Advertisement

ರಾಜಕೀಯ ಪ್ರೇರಿತ ದೂರು: ಆಕ್ರೋಶ

05:02 PM Jun 07, 2022 | Team Udayavani |

ತುಮಕೂರು: ಕುವೆಂಪು, ಬಸವಣ್ಣ ಅವರನ್ನು ಪಠ್ಯ ಪುಸ್ತಕದಲ್ಲಿ ಅವಹೇಳನ ಮಾಡಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರ ಹಕ್ಕು. ಆದರೆ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳ ಮೇಲೆ ಜಾಮೀನು ರಹಿತ ಪ್ರಕರಣ ದಾಖಲಿಸಿರುವುದನ್ನು ರಾಷ್ಟ್ರೀಯ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ತೀವ್ರವಾಗಿ ಖಂಡಿಸಿದರು.

Advertisement

ತುಮಕೂರು ಜಿಲ್ಲಾ ಕಾರಾಗೃಹದಲ್ಲಿರುವ ಎನ್‌ ಎಸ್‌ಯುಐ ಕಾರ್ಯಕರ್ತರನ್ನು ಸೋಮವಾರ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಿದ 24 ಮಂದಿ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಪ್ರತಿಭಟಿಸಿದ ಎನ್‌ಎಸ್‌ಯುಐ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವ ವಿಡಿಯೋಗಳಿದ್ದರೂ ಸಹ ಎನ್‌ಎಸ್‌ಯುಐ ಕಾರ್ಯ ಕರ್ತರ ಮೇಲೆಯೇ ಹಲ್ಲೆ ಪ್ರಕರಣ ದಾಖಲಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.

ರಾಜಕೀಯ ಪ್ರೇರಿತ ದೂರು: ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಿ, ಚೆಡ್ಡಿಗೆ ಬೆಂಕಿ ಹಚ್ಚಲು ಹೋದಾಗ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಮನೆಗೆ ಬೆಂಕಿ ಹಚ್ಚಲು ಮುಂದಾಗಿದ್ದಾರೆ ಎಂದು ರಾಜಕೀಯ ಪ್ರೇರಿತ ದೂರು ದಾಖಲಿಸಿದ್ದಾರೆ. ಎನ್‌ಎಸ್‌ಯುಐ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ವಿಡಿಯೋವನ್ನು ಎಡಿಟ್‌ ಮಾಡಿ ಹಲ್ಲೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಎನ್‌ ಎಸ್‌ಯುಐನ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಪ್ರತಿಯೊಬ್ಬರ ಮೇಲೆ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.

 ಸಂಘಟಿತ ಹೋರಾಟ: ವಿದ್ಯಾರ್ಥಿಗಳ ಮೇಲೆ ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸುವಂತಹ ತಪ್ಪನ್ನು ಅವರೇನು ಮಾಡಿದ್ದಾರೆ? ಎಂದು ಪ್ರಶ್ನಿಸಿದ ಅವರು, ಶಾಂತಿಯುತ ಪ್ರತಿಭಟನೆ ನಡೆಸಿದವರ ಮೇಲೆ ಪ್ರಕರಣ ದಾಖಲಿಸಿ, ಜೈಲಿನಲ್ಲಿ ಇರುವಂತೆ ಮಾಡಿದ್ದಾರೆ. ಎನ್‌ಎಸ್‌ಐಯು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವವರನ್ನು ಯಾವುದೇ ಕಾರಣಕ್ಕೂ ಹೊರಗೆ ಇರಬಾರದು. ಕಾಂಗ್ರೆಸ್‌ ವಕೀಲರ ಘಟಕ, ಯುವ ಕಾಂಗ್ರೆಸ್‌, ಕಾಂಗ್ರೆಸ್‌ ಪಕ್ಷ ಸಂಘಟಿತ ಹೋರಾಟ ಮಾಡಲಿದೆ ಎಂದು ತಿಳಿಸಿದರು.

