರೆ. ಅನ್ವಯಿಕ ಪ್ರಾಣಿಶಾಸ್ತ್ರದಲ್ಲಿ ಪುತ್ತೂರು ಮೂಲದ ಹರ್ಷಿತ್‌ ಕುಮಾರ್‌ ಎರಡು ಚಿನ್ನದ ಪದಕ, 2 ನಗದು ಬಹುಮಾನ, ಅನ್ವಯಿಕ ರಸಾಯನ ಶಾಸ್ತ್ರದಲ್ಲಿ ನಿತೀಶ್‌ 2 ಚಿನ್ನದ ಪದಕ, ಸೂಕ್ಷ್ಮಾಣು ಜೀವವಿಜ್ಞಾನ ಶಾಸ್ತ್ರದಲ್ಲಿ ಚಿಕ್ಕಅಳುವಾರು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಶರಣ್ಯಾ ಎಂ.ಜಿ. 2 ಚಿನ್ನದ ಪದಕ ಮತ್ತು 1 ನಗದು ಬಹುಮಾನ ಪಡೆದಿದ್ದಾರೆ.

ಪುತ್ತೂರಿನ ಫಿಲೋಮಿನಾ ಕಾಲೇಜಿನ ಸುಶ್ಮಿತಾ ಕೆ. ಎರಡು ಚಿನ್ನದ ಪದಕ, ಎರಡು ನಗದು ಬಹುಮಾನ, ಮಂಗಳೂರು ವಿ.ವಿ.ಯ ಮಾನವಿಕ ಪ್ರಜ್ಞೆ ಮತ್ತು ಯೋಗ ವಿಜ್ಞಾನ ಶ್ರೀಲಕ್ಷ್ಮೀ ಹೆಗ್ಡೆ ಎರಡು ಚಿನ್ನದ ಪದಕ, ಬೆಸೆಂಟ್‌ ಸಂಧ್ಯಾ ಕಾಲೇಜಿನ ಎಂಕಾಂ ವಿಭಾಗದಲ್ಲಿ ಶೀತಲ್‌ ನಾಯಕ್‌ ಕೆ. ಎರಡು ಚಿನ್ನದ ಪದಕ ಪಡೆದಿದ್ದಾರೆ.

ಅಂಧತ್ವ ಕಲಿಕೆಗೆ ಅಡ್ಡಿಯಾಗಲಿಲ್ಲ
ರಾಜ್ಯ ಶಾಸ್ತ್ರದಲ್ಲಿ ಪ್ರಥಮ ರ್‍ಯಾಂಕ್‌ನೊಂದಿಗೆ 8 ನಗದು ಪುರಸ್ಕಾರ ಪಡೆದಿರುವ ಕುಂಪಲದ ಅನ್ವಿತ್‌ ಜಿ. ಸಂಪೂರ್ಣ ಅಂಧತ್ವ ದಿಂದ ಬಳಲುತ್ತಿದ್ದಾರೆ. ಆದರೆ ಇದು ಸಾಧನೆಗೆ ಅಡ್ಡಿಯಾಗಿಲ್ಲ.

ಬಾಲಕನಾಗಿದ್ದಾಗಲೇ ತಂದೆ ಯನ್ನು ಕಳೆದುಕೊಂಡಿದ್ದು, ನರ್ಸ್‌ ಆಗಿರುವ ತಾಯಿ ಯಾದವಿ ಅವರು ಪುತ್ರನ ಸಾಧನೆಗೆ ಕಾರಣಕರ್ತರಾಗಿದ್ದಾರೆ. ಶಿಕ್ಷಕರ ಮತ್ತು ಸಹಪಾಠಿಗಳ ಸಹಕಾರವೂ ಸಾಧನೆಗೆ ಕಾರಣ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next