ಈ ವೇಳೆ ಮುಖಂಡರಾದ ಎಂ.ವಿ. ರಾಘವೇಂದ್ರಸ್ವಾಮಿ, ಗ್ರಾಪಂ ಸದಸ್ಯ ಅಮಲಾಪುರ ದೇವರಾಜು, ಹರಿಪ್ರಸಾದ್‌, ಮೋಹನ್‌ ಪರಮೇಶ್‌, ರಾಜೇಶ್‌ ದೊಡ್ಮನೆ, ರಾಕೇಶ್‌, ನಿಖೀಲ್‌ ರಾಜಣ್ಣ, ನೂರ್‌ ಹುಸೇನ್‌, ದೀಪಕ್‌ ಎಚ್‌.ಎಸ್‌ ಸೇರಿದಂತೆ ಇತರರಿದ್ದರು.

Advertisement

ಚಡ್ಡಿ  ಬಿಜೆಪಿ ಸ್ವತ್ತಲ್ಲ: ಆರ್‌.ರಾಜೇಂದ್ರ : ವಿಧಾನ ಪರಿಷತ್‌ ಸದಸ್ಯ ಆರ್‌.ರಾಜೇಂದ್ರ ಮಾತನಾಡಿ, ದೇಶದಲ್ಲಿ ಇರುವವರೆಲ್ಲರೂ ಚೆಡ್ಡಿ ಹಾಕುತ್ತಾರೆ. ಅದೇನು ಬಿಜೆಪಿ ಸ್ವತ್ತಲ್ಲ, ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಎನ್‌ಎಸ್‌ಯುಐ ಕಾರ್ಯಕರ್ತರ ಮೇಲೆ ಇಲ್ಲಸಲ್ಲದ ಪ್ರಕರಣಗಳನ್ನು ಹಾಕಲಾಗಿದೆ. ಅವರೇನು ಪೆಟ್ರೋಲ್‌, ಕೆರೋಸಿನ್‌ ಅನ್ನು ಪ್ರತಿಭಟನೆಯಲ್ಲಿ ಬಳಸಿದ್ದರೆ ಎಂದು ಪೊಲೀಸರನ್ನು ಪ್ರಶ್ನಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಂತೆ ಚೆಡ್ಡಿ ಸುಡುವ ಅಭಿಯಾನ ಪ್ರಾರಂಭಿಸುವುದಾಗಿ ಹೇಳಿದರು. ಸಂಸದ ತೇಜಸ್ವಿ ಸೂರ್ಯ ದೆಹಲಿ ಸಿಎಂ ಮನೆ ಗೇಟ್‌ ಮುರಿದು, ಸಿಸಿಟಿವಿ ಹೊಡೆದು ಹಾಕಿದ್ದರು. ಅವರ ಮೇಲೆ ಯಾವ ಪ್ರಕರಣ ದಾಖಲಾಗಿದೆ, ಅವರಿಗೊಂದು ಕಾನೂನು, ನಮಗೊಂದು ಕಾನೂನಾ ಎಂದು ಪ್ರಶ್ನಿಸಿದರು.

ಎನ್‌ಎಸ್‌ಯುಐ ಕಾರ್ಯಕರ್ತರ ಮೇಲೆ ಬಿಜೆಪಿ ಯುವ ಮೋರ್ಚಾ ಮತ್ತು ಇಬ್ಬರು ರೌಡಿಶೀಟರ್‌ ಗಳು ಹಲ್ಲೆ ಮಾಡಿದ್ದಾರೆ. ಪೊಲೀಸರು ಎಬಿವಿಪಿಯ ಕೆಲವರ ಮೇಲೆ ಎಫ್ಐಆರ್‌ ಹಾಕಿ ಕೈ ತೊಳೆದುಕೊಂಡಿದ್ದಾರೆ. ಹಲ್ಲೆ ಮಾಡಿರುವ ಎಲ್ಲರ ಮೇಲೆಯೂ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